ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಸರ್ಕಾರದಿಂದ ವಸ್ತ್ರಸಂಹಿತೆ ವಿವಾದ: ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ
ಚುನಾವಣೆಯಲ್ಲಿ ಜನರ ವಿಷಯ ಬೇರೆಡೆ ಸೆಳೆಯಲೆಂದೇ ಹಿಜಾಬ್ನಂಥ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಕರಾವಳಿ ಕರ್ನಾಟಕವು ಸಂಘಪರಿವಾರದ ಪ್ರಯೋಗಶಾಲೆಯಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಚುನಾವಣೆ ಹತ್ತಿರಕ್ಕೆ ಬಂದಂತೆ ಸಮವಸ್ತ್ರ ಸಂಹಿತೆ, ಹಿಜಾಬ್ (Hijab), ಕೇಸರಿ ಶಾಲಿನಂಥ (Saffron Shawl) ವಿವಾದಗಳು ಗರಿಗೆದರುತ್ತವೆ. ಇಂಥ ವಿಷಯಗಳ ಬಗ್ಗೆ ಕಾವೇರಿದ ಚರ್ಚೆಗಳೂ ಆರಂಭವಾಗುತ್ತವೆ. ಈ ಸರ್ಕಾರದಿಂದ ಜನರಿಗೆ ಒಂದು ಮನೆ ಸಿಕ್ಕಿಲ್ಲ, ಬೇರೆ ಏನೂ ಕೆಲಸ ಮಾಡಿಲ್ಲ. ಜನರ ಎದುರು ಏನು ತಾನೆ ಹೇಳಲು ಸಾಧ್ಯ? ಚುನಾವಣೆಯಲ್ಲಿ ಜನರ ವಿಷಯ ಬೇರೆಡೆ ಸೆಳೆಯಲೆಂದೇ ಹಿಜಾಬ್ನಂಥ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಕರಾವಳಿ ಕರ್ನಾಟಕವು ಸಂಘಪರಿವಾರದ ಪ್ರಯೋಗಶಾಲೆಯಾಗಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramiah) ಹೇಳಿದರು. ಕರ್ನಾಟಕದಲ್ಲಿ ಉದ್ಭವಿಸಿರುವ ಹಿಜಾಬ್-ಕೇಸರಿ ಶಾಲು ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಮಕ್ಕಳ ಶಿಕ್ಷಣ ಅರ್ಧಕ್ಕೆ ಮೊಟಕಾಗಬಾರದು. ಸರ್ಕಾರ ಅಂಥ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸಮವಸ್ತ್ರ ಕಡ್ಡಾಯ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ. ಇದು ಸಂವಿಧಾನದಲ್ಲಿ ನೀಡಿರುವ ಮೂಲಭೂತ ಹಕ್ಕಾಗಿದೆ. ವೈಯಕ್ತಿಕವಾಗಿ ಹೇಳಬೇಕಾದರೆ ಇದು ಮಕ್ಕಳ ಮೂಲಭೂತ ಹಕ್ಕು. ಇನ್ನು ಈ ವಿವಾದಕ್ಕೆ ಸಂಬಂಧಪಟ್ಟಂತೆ ಕುಂದಾಪುರದ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ಗೇಟ್ ಬಂದ್ ಮಾಡಿದ್ದು, ಸಂವಿಧಾನ ವಿರೋಧ. ಮಕ್ಕಳ ವಿದ್ಯಾಭ್ಯಾಸವನ್ನು ತಡೆಗಟ್ಟುವ ಪ್ರಯತ್ನ ನಡೆಯುತ್ತಿದೆ. ಹಿಜಾಬ್ ವಿವಾದವನ್ನು ಬಿಜೆಪಿಗರು ದೊಡ್ಡದು ಮಾಡಿಸ್ತಿದ್ದಾರೆ. ಸಂಘಪರಿವಾರದ ಪ್ರಯೋಗಾಲಯವೇ ಕರಾವಳಿ. ಸರ್ಕಾರ ಇದಕ್ಕೆಲ್ಲ ಕುಮ್ಮಕ್ಕು ನೀಡಬಾರದು. ಈ ಪ್ರಾಂಶುಪಾಲರನ್ನು ಮೊದಲು ತೆಗೆಯಬೇಕು. ಶಿಕ್ಷಣದಲ್ಲಿ ರಾಜಕೀಯ ಬೆರಸಬಾರದು ಎಂದು ಹಿಜಾಬ್ ವಿವಾದದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಸುವುದೇ ತಪ್ಪು. ಇದು ಬಹಿರಂಗ ಚರ್ಚೆಯ ವಿಚಾರ ಆಗಬಾರದು. ಕರ್ನಾಟಕದಲ್ಲಿ ಈ ಮೊದಲಿನಿಂದಲೂ ಚಾಲ್ತಿಯಲ್ಲಿರುವ ಸಂಸ್ಕೃತಿ ಯಾವ ರೀತಿಯದ್ದು ಎನ್ನುವ ಬಗ್ಗೆ ನಾವು ಚರ್ಚಿಸಬೇಕಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಪ್ರಸ್ತುತ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಇಂಥ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿ ನಾನು ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿಲ್ಲ. ಯಾರೂ ಬಹಿರಂಗವಾಗಿ ಚರ್ಚಿಸಬಾರದೆಂದು ಸೂಚನೆ ನೀಡುತ್ತೇನೆ ಎಂದು ಹೇಳಿದರು.
ರಾಜಕೀಯ ಉದ್ದೇಶ: ಹಾಲಪ್ಪ ಆಚಾರ್ ವಿಷಾದ ರಾಮನಗರ: ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್, ಕೇಸರಿ ಶಾಲು ವಿವಾದವನ್ನು ಕೆಲವರು ರಾಜಕೀಯ ಉದ್ದೇಶಗಳಿಗೆ ಬಳಸುತ್ತಿದ್ದಾರೆ ಎಂದು ರಾಮನಗರದಲ್ಲಿ ಸಚಿವ ಹಾಲಪ್ಪ ಆಚಾರ್ ಪ್ರತಿಕ್ರಿಯಿಸಿದರು. ಒಂದು ಗುಂಪು ಒಂದು ರೀತಿಯಾಗಿ ಮಾಡಿದರೆ, ಇನ್ನೊಂದು ಗುಂಪು ಮತ್ತೊಂದು ರೀತಿಯಾಗಿ ಮಾಡುತ್ತಿದೆ. ಇಂಥ ಬೆಳವಣಿಗೆಗಳನ್ನು ಒಪ್ಪಲು ಸಾಧ್ಯವಿಲ್ಲ. ಈ ಬೆಳವಣಿಗೆಯನ್ನು ಕೆಲವರು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ವಿಷಾದಿಸಿದರು. ಇದು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿಚಾರ. ಶಿಕ್ಷಣ ಇಲಾಖೆ ಈ ಬಗ್ಗೆ ಕ್ರಮವಹಿಸಲಿದೆ. ಈ ಕುರಿತು ಮುಖ್ಯಮಂತ್ರಿ ಸಹ ಗಮನಹರಿಸುತ್ತಾರೆ ಎಂದರು.
ಇದನ್ನೂ ಓದಿ: Breaking: ಕೇಸರಿ ಶಾಲು, ಹಿಜಾಬ್ ಧರಿಸಲು ಇಲ್ಲ ಅವಕಾಶ: ಕರ್ನಾಟಕ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ ಇದನ್ನೂ ಓದಿ: ಹಿಜಾಬ್ ವಿವಾದವನ್ನು ಬಿಜೆಪಿಗರು ದೊಡ್ಡದು ಮಾಡಿಸ್ತಿದ್ದಾರೆ: ಮಾಜಿ ಸಿಎಂ ಸಿದ್ದರಾಮಯ್ಯ