ಬೆಳಗ್ಗೆ ಬಿಡುಗಡೆ ಸಂಜೆ ಹೊತ್ತಿಗೆ ಮತ್ತೆ ಪರಪ್ಪನ ಅಗ್ರಹಾರ ಜೈಲು ಪಾಲಾದ ನಾರಾಯಣಗೌಡ

| Updated By: Rakesh Nayak Manchi

Updated on: Jan 09, 2024 | 4:36 PM

ಇತ್ತೀಚೆಗೆ ನಾಮಫಲಕ ಧ್ವಂಸ ಪ್ರಕರಣದಲ್ಲಿ ಜೈಲು ಸೇರಿದ್ದ ನಾರಾಯಣಗೌಡ ಅವರು ಜಾಮೀನಿನ ಮೇಲೆ ಇಂದು ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಮತ್ತೆ ಬಂಧಿಸಿದ್ದಾರೆ. 2017ರಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಉಂಟು ಮಾಡಿದ ಪ್ರಕರಣ ಸಂಬಂಧ ಪೊಲೀಸರು ಬಂಧಿಸಿದ್ದು, ಜಾಮೀನು ಕೋರಿ ನಾರಾಯಣಗೌಡ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ಬೆಳಗ್ಗೆ ಬಿಡುಗಡೆ ಸಂಜೆ ಹೊತ್ತಿಗೆ ಮತ್ತೆ ಪರಪ್ಪನ ಅಗ್ರಹಾರ ಜೈಲು ಪಾಲಾದ ನಾರಾಯಣಗೌಡ
ಕರವೇ ನಾರಾಯಣಗೌಡ
Follow us on

ಬೆಂಗಳೂರು, ಜ.9: 2017 ರಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡಿದ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಕರವೇ (KaRaVe) ಅಧ್ಯಕ್ಷ ನಾರಾಯಣಗೌಡ (Narayana Gowda) ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 30ನೇ ಎಸಿಎಂಎಂ ಕೋರ್ಟ್‌ ನಾಳೆಗೆ ಮುಂದೂಡಿದೆ. ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಾರಾಯಣಗೌಡ ಅವರನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ.

ಇಂದು ನಡೆದ ವಿಚಾರಣೆ ವೇಳೆ ವಾದ ಮಂಡಿಸಿದ ನಾರಾಯಣಗೌಡ ಪರ ವಕೀಲ ಕುಮಾರ್, ಪೊಲೀಸರ ನಿರ್ಲಕ್ಷದಿಂದ ಎನ್​ಬಿಡಬ್ಲ್ಯು ಜಾರಿಯಾಗಿದೆ. ನಾರಾಯಣಗೌಡರಿಗೆ ತಿಳಿಯದೇ ಹೀಗಾಗಿದೆ. ಒಂದು ವೇಳೆ ತಿಳಿದಿದ್ದರೆ ವಾಲೆಂಟರಿಯಾಗಿ ನ್ಯಾಯಾಲಯಕ್ಕೆ ಬರುತ್ತಿದ್ದರು. ಅವರು ಪ್ರತೀ ದಿನ ಎಲ್ಲರಿಗೂ ಸಿಗುವಂತ ವ್ಯಕ್ತಿ. ಅವರು ತಲೆಮರೆಸಿಕೊಂಡು ಹೋಗುವಂತ ವ್ಯಕ್ತಿ ಅಲ್ಲ. ಜೊತೆಗೆ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.

ಆರೋಪಿಗೆ 2017 ರಲ್ಲಿ ಜಾಮೀನು‌ ಸಿಕ್ಕಿದೆ. ಜಾಮೀನು ಪಡೆದ ಬಳಿಕ ರೆಗ್ಯುಲರ್ ಡೇಟ್​ಗೆ ನ್ಯಾಯಾಲಯಕ್ಕೆ ಹಾಜರಾಗಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ನ್ಯಾಯಾಲಯದ ಅರಿವಿಲ್ಲವೇ? ಈಗ ಗೊತ್ತಾಗಿಲ್ಲ, ಅರಿವಿರಲಿಲ್ಲ ಅಂತ ಹೇಳುವುದು ಸರಿಯಲ್ಲ. ಹೀಗಾಗಿ ಜಾಮೀನು ನಿರಾಕರಿಸುವಂತೆ‌ ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬಿಡುಗಡೆಯಾಗುತ್ತಿದ್ದಂತೆ ಕರವೇ ನಾರಾಯಣಗೌಡ ಮತ್ತೆ ಪೊಲೀಸರ ವಶಕ್ಕೆ !

ನಾವು ನ್ಯಾಯಾಲಯಕ್ಕೆ ತುಂಬಾ ಗೌರವ ಕೊಡುತ್ತೇವೆ. ಚಾರ್ಜ್ ಶೀಟ್ ಸಲ್ಲಿಸಿದ ಮೇಲೆ ನ್ಯಾಯಾಲಯ ಸಮನ್ಸ್ ಕೊಡುತ್ತದೆ. ಅದನ್ನ ಪೊಲೀಸರು ಎಕ್ಸಿಕ್ಯೂಟ್ ಮಾಡಿಲ್ಲ. ಹೀಗಾಗಿ ಕೋರ್ಟ್​ಗೆ ಬರಲು ಆಗಿಲ್ಲ. ಏನೇ ಷರತ್ತು ಹಾಕಿದರೂ ನಾವು ಪಾಲನೆ ಮಾಡುತ್ತೇವೆ ಎಂದು ನಾರಾಯಣಗೌಡರ ಪರ ವಕೀಲರು ಮನವಿ ಮಾಡಿದರು.

ಅನಾರೋಗ್ಯದ ಹಿನ್ನಲೆ ಸರ್ಕಾರಿ ಆಸ್ಪತ್ರೆಯಲ್ಲಿ ನಾರಾಯಣಗೌಡರಿಗೆ ಚಿಕಿತ್ಸೆ ಕೊಡಿಸುವಂತೆ ವಕೀಲರು ಮನವಿ ಮಾಡಿದ್ದಾರೆ. ಇದನ್ನು ನಿರಾಕರಿಸಿದ ಕೋರ್ಟ್, ಜೈಲು ವಾರ್ಡಿನಲ್ಲೇ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.

ನಾರಾಯಣಗೌಡ ಬಂಧನದ ಹಿಂದೆ ರಾಜಕೀಯ ಷಡ್ಯಂತರ ಇದೆ

ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಗೌಡರ ಪರ ವಕೀಲ ವೇದಮೂರ್ತಿ, ನಾರಾಯಣ ಗೌಡರು ನೆಲ, ಜಲ, ಭಾಷೆ ವಿಚಾರವಾಗಿ ಹೋರಾಟ ಮಾಡುತ್ತಿದ್ದಾರೆ. 2017 ರಿಂದ ತಲೆಮರೆಸಿಕೊಂಡಿದ್ದರು ಅಂತಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಷ್ಟಿದ್ದರೆ ಪೊಲೀಸರು ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಬಹುದಿತ್ತು. ಸದ್ಯ ನ್ಯಾಯಲಯ ವಾದ ವಿವಾದ ಆಲಿಸಿ ತೀರ್ಪು ಕಾಯ್ದಿರಿಸಿದೆ ಎಂದರು.

ನಾರಾಯಣ ಗೌಡರ ಪರ ಮತ್ತೊಬ್ಬ ವಕೀಲ ಕುಮಾರ್ ಮಾತನಾಡಿ, ನಾರಾಯಣಗೌಡರು ಹೋರಾಟಗಾರ, ಇದು ಯಾಕೆ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಇದರ ಹಿಂದೆ ರಾಜಕೀಯ ಷಡ್ಯಂತರ ಇದೆ. ಎಲ್ಲಾ ದೊಡ್ಡ ದೊಡ್ಡ ಅಧಿಕಾರಿಗಳು ಹೋಗಿ ಕರೆದುಕೊಂಡು ಹೋದರು. ಇದರ ಹುನ್ನಾರ ಬೇರೆಯೇ ಇದೆ. ಇದರ ಫಲಿತಾಂಶ ಮುಂದೆ ಗೊತ್ತಾಗುತ್ತದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Tue, 9 January 24