ಬೆಂಗಳೂರು: ಆನೆಗಳು ಕಾಡಿನಲ್ಲಿ ಇರಬೇಕು ಹೊರತು ದೇವಸ್ಥಾನದಲ್ಲಲ್ಲ. ಪೂಜಾ ಕಾರ್ಯಕ್ರಮಕ್ಕೆ ಆನೆಗಳನ್ನು ಬಳಸಿಕೊಳ್ಳುವುದು ಕ್ರೌರ್ಯ ಎಂದೆನಿಸಿಕೊಳ್ಳುತ್ತದೆ’ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ನಗರದ ತಿಂಡ್ಲುವಿನ ವಿದ್ಯಾರಣ್ಯಪುರದ ಕಾಳಿಕಾದುರ್ಗ ಪರಮೇಶ್ವರಿ ದೇವಸ್ಥಾನದ ಸಂಸ್ಥಾಪಕ ಟ್ರಸ್ಟಿ ರಾಧಮ್ಮ ಮತ್ತು ಪ್ರಧಾನ ಪೂಜಾರಿ ವಸಂತ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ಈ ಅಭಿಪ್ರಾಯ ವ್ಯಕ್ತಪಡಿಸಿತು. ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಕಾಳಿಕಾದುರ್ಗ ಪರಮೇಶ್ವರಿ ದೇವಸ್ಥಾನವು ಖಾಸಗಿ ದೇವಾಲಯವಾಗಿದೆ. ಅಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ಆನೆಯೊಂದನ್ನು ತಂದು ಪೋಷಿಸಲಾಗುತ್ತಿತ್ತು. ಇದೀಗ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದ ಕಾರಣ ಆನೆಯೂ ಸರ್ಕಾರದ ವಶದಲ್ಲಿದೆ. ಅದನ್ನು ಸ್ಥಳಾಂತರಿಸದೇ ದೇವಸ್ಥಾನದಲ್ಲಿಯೇ ಇರಿಸಲು ಮುಜರಾಯಿ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿದರು.
ಇದರಿಂದ ಅರ್ಜಿದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಆನೆಗಳು ಕಾಡಿನಲ್ಲಿರಬೇಕು ಹೊರತು ದೇವಸ್ಥಾನದಲ್ಲಿ ಅಲ್ಲ. ಕಾಡಿನಲ್ಲಿರಬೇಕಾದ ಪ್ರಾಣಿಯನ್ನು ದೇವಸ್ಥಾನದಲ್ಲಿ ಇರಿಸುವುದು ತಪ್ಪು ಎಂದು ಅಭಿಪ್ರಾಯ ಪಟ್ಟಿತು. ಅರ್ಜಿದಾರರ ಪರ ವಕೀಲರು ಉತ್ತರಿಸಿ, ಆನೆಗೆ ಯಾವುದೇ ರೀತಿ ತೊಂದರೆ ನೀಡುತ್ತಿಲ್ಲ. ಉತ್ತಮವಾಗಿ ಆರೈಕೆ ಮಾಡಲಾಗುತ್ತಿದೆ. ಕೇವಲ ಪೂಜಾ ಕಾರ್ಯಕ್ರಮ ನೆರವೇರಿಸಲು ಅದನ್ನು ಬಳಕೆ ಮಾಡಲಾಗುತ್ತದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪೂಜಾ ಕಾರ್ಯಕ್ರಮಗಳಿಗೆ ಆನೆಯನ್ನು ಬಳಕೆ ಮಾಡುತ್ತಿರುವುದೇ ಕ್ರೌರ್ಯ ಎಂದೆನಿಸಿಕೊಳ್ಳುತ್ತದೆ. ಕಾಡಿನಲ್ಲಿ ಇತರೆ ಆನೆಗಳೊಂದಿಗೆ ಜೀವಿಸಲು ಅವಕಾಶ ಕಲ್ಪಿಸಬೇಕು. ಆದರೆ, ಆನೆಯನ್ನು ದೇವಸ್ಥಾನದಲ್ಲಿರಿಸಿ ಪೂಜಾ ಕಾರ್ಯಕ್ರಮಕ್ಕೆ ಬಳಸುವುದು ಎಷ್ಟು ಸರಿ ಎಂದು ಪ್ರಶ್ನಿಸಿತು. ಅರ್ಜಿದಾರರ ಪರ ವಕೀಲರು, ಆನೆಗಳನ್ನು ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳಿಗೆ ಬಳಕೆ ಮಾಡುತ್ತಿರುವ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದೆ ಎಂದು ಸಮಜಾಯಿಷಿ ನೀಡಿದರು. ಅದನ್ನು ಖಂಡಿಸಿದ ನ್ಯಾಯಪೀಠ, ಹಿಂದಿನ ಕಾಲದಲ್ಲಿ ಆನೆಗಳನ್ನು ದೇವಸ್ಥಾನದಲ್ಲಿ ಬಳಸುತ್ತಿದ್ದ ವೇಳೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಜಾರಿಯಲ್ಲಿ ಇರಲಿಲ್ಲ. ಇದೀಗ ಆ ಕಾಯ್ದೆ ಜಾರಿಯಲ್ಲಿದೆ. ಹಿಂದೆ ಈ ಪದ್ಧತಿ ಇತ್ತು ಎಂದು ಈಗಲೂ ಮುಂದುವರಿಸುತ್ತೀರಿ ಎನ್ನುವುದಾದರೆ ಒಪ್ಪಲಾಗದು ಎಂದು ಪ್ರತಿಕ್ರಿಯಿಸಿತು.
ಸರ್ಕಾರಿ ವಕೀಲ ವಿಜಯ್ ಕುಮರ್ ಪಾಟೀಲ್, ಆನೆಗೆ ಆರೋಗ್ಯ ಸಮಸ್ಯೆಯಿದೆ. ಚಿಕಿತ್ಸೆ ನೀಡುವ ಅಗತ್ಯ ಇರುವುದರಿಂದ ಮಾಲೂರಿನ ಅರಣ್ಯ ಇಲಾಖೆಯ ಪುನರ್ವಸತಿ ಕೇಂದ್ರಕ್ಕೆ ಆನೆಯನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು. ಜತೆಗೆ, ಆನೆಯ ಚಿಕಿತ್ಸಾ ವರದಿಯನ್ನು ನ್ಯಾಯಪೀಠಕ್ಕೆ ಒದಗಿಸಿದರು. ಅದನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿತು. ಜತೆಗೆ, ಆನೆಗೆ ಸೂಕ್ತ ಚಿಕಿತ್ಸೆ ಕಲ್ಪಿಸಿ, ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್.13ಕ್ಕೆ ಮುಂದೂಡಿತು.
ಇದನ್ನೂ ಓದಿ: ಬೇಗೂರು ಕೆರೆಯಲ್ಲಿ ಶಿವನ ಪತ್ರಿಮೆ ನಿರ್ಮಾಣ; ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ