
ಬೆಂಗಳೂರು, ನವೆಂಬರ್ 3: ಮನೆಕೆಲಸದಾಕೆಯೊಬ್ಬಳು ಪುಟ್ಟ ಶ್ವಾನವೊಂದನ್ನು ಬಟ್ಟೆ ಒಗೆಯುವಂತೆ ಎತ್ತಿ ನೆಲಕ್ಕೆ ಬಡಿದು ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ (Bengaluru) ಬಾಗಲೂರಿನ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದೆ. ಪುಟ್ಟ ನಾಯಿಮರಿಯನ್ನು ನೋಡಿಕೊಳ್ಳುವುದಕ್ಕೆಂದೇ ಕೆಲಸಕ್ಕಿದ್ದ ಮಹಿಳೆ ಅಮಾನವೀಯ ಕೃತ್ಯ ಎಸಗಿದ್ದು, ಆಕೆಯ ವಿರುದ್ಧ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಎಂಬಿಎ ವಿದ್ಯಾರ್ಥಿನಿಯಾಗಿರುವ ರಾಶಿ ಪೂಜಾರಿ ಎಂಬವರು 4 ವರ್ಷದ ಹಿಂದೆ ಚಿಹೋವಾ ತಳಿಯ ಪುಟ್ಟ ಶ್ವಾನವನ್ನು ತಂದಿದ್ದು, ಸಾಕುತ್ತಿದ್ದಾರೆ. ಇದಕ್ಕೆ ಗೂಫಿ ಎಂದು ಹೆಸರಿಟ್ಟಿದ್ದಾರೆ. ರಾಶಿ ಪಾಲಿಗೆ ಈ ಗೂಫಿಯೇ ಮಗುವಾಗಿತ್ತು. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಈ ಗೂಫಿ ಮಾಡುತ್ತಿದ್ದ ತುಂಟತನ ನೋಡುತ್ತಲೇ ರಾಶಿ ಖುಷಿ ಖುಷಿಯಾಗಿದ್ದರು. ಕೇಕ್ ಕತ್ತರಿಸಿ ಹುಟ್ಟು ಹಬ್ಬವನ್ನೂ ಆಚರಿಸುತ್ತಿದ್ದರು. ಗೂಫಿ ಕೂಡ ಅವರ ಮನೆಯ ಒಬ್ಬ ಸದಸ್ಯನಾಗಿದ್ದ.
ಕಾಲೇಜಿಗೆ ಹೋದಾಗ, ಮನೆಯಲ್ಲಿ ಇಲ್ಲದೇ ಇರುವಾಗ ಗೂಫಿಯನ್ನು ನೋಡಿಕೊಳ್ಳಲೆಂದೇ ಪುಷ್ಪಲತಾ ಎಂಬಾಕೆಯನ್ನು ರಾಶಿ ಕೆಲಸಕ್ಕೆ ಇಟ್ಟುಕೊಂಡಿದ್ದರು. ಆದರೆ ಪುಷ್ಪಲತಾ ಇಂಥಾ ರಾಕ್ಷಸಿ ಎಂಬುದು ಗೊತ್ತಿರಲಿಲ್ಲ. ಅಕ್ಟೋಬರ್ 31 ರಂದು ನಾಯಿ ಮರಿ ಗೂಫಿಯನ್ನು ವಾಕಿಂಗ್ಗೆ ಕರೆದುಕೊಂಡು ಹೋಗುವಾಗ ಈ ಪುಷ್ಪಲತಾ, ನಾಯಿ ಮರಿಯನ್ನು ಕೊರಳಿಗೆ ಕಟ್ಟಿದ್ದ ಬೆಲ್ಟ್ ಹಿಡಿದು ಎತ್ತಿ ಫ್ಲೋರ್ಗೆ ಜೋರಾಗಿ ಬಡಿದಿದ್ದಾಳೆ. ಅಷ್ಟೇ, ಆ ನಾಯಿ ಅಲ್ಲೇ ಮೃತಪಟ್ಟಿದೆ.
ಪುಷ್ಪಲತಾಳ ಕ್ರೌರ್ಯದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಆಕೆ, ಮನೆಗೆ ಬಂದು ಕತೆ ಕಟ್ಟಿದ್ದಳು. ಲಿಫ್ಟ್ನಿಂದ ಬಿದ್ದು ಗೂಫಿ ಸತ್ತುಹೋಗಿದೆ ಎಂದು ಸುಳ್ಳು ಹೇಳಿದ್ದಳು. ಆದರೆ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಪುಷ್ಪಲತಾಳ ಅಸಲಿಯತ್ತು ಬಯಲಾಗಿದೆ.
ಮಗುವಿನಂತೆ ಸಾಕಿದ್ದ ಗೂಫಿ ಈ ರೀತಿ ಕೊಲೆಯಾಗಿರುವುದನ್ನು ಕಂಡು ರಾಶಿ ಪೂಜಾರಿಗೆ ಬರಸಿಡಿಲೇ ಬಡಿದಂತಾಗಿದೆ. ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಪುಷ್ಪಲತಾ ಕೇವಲ 45 ದಿನಗಳ ಹಿಂದಷ್ಟೇ ಮನೆ ಕೆಲಸಕ್ಕೆ ಸೇರಿದ್ದಳು ಎಂಬುದು ಗೊತ್ತಾಗಿದೆ. ನಾಯಿ ಕೊಲೆ ಮಾಡಿದ್ಯಾಕೆ ಎಂಬ ಬಗ್ಗೆ ಇನ್ನೂ ಬಾಯಿ ಬಿಡುತ್ತಿಲ್ಲ ಎನ್ನಲಾಗಗಿದೆ. ಆಘಾತಕಾರಿ ವಿಚಾರ ಎಂದರೆ, ಈಕೆ ನಾಯಿ ಕೊಲೆ ಮಾಡುವುದರ ಜೊತೆಗೆ ರಾಶಿ ಅವರ ಮನೆಯಲ್ಲಿದ್ದ ಚಿನ್ನವನ್ನೂ ಕದ್ದು ಪರಾರಿಯಾಗಲು ಸಂಚುಹೂಡಿದ್ದಳು ಎನ್ನಲಾಗಿದೆ. ಸದ್ಯ ರಾಶಿ ನೀಡಿದ ದೂರಿನ ಅನ್ವಯ ಪುಷ್ಪಲತಾಳನ್ನು ಬಾಗಲೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.
Published On - 2:35 pm, Mon, 3 November 25