ಬೆಂಗಳೂರು: ಐಷಾರಾಮಿ ಹೊಟೇಲ್‌ನಲ್ಲಿ ಕೊಠಡಿ ಬುಕ್ ಮಾಡಿ ಜೂಜಾಟ ಆಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಖಚಿತ ಮಾಹಿತಿ ಆಧರಿಸಿ 6 ಜೂಜುಕೋರರನ್ನು ಬಂಧಿಸಲಾಗಿದೆ. ಉದ್ಯಮಿ, ಕ್ಯಾಟರಿಂಗ್ ಉದ್ಯಮಿ, ನಿವೃತ್ತ ಸರ್ಕಾರಿ ನೌಕರ ಸೇರಿ 6 ಜೂಜುಕೋರರನ್ನು ಬಂಧಿಸಿದ್ದೇವೆ ಎಂದು ಬೆಂಗಳೂರು ನಗರ ಅಪರಾಧ ವಿಭಾಗದ ಡಿಸಿಪಿ ಶರಣಪ್ಪ ಹೇಳಿಕೆ ನೀಡಿದ್ದಾರೆ. ಬಂಧಿತ ಆರೋಪಿಗಳ ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದೇವೆ. ಪೊಲೀಸರು ಬಂದ್ರೆ ಮೊದಲೇ ಗೊತ್ತಾಗುತ್ತೆಂದು ಐಷಾರಾಮಿ ಹೋಟೆಲ್‌ಗಳಲ್ಲಿ ರೂಂ ಬುಕ್ ಮಾಡಿ ಜೂಜಾಟ ಆಡುತ್ತಿದ್ದರು. ಇಲ್ಲಿ ಹೋಟೆಲ್ ಮಾಲೀಕರ ಪಾತ್ರ ಕಂಡುಬಂದಿಲ್ಲ ಎಂದು ಡಿಸಿಪಿ ಶರಣಪ್ಪ ಹೇಳಿದ್ದಾರೆ.
ಮತ್ತೊಂದೆಡೆ, ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಹೈಟೆಕ್ ಗ್ಲಾಂಬ್ಲಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದೆ. 6 ಜನರ ಬಂಧನ ಮಾಡಲಾಗಿದ್ದು, 20.71 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ.
ಇತ್ತ, ವಿವಿಧ ವೃಂದಗಳ ನೇಮಕಾತಿ ಎಂದು ನಕಲಿ ಜ್ಞಾಪನಾ ಪತ್ರ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನಕಲಿ ಪತ್ರ ಹರಿದಾಡ್ತಿರುವ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸ್ಪಷ್ಟನೆ ನೀಡಲಾಗಿದೆ. ಎಲ್ಲ ನೇಮಕಾತಿಗಳಿಗೆ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸುತ್ತೇವೆ. ನಕಲಿ ಪತ್ರಗಳ ಬಗ್ಗೆ ಎಚ್ಚರವಾಗಿರಿ ಎಂದು ಹೇಳಿದ್ದಾರೆ.
ಬೆಂಗಳೂರು: ಚಲಿಸುತ್ತಿದ್ದ ಕ್ಯಾಂಟರ್ಗೆ ಹಿಂಬದಿಯಿಂದ ಕಾರು ಡಿಕ್ಕಿ ಆದ ದುರ್ಘಟನೆ ಬೆಂಗಳೂರಿನ ನಾಗರಬಾವಿ ವೃತ್ತದ ಬಳಿ ನಡೆದಿದೆ. ರಸ್ತೆ ತಿರುವು ತೆಗೆದುಕೊಳ್ಳುವಾಗ ಕ್ಯಾಂಟರಿಗೆ ಕಾರು ಡಿಕ್ಕಿ ಆಗಿ ಅಪಘಾತ ಸಂಭವಿಸಿದೆ. ಘಟನೆ ಬಳಿಕ ಕಾರು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ ಎಂದು ತಿಳಿದುಬಂದಿದೆ. ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಶೃಂಗೇರಿ: ಶೃಂಗೇರಿಯಲ್ಲಿ ಬೋಗಸ್ ಹಕ್ಕು ಪತ್ರ ವಿತರಣೆ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ತನಿಖೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರ ವಿರುದ್ಧ ಕೇಸ್ ಹಾಕುತ್ತೇವೆ. ಉಪವಿಭಾಗಾಧಿಕಾರಿ ನಾಗರಾಜ್ ನೇತೃತ್ವದಲ್ಲಿ ತನಿಖೆ ನಡೆಸುತ್ತೇವೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಹೇಳಿದ್ದಾರೆ. ಪ್ರಾಥಮಿಕ ವರದಿ ಆಧಾರದ ಮೇಲೆ ನಾಲ್ವರು ಅಮಾನತು ಮಾಡಲಾಗಿದೆ. ಅಮಾನತಾದ ತಹಶೀಲ್ದಾರ್ ಅಂಬುಜಾ ವಿರುದ್ಧವೂ ತನಿಖೆ ನಡೆಸಲಾಗಿದೆ. ಈ ಪ್ರಕರಣದಿಂದಾಗಿ ಜನರಿಗೆ ತೊಂದರೆ ಉಂಟಾಗಿದೆ. ಅದನ್ನು ಸರಿಪಡಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ತಿಳಿಸಿದ್ದಾರೆ.
ಶಿವಮೊಗ್ಗ: ಸಾಗರ ತಾಲೂಕಿನ ಮಾರಲಗೊಡು ಗ್ರಾಮದಲ್ಲಿ ವಿಳಾಸ ಕೇಳುವ ನೆಪದಲ್ಲಿ ಬಂದು ವಿದ್ಯಾರ್ಥಿನಿ ಕೈಯಲ್ಲಿದ್ದ ಫೋನ್ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ಇಲ್ಲಿನ ಗ್ರಾ.ಪಂ. ಸದಸ್ಯೆ ಸೋಮಾವತಿ ಪುತ್ರ ರವಿ ಮೊಬೈಲ್ ಕಿತ್ತುಕೊಂಡು ಓಡಿರುವ ಬಗ್ಗೆ ತಿಳಿದುಬಂದಿದೆ. ಆನ್ಲೈನ್ ಕ್ಲಾಸ್ಗಾಗಿ ನೆಟ್ವರ್ಕ್ ಸಿಗದೇ ಹೊರಗಡೆ ಬಂದಿದ್ದ ವೇಳೆ ಫೋನ್ ಕಿತ್ತುಕೊಂಡು ರವಿ ಪರಾರಿಯಾಗಿದ್ದಾನೆ. ಬೈಕ್ ಸ್ಥಳದಲ್ಲೇ ಬಿಟ್ಟು ಫೋನ್ ಕಿತ್ತುಕೊಂಡು ರವಿ ಪರಾರಿ ಆಗಿದ್ದಾನೆ ಎಂದು ತಿಳಿದುಬಂದಿದೆ.
ಯಾದಗಿರಿ: ಆಸ್ತಿ ಕೇಳಲು ಬಂದಿದ್ದ ವೃದ್ಧೆಗೆ ವಿಷ ಕುಡಿಸಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಡಿಸಿ ಕಚೇರಿ ಮುಂದೆ ಶಾಂತಾಬಾಯಿ (60) ಶವವಿಟ್ಟು ಸಂಬಂಧಿಕರು ಪ್ರತಿಭಟನೆಗೆ ಯತ್ನಿಸಿದ್ದಾರೆ. ಪ್ರತಿಭಟನೆ ನಡೆಸದಂತೆ ಗ್ರಾಮಾಂತರ ಠಾಣೆ ಪೊಲೀಸರು ತಡೆದಿದ್ದಾರೆ. ಯಾದಗಿರಿ ತಾಲೂಕಿನ ಕುರಕುಂಬಳ ತಾಂಡಾದಲ್ಲಿ ನಿನ್ನೆ ಆಸ್ತಿ ಕೇಳಲು ಹೋಗಿದ್ದಾಗ ಘಟನೆ ನಡೆದಿತ್ತು.
ಬೆಳಗಾವಿ: ನಕಲಿ RTPCR ಟೆಸ್ಟ್ ವರದಿ ತಯಾರಿಸಿ ರಾಜ್ಯದ ಗಡಿಯೊಳಗೆ ಎಂಟ್ರಿ ಮಾಡಿಸುತ್ತಿದ್ದವರನ್ನ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ನಡೆದಿದೆ. ಘಟನೆ ಸಂಬಂಧ ಕೊಗನಳ್ಳಿ ಚೆಕ್‌ಪೊಸ್ಟ್‌ನಲ್ಲಿ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ. 9 ಆರೋಪಿಗಳ ಮೇಲೆ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆಯಡಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಹೆಂಡತಿ ಮೇಲೆ ಕುದಿಯುವ ಎಣ್ಣೆ ಸುರಿದು ಗಂಡನಿಂದ ಕೊಲೆ ಯತ್ನ; ಅಡ್ಡ ಬಂದ ಮಗಳ ಮೇಲೂ ಹಲ್ಲೆ