
ಬೆಂಗಳೂರು, ಅಕ್ಟೋಬರ್ 23: ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ದೇವಿಗೆ ಪುಷ್ಪಾರ್ಚನೆ ಮಾಡಿರುವ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಟೀಕೆಗೆ ಕಾಂಗ್ರೆಸ್ ಕೌಂಟರ್ ಕೊಟ್ಟಿದೆ. ಹೆಚ್ಡಿಕೆ ಸಿಎಂ ಆಗಿದ್ದ ಸಂದರ್ಭ ಜಂಬೂಸವಾರಿಗೆ ಚಾಲನೆ ನೀಡುವ ವೇಳೆ ಅವರ ಪತ್ನಿ ಅನಿತಾ ಅವರು ಕೂಡ ಭಾಗಿಯಾಗಿದ್ದ ಫೋಟೋ ಸಮೇತ ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಮರೆಗುಳಿ ಕುಮಾರಣ್ಣ ನೀವು ಮುಖ್ಯಮಂತ್ರಿ ಆಗಿದ್ದಾಗ ನೆನಪಿಲ್ಲವೇ? ಅಂಬಾರಿಗೆ ಪುಷ್ಪಾರ್ಚನೆ ವೇಳೆ ಅನಿತಾ ಕುಮಾರಸ್ವಾಮಿ ಇರಲಿಲ್ವವೇ? ಎಂದು ಪ್ರಶ್ನಿಸಿದೆ.
ಡಿ ಕೆ ಶಿವಕುಮಾರ್ ಅವರು ಮೊದಲ ಬಾರಿಗೆ ಪತ್ನಿಯನ್ನು ಅಂಬಾರಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ ಎಂದು ಹೇಳುತ್ತಿದ್ದೀರಲ್ಲಾ 20 ವರ್ಷಗಳ ಹಿಂದೆ ನೀವೇ ಬರೆದ ಅಧ್ಯಾಯ ಮರೆತು ಹೋಗಿದ್ದೀರಾ? ಎಂದು ಪ್ರಶ್ನಿಸಿದೆ. ಮತ್ತೊಂದೆಡೆ ಸಿಎಂ ಪತ್ನಿಯಿಂದ ಪುಷ್ಪಾರ್ಚನೆ ವಿಚಾರ ಸಂಬಂಧ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಸಿಎಂ ಪತ್ನಿ ಪುಷ್ಪಾರ್ಚನೆ ಮಾಡಿರುವುದರಲ್ಲಿ ತಪ್ಪೇನೂ ಇಲ್ಲ. ಅವರು ದೇವಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಅಷ್ಟೇ ಹೊರತು ಸರ್ಕಾರದ ಕೆಲಸವನ್ನೇನು ಮಾಡಿಲ್ವಲ್ಲಾ? ಎಂದು ಪ್ರಶ್ನಿಸಿದ್ದಾರೆ.
ಜಂಬೂಸವಾರಿಗೆ ಚಾಲನೆ ವೇಳೆ ಸಿಎಂ ಪತ್ನಿಯಿಂದ ಪುಷ್ಪಾರ್ಚನೆ ವಿಚಾರ ವಿವಾದಕ್ಕೆ ಕಾರಣವಾಗಿದ್ದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಈ ಬಾರಿಯ ಮೈಸೂರು ದಸರಾ ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ ಎಂಬ ವರದಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಅವುಗಳ ಪೈಕಿ ಇದೂ ಒಂದಾಗಿರಬಹುದು ಎಂದು ಟೀಕಿಸಿದ್ದರು. ಇದೇ ವಿಚಾರಕ್ಕೆ ಈಗ ಕಾಂಗ್ರೆಸ್ ಕೇಂದ್ರ ಸಚಿವರಿಗೆ ತಿರುಗೇಟು ನೀಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.