ಭಾರತದ ಮಹಿಳಾ ಖೋಖೋ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನವದೆಹಲಿಯಲ್ಲಿ ರವಿವಾರ ನಡೆದ Kho Kho World Cup 2025ನಲ್ಲಿ ಮಹಿಳಾ ತಂಡ ಅಭೂತಪೂರ್ವ ಗೆಲವು ಸಾಧಿಸಿದೆ. ಈ ಮೂಲಕ World Champion ಆಗಿದೆ. ಈ ಮಹಿಳಾ ತಂಡದಲ್ಲಿ ಕರ್ನಾಟಕದ ಕ್ರೀಡಾಪಟು ಭಾಗವಹಿಸಿದ್ದು ಹೆಮ್ಮೆಯ ಸಂಗತಿ. ತಮ್ಮೆಲ್ಲ ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು. ಸವಾಲುಗಳನ್ನು ಎದುರಿಸಿ ಶ್ರಮ ಶ್ರದ್ದೆ ಪರಿಶ್ರಮದಿಂದ ಅಚಲ ನಿರ್ಧಾರದೊಂದಿಗೆ ಅಡ್ಡಿ ಆತಂಕಗಳನ್ನು ಮೆಟ್ಟಿ ತನ್ನ ಗುರಿಯತ್ತ ಸಾಗಿದ ಮೈಸೂರಿನ ಹೆಮ್ಮೆಯ ಖೋ ಖೋ ಆಟಗಾರ್ತಿ, ಚಾಂಪಿಯನ್ ಬಿ. ಚೈತ್ರಾ. ಇವರು ನಡೆದು ಬಂದ ಹಾದಿ ಇಲ್ಲಿದೆ
ಬಿ. ಚೈತ್ರಾ ನವದೆಹಲಿಯಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ಖೋ ಖೋ ತಂಡವನ್ನು ಪ್ರತಿನಿಧಿಸಿ ಅದ್ಭುತ ಪ್ರದರ್ಶನ ನೀಡಿ ತಂಡ ಚಾಂಪಿಯನ್ ಆಗಲು ಅಮೋಘ ಕಾಣಿಕೆ ನೀಡಿದ್ದಾರೆ. ಖೋ ಖೋ ವಿಶ್ವಕಪ್‌ನಲ್ಲಿ ಭಾರತೀಯ ಮಹಿಳಾ ತಂಡವನ್ನು ಪ್ರತಿನಿಧಿಸಿದ ಮೈಸೂರು ಜಿಲ್ಲೆಯ ಮೊದಲಿಗರು ಎಂಬ ಹೆಗ್ಗಳಿಕೆಗೆ ಚೈತ್ರಾ ಪಾತ್ರರಾಗಿದ್ದಾರೆ. ರಾಷ್ಟ್ರೀಯ ಮಹಿಳಾ ತಂಡಕ್ಕೆ ಆಯ್ಕೆಯಾದ ದಕ್ಷಿಣ ಭಾರತದಿಂದ ಏಕೈಕ ಆಟಗಾರ್ತಿ ಕೂಡ ಆಗಿದ್ದಾರೆ.
ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ ಚೈತ್ರಾ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಅನರ್ಘ್ಯ ರತ್ನ. ಚೈತ್ರಾ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ಕುರುಬೂರು ಗ್ರಾಮದವರು. ಗ್ರಾಮದ ರೈತ ದಂಪತಿ ಬಸವಣ್ಣ ಮತ್ತು ನಾಗರತ್ನ ಅವರ ಹೆಮ್ಮೆಯ ಪುತ್ರಿ. ತನ್ನ ಊರಲ್ಲಿ ಖೋ ಖೋ ಆಡಲು ಪ್ರಾರಂಭಿಸಿದ ಚೈತ್ರಾ ಇಂದು ಅಪರೂಪದ ಸಾಧನೆ ಮಾಡಿ ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕ್ರೀಡೆಯ ಬಗೆಗಿನ ಅವರ ಸಮರ್ಪಣೆ ಅವರನ್ನು ರಾಜ್ಯ ಮತ್ತು ರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸುವಂತೆ ಮಾಡಿ ಎಲ್ಲರಿಗೂ ಸ್ಪೂರ್ತಿಯಾಗಿದೆ.
ಚೈತ್ರಾರ ಕುಟುಂಬ ಅವರ ಶಾಲಾ ಶುಲ್ಕವನ್ನು ಸಹ ಪಾವತಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿತ್ತು. ಆದ ಕಾರಣ ಆಕೆಯನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಆದರೂ ಅವರ ಕುಟುಂಬದ ಸ್ನೇಹಿತರೊಬ್ಬರು ಚೈತ್ರಾರ ಬುದ್ಧಿವಂತಿಕೆ, ಆಸಕ್ತಿ ಗಮನಿಸಿ ಅವರನ್ನು ಖಾಸಗಿ ಶಾಲೆಗೆ ಸೇರಿಸಲು ಸಲಹೆ ನೀಡಿದರು. ಕಷ್ಟದ ನಡುವೆಯೂ ಮಗಳ ಭವಿಷ್ಯಕ್ಕಾಗಿ ಪೋಷಕರು ಚೈತ್ರರನ್ನು ಕುರುಬೂರಿನ ವಿದ್ಯಾದರ್ಶಿನಿ ಶಾಲೆಗೆ ಸೇರಿಸಿದರು.
ಚೈತ್ರಾಗೆ ಖೊ ಖೊ ಆಟ ಆಡಲು ಆಕೆಯ ಅಣ್ಣ ಬಿ. ಚೇತನ್ ಸ್ಫೂರ್ತಿ. ಅಣ್ಣನಿಂದ ಸ್ಪೂರ್ತಿ ಸಲಹೆ ಪಡೆದ ಚೈತ್ರಾ ಖೋ ಖೋ ಆಟದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಮತ್ತು ತರಬೇತಿ ತರಗತಿಗಳಿಗೆ ಸೇರಿ ಆಟದ ಪರಿಪಕ್ವತೆಯ್ನು ಪಡೆದುಕೊಂಡರು. ಅವರಿಗೆ ವಿದ್ಯಾದರ್ಶಿನಿ ಶಾಲೆಯ ಗಣಿತ ಶಿಕ್ಷಕ ಮಂಜುನಾಥ್ ಗುರುವಾದರು. ಮಂಜುನಾಥ್ ಖೋ ಖೋ ತರಬೇತಿ ಸಹ ನೀಡುತ್ತಿದ್ದರು. ಚೈತ್ರಾರ ಸಾಮರ್ಥ್ಯವನ್ನು ಗಮನಿಸಿದ ಮಂಜುನಾಥ್ ಆಕೆಗೆ ಸರಿಯಾದ ಮಾರ್ಗದರ್ಶನ ಮಾಡಿದರು. ಶ್ರಮದಿಂದ ಆಟದತ್ತ ಗಮನಹರಿಸುವಂತೆ ನೋಡಿಕೊಂಡರು, ಪರಿಣಾಮವಾಗಿ ಚೈತ್ರಾ ಇಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ.
ಇಂದಿನ ಚೈತ್ರಾ ಸಾಧನೆಗೆ ಮುಖ್ಯ ಕಾರಣ ಆಕೆಯ ತರಬೇತುದಾರರಾದ ಮಂಜುನಾಥ್. ಟಿ. ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದ ವಿದ್ಯಾದರ್ಶಿನಿ ಶಾಲೆಯಲ್ಲಿ ಮಂಜುನಾಥ್ ಅರೆಕಾಲಿಕ ಖೋ ಖೋ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಜುನಾಥ್ ಅವರ 15 ವರ್ಷಗಳ ಪರಿಶ್ರಮಕ್ಕೆ ಈಗ ಫಲಿತಾಂಶ ಬಂದಿದೆ. ಚೈತ್ರಾ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಬೇಕು, ಉತ್ತಮ ಸಾಧನೆ ಮಾಡಬೇಕೆಂದು ಅವರ ಆಸೆಯಾಗಿತ್ತು. ಗುರುವಿನ ಆಸೆಯನ್ನು ಈಡೇರಿಸಿ ಚೈತ್ರಾ ಇಂದು ಅವರ ಕನಸು ನನಸು ಮಾಡಿದ್ದಾರೆ.
ಚೈತ್ರ ಪ್ರಸ್ತುತ ಮಂಡ್ಯ ಜಿಲ್ಲೆಯ ಪಾಂಡವಪುರದ ಶ್ರೀ ಶಂಭುಲಿಂಗೇಶ್ವರ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಪಿ.ಇಡಿ (ದೈಹಿಕ ಶಿಕ್ಷಣದಲ್ಲಿ ಪದವಿ) ಓದುತ್ತಿದ್ದಾರೆ. ಇದಕ್ಕೂ ಮೊದಲು, ಅವರು ಟಿ. ನರಸೀಪುರದ ವಿದ್ಯೋದಯ ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಮತ್ತು ಟಿ. ನರಸೀಪುರದ ಪಿಆರ್‌ಎಂ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
ಚೈತ್ರಾ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಿಂದೆ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಖೋ ಖೋ ಚಾಂಪಿಯನ್‌ಶಿಪ್ -2022 ರಲ್ಲಿ ಚಿನ್ನದ ಪದಕ ಗೆದ್ದ ಮೈಸೂರು ವಿಶ್ವವಿದ್ಯಾಲಯದ ಮಹಿಳಾ ಖೋ ಖೋ ತಂಡದ ಸದಸ್ಯರಾಗಿದ್ದರು.
ಖೋ ಖೋ ಫೆಡರೇಶನ್ ಆಫ್ ಇಂಡಿಯಾ (ಕೆಕೆಎಫ್‌ಐ) ಸ್ಥಾಪಿಸಿದ ಇಲಾ ಪ್ರಶಸ್ತಿ - 2017 (ಅತ್ಯುತ್ತಮ ಸಬ್-ಜೂನಿಯರ್ ಆಟಗಾರ್ತಿ) ಪುರಸ್ಕೃತರಾಗಿದ್ದಾರೆ. ಚೈತ್ರ, ಹಿರಿಯ ರಾಷ್ಟ್ರೀಯ ಪಂದ್ಯಾವಳಿ, ಖೇಲೋ ಇಂಡಿಯಾ ಚಾಂಪಿಯನ್‌ಶಿಪ್ ಮತ್ತು ಮೈಸೂರು ವಿಶ್ವವಿದ್ಯಾಲಯದಲ್ಲಿ (ಎರಡು ಬಾರಿ) ರಾಜ್ಯವನ್ನು ಪ್ರತಿನಿಧಿಸಿದ್ದರು. ಚೈತ್ರಾ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಖೋ ಖೋ ಪಂದ್ಯಾವಳಿಗೆ ಅರ್ಹತೆ ಪಡೆದ ಮಂಡ್ಯ ವಿಶ್ವವಿದ್ಯಾಲಯದ ಮಹಿಳಾ ಖೋ ಖೋ ತಂಡದ ಭಾಗವೂ ಆಗಿದ್ದರು.
ಚೈತ್ರಾ ತಾಯಿ ನಾಗರತ್ನ ಅವರು ತಮ್ಮ ಮಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಪ್ರೋತ್ಸಾಹಿಸಿ ತರಬೇತಿ ನೀಡಿದ್ದಕ್ಕಾಗಿ ಚೈತ್ರ ಅವರ ತರಬೇತುದಾರ ಮಂಜುನಾಥ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಚೈತ್ರ ಮಗುವಾಗಿದ್ದಾಗ ನಾವು ಆರ್ಥಿಕವಾಗಿ ಸಬಲರಾಗಿರಲಿಲ್ಲ. ವಾಸ್ತವವಾಗಿ ನಾವು ಅವಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದೇವು. ಆದರೆ ಹಳ್ಳಿಯ ಕೆಲವು ಜನರು ಚೈತ್ರಾಳನ್ನು ಖಾಸಗಿ ಶಾಲೆಗೆ ಸೇರಿಸಲು ಒತ್ತಾಯಿಸಿದ್ದರು. ಆ ಕಾರಣಕ್ಕೆ ನಾವು ಅವಳನ್ನು ವಿದ್ಯಾದರ್ಶಿನಿ ಶಾಲೆಗೆ ಸೇರಿಸಿದೆವು. ಇದರಿಂದ ನಮ್ಮ ಮಗಳು ಈ ಗಮನಾರ್ಹ ಸಾಧನೆಯನ್ನು ಸಾಧಿಸಲು ಸಾಧ್ಯವಾಯಿತು. ನಮಗೆ ತುಂಬಾ ಸಂತೋಷವಾಗಿದೆ. ಮಗಳ ಸಾಧನೆಗೆ ಸಹಕರಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದ್ದಾರೆ.
ಮೈಸೂರಿನ ಚೈತ್ರಾ ನಾಡು, ದೇಶದ ಕೀರ್ತಿಯನ್ನು ಮುಗಿಲೆತ್ತೆಕ್ಕೆ ಹಾರಿಸಿದ್ದಾರೆ. ಅಪ್ಪಟ ಗ್ರಾಮೀಣ ಪ್ರತಿಭೆ ದೇಶದ ಎಲ್ಲ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೂ ಸ್ಪೂರ್ತಿಯಾಗಿದ್ದಾರೆ.
Published On - 7:42 am, Mon, 20 January 25