ನಾಳೆಯಿಂದ ಬಂಕ್ಗಳಲ್ಲಿ ಪೆಟ್ರೋಲ್, ಡಿಸೇಲ್ ದರ ಪಟ್ಟಿ ಕನ್ನಡದಲ್ಲೂ ಇರುತ್ತದೆ: ಹರ್ದೀಪ್ ಸಿಂಗ್ ಪುರಿ
ಕರ್ನಾಟಕದಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಹೋರಾಟ ನಡೆಯುತ್ತಿರುವ ನಡುವೆ ರಾಜ್ಯದಲ್ಲಿ ನಾಳೆಯಿಂದ ಪೆಟ್ರೋಕ್ ಬಂಕ್ಗಳಲ್ಲಿ ಸಾರ್ವಜನಿಕರಿಗೆ ಪೆಟ್ರೋಲ್, ಡೀಸೆಲ್ ದರ ಪಟ್ಟಿ ಕನ್ನಡದಲ್ಲೂ ತೋರಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಜ.9: ನಾಳೆಯಿಂದ ಕರ್ನಾಟಕದ ಎಲ್ಲಾ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್, ಡೀಸೆಲ್ ದರ (Petrol, Diesel Price) ಪಟ್ಟಿ ಕನ್ನಡದಲ್ಲೂ ತೋರಿಸಲಾಗುತ್ತದೆ ಎಂದು ಕೇಂದ್ರ ಇಂಧನ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಹೇಳಿದ್ದಾರೆ. ಹಿಂದಿ ಹೇರಿಕೆ ಆರೋಪ ಮತ್ತು ಕರ್ನಾಟಕದಲ್ಲಿ ಶೇ.60 ರಷ್ಟು ಕನ್ನಡ ನಾಮಫಲಕ ಅಳವಡಿಕೆಗೆ ಹೋರಾಟ ನಡೆಯುತ್ತಿರುವ ನಡುವೆ ಕೇಂದ್ರ ಸರ್ಕಾರ ಈ ಮಹತ್ವದ ತೀರ್ಮಾನ ಕೈಗೊಂಡಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹರ್ದೀಪ್ ಸಿಂಗ್ ಪುರಿ, ನಾಳೆಯಿಂದಲೇ ಪೆಟ್ರೋಲ್ ಬಂಕ್ಗಳಲ್ಲಿ ದರ ಪಟ್ಟಿ ಕನ್ನಡದಲ್ಲಿ ಇರಲಿದೆ. ಕನ್ನಡದಲ್ಲಿ ದರ ಪಟ್ಟಿ ಪ್ರಕಟಿಸುವ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮಲಲ್ಲಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜನವರಿ 22 ರಂದು ನಡೆಯಲಿದ್ದು, ಈ ದಿನದಂದು ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ರಾಮ ಹಾಗೂ ಆಂಜನೇಯನ ದೇವಸ್ಥಾನ, ಮಂದಿರಗಳಲ್ಲಿ ವಿಶೇಷ ಪೂಜೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಸುತ್ತೋಲೆ ಹೊರಡಿಸಿರುವುದನ್ನು ಸ್ವಾಗತಿಸಿದ ಕೇಂದ್ರ ಸಚಿವರು, ಈ ಮೂಲದ ಸನಾತನ ಸಂಸ್ಕೃತಿ ಕಾಂಗ್ರೆಸ್ನವರೂ ಒಪ್ಪಿದ್ದಾರೆ ಎಂದರ್ಥ ಎಂದರು.
ಭಾರತ್ ನ್ಯಾಯ ಯಾತ್ರೆ: ಸಿಖ್ಖರಿಗೆ ನ್ಯಾಯ ಯಾವಾಗ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ನ್ಯಾಯ ಯಾತ್ರೆ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಹರ್ದೀಪ್ ಸಿಂಗ್ ಪುರಿ, 1984ರ ಸಿಖ್ ಹತ್ಯಾ ಕಾಂಡದಲ್ಲಿ ನೊಂದವರಿಗೆ ಯಾವಾಗ ನ್ಯಾಯ ಕೊಡುತ್ತಾರೆ ಹೇಳಲಿ. ಅದೇ ಮನೆತನದಿಂದಲೇ (ಇಂದಿರಾ ಗಾಂಧಿ) ಅಲ್ಲವೇ ಹತ್ಯಾಕಾಂಡ ನಡೆದಿದ್ದು? ಮೊದಲು ಸಿಖ್ಖರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿ. ದೀರ್ಘಾವಧಿ ರಜೆಯಿಂದ ಬಂದಿರುವ ರಾಹುಲ್ ಗಾಂಧಿ ಯಾತ್ರೆ ಮೂಲಕ ಭಾರತದಲ್ಲೇ ಇರುತ್ತಾರೆ. ಅಂತಹ ನ್ಯಾಯಕ್ಕಾಗಿ ನಾವು ಬೆಂಬಲ ನೀಡುತ್ತೇವೆ ಎಂದರು.
ಇದನ್ನೂ ಓದಿ: ಮೇ ಅಥವಾ ಜೂನ್ನಲ್ಲಿ ಈ ಭಾಗದಲ್ಲಿ ತೈಲ ಮತ್ತು ಗ್ಯಾಸ್ ಉತ್ಪಾದನೆ: ಹಾಸನದಲ್ಲಿ ಹರ್ದೀಪ್ ಸಿಂಗ್ ಪುರಿ ಹೇಳಿಕೆ
ಮಾಲ್ಡೀವ್ಸ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ಬಗ್ಗೆ ಹೇಳಿಕೆ ನೀಡಿದ್ದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದರು. ಕೇಂದ್ರ ಸರ್ಕಾರದ ಉಜ್ವಲ ಯೋಜನೆಯನ್ನು 2016 ರಲ್ಲಿ ಆರಂಭ ಮಾಡಿದ್ದೆವು. ಈ ಯೋಜನೆ ಇಂದು 10 ಕೋಟಿ 50 ಲಕ್ಷ ಫಲಾನುಭವಿಗಳನ್ನು ಹೊಂದಿದೆ ಎಂದರು.
ಕಾಂಗ್ರೆಸ್ ನಮ್ಮ ಸರ್ಕಾರದ ಬಗ್ಗೆ ಏನು ಎಕ್ಸ್ ಪೋಸ್ ಮಾಡುತ್ತದೆ ಎಂದು ಪ್ರಶ್ನಿಸಿದ ಕೇಂದ್ರ ಸಚಿವರು, ನಮ್ಮ ಸರ್ಕಾರ ಜನರಿಗೆ ಮಾಡಿದ ಕಾರ್ಯಗಳನ್ನು ಫಲಾನುಭವಿಗಳೇ ತಿಳಿಸುತ್ತಾರೆ. ಸರ್ಕಾರದ ಸಾಧನೆಯನ್ನು ಜನರೇ ಹೇಳುತ್ತಾರೆ. ಒಂದು ದೇಶ ಒಂದು ಚುನಾವಣೆ ಕೂಡ ಮುಂದೆ ಆಗಲಿದೆ. ಚುನಾವಣೆಗಾಗಿ ಮೋದಿ ಇದನ್ನೆಲ್ಲಾ ಮಾಡುತ್ತಿಲ್ಲ. ಭಾರತದಲ್ಲಿ ಮಾತ್ರ ಕಳೆದ ಎರಡು ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಆಗಿದೆ ಎಂದರು.
ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ಇದ್ದೇನೆ. ಕೇಂದ್ರದ ಯೋಜನೆಗಳಿಗೆ ಇಲ್ಲಿ ಉತ್ತಮ ಸ್ಪಂದನೆ ಇದೆ. ಕೇಂದ್ರದ ಬಹಳಷ್ಟು ಯೋಜನೆಗಳು ಮಹಿಳಾ ಕೇಂದ್ರಿತವಾಗಿವೆ. ಅನೇಕ ಮಹಿಳೆಯರು ಫಲಾನುಭವಿಗಳಾಗಿ ಕೇಂದ್ರದ ಯೋಜನೆಗಳ ಸೌಲಭ್ಯ ಪಡೆಯುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜನರೇ ನಮ್ಮನ್ನು ಗೆಲ್ಲಿಸುತ್ತಾರೆ ಎಂದರು.
ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಕೇಂದ್ರದ ಯೋಜನೆಗಳು ಜನರ ಮೇಲೆ ಬಹಳಷ್ಟು ಪ್ರಭಾವ ಬೀರಿವೆ. ಮೋದಿ ಮತ್ತು ಕೇಂದ್ರದ ಯೋಜನೆಗಳ ಮೇಲೆ ಜನರ ನಂಬಿಕೆ ಹೆಚ್ಚಾಗಿದೆ. ವಿಪಕ್ಷಗಳು ಏನೇ ರಾಜಕೀಯ ಆರೋಪ ಮಾಡಬಹುದು. ಆದರೆ ಬಿಜೆಪಿ ಹೆಚ್ಚಿನ ಸಂಸತ್ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ