ಬೆಂಗಳೂರು: 3500 ಕುಟುಂಬಗಳನ್ನು ಖಾಲಿ ಮಾಡುವಂತೆ ಡಿಸಿ ಸೂಚನೆ, ಡಿಸಿ ವಿರುದ್ಧ ಆಶ್ರಯ ನಗರ ನಿವಾಸಿಗಳ ಆಕ್ರೋಶ

ಅವರೆಲ್ಲ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ, ಕಳೆದ 25 ವರ್ಷಗಳಿಂದ ವಾಸ ಮಾಡುತ್ತಿದ್ದರು. 3,500 ಕುಟುಂಬಗಳು ಜೀವ ಕಟ್ಟಿಕೊಂಡಿರುವ ಆ ಜಾಗ ಬಿಟ್ಟು ಹೊರಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೊಟ್ಟ ಆ ಒಂದು ನೋಟಿಸ್ ಈಗ ಎಲ್ಲರ ಆಕ್ರೋಶ ಭುಗಿಲೇಳುವ ಹಾಗೆ ಮಾಡಿದೆ. ಅವರ ಬದುಕೇ ಈಗ ಅತಂತ್ರ ಸ್ಥಿತಿ ತಲುಪಿದ್ದು, ಬೀದಿಗೆ ಇಳಿದು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: 3500 ಕುಟುಂಬಗಳನ್ನು ಖಾಲಿ ಮಾಡುವಂತೆ ಡಿಸಿ ಸೂಚನೆ, ಡಿಸಿ ವಿರುದ್ಧ ಆಶ್ರಯ ನಗರ ನಿವಾಸಿಗಳ ಆಕ್ರೋಶ
ಆಶ್ರಯ ನಗರ
Edited By:

Updated on: Aug 26, 2024 | 10:46 AM

ಬೆಂಗಳೂರು, ಆಗಸ್ಟ್​.26: ಕಳೆದ 25 ವರ್ಷಗಳಿಂದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ HMT ವಾರ್ಡ್ ನ ಆಶ್ರಯ ನಗರ ಸ್ಲಂನಲ್ಲಿ ವಾಸ ಮಾಡುತ್ತಿರುವ 3,500 ಕ್ಕೂ ಹೆಚ್ಚು ಕುಟುಂಬಗಳ ಆಕ್ರೋಶ ಭುಗಿಲೆದ್ದಿದೆ. ಸದ್ಯ ಇವರು ವಾಸ ಮಾಡುತ್ತಿರುವ ಪ್ರದೇಶದಲ್ಲಿ ಹೈ ಟೆನ್ಷನ್ ವೈರ್ ಗಳು ಹಾದು ಹೋಗಿದ್ದು, ವಾಸಕ್ಕೆ ಯೋಗ್ಯವಲ್ಲ, ಅಪಾಯಕಾರಿ ಎಂದು ಘೋಷಣೆ ಮಾಡಲಾಗಿದೆ. ಎಲ್ಲರೂ ಜಾಗ ಖಾಲಿ ಮಾಡುವಂತೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಇದೇ ವಿಚಾರ ಇವರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಎಲ್ಲೋ ಜಾಗ ಇದೆ ನೀವು ಅಲ್ಲಿಗೆ ಹೋಗಿ ಅಂದರೆ ಹೇಗೆ? ನಮಗೆ ಸೂಕ್ತವಾದ ವ್ಯವಸ್ಥೆ ಮಾಡಬೇಕು, ಇಲ್ಲಿನ ರಾಜಕೀಯ ನಾಯಕರು ಯಾರು ಸರಿಯಿಲ್ಲ. ಎಲೆಕ್ಷನ್ ಟೈಮಲ್ಲಿ ಮತ ಹಾಕಿ ಅಂತ ಮಾತ್ರ ಕೇಳ್ತಾರೆ ಈಗ ಯಾರು ಬರೋದಿಲ್ಲ ‌ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಶ್ರಯ ನಗರದ 7-8 ಎಕರೆ ಜಾಗದಲ್ಲಿ ಇವರೆಲ್ಲ ವಾಸ ಮಾಡುತ್ತಿದ್ದಾರೆ. ಈಗ ಗೌಡನ ಹಳ್ಳಿ ಎಂಬ ಕಡೆ 1 ಎಕರೆ ಜಾಗಕ್ಕೆ ನೀವೆಲ್ಲ ಹೋಗಬೇಕು ಅಂತ ಡಿಸಿ ಸೂಚನೆ ನೀಡಿದ್ದಾರೆ. ಇದು ಹೇಗೆ ಸಾಧ್ಯ? ಇಷ್ಟೊಂದು ಮಂದಿ 1 ಎಕರೆ ಜಾಗದಲ್ಲಿ ಹೇಗೆ ವಾಸ ಮಾಡೋದು ಅಂತ ಪ್ರಶ್ನೆ ಮಾಡುತ್ತಿದ್ದಾರೆ. ನಾವು 25 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೀವಿ, ಈಗ ಏಕಾಏಕಿ ಕರೆಂಟ್ ವೈರ್ ಇದೆ ಇಲ್ಲಿ ಯಾರು ಜೀವನ ಮಾಡಬಾರದು ಮನೆಗಳನ್ನು ಖಾಲಿ ಮಾಡಬೇಕು ‌ಅಂದರೆ ಹೇಗೆ? ನಾವು ಯಾವುದೇ ಕಾರಣಕ್ಕೂ ಇಲ್ಲಿಂದ ಹೋಗಲ್ಲ ಸರ್ಕಾರ ನಮಗೆ ಸೈಟ್ ನೀಡಬೇಕು ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ರೈಲು ಹಾದು ಹೋದ ಬಳಿಕವೂ ಪವಾಡವೆಂಬಂತೆ ಬದುಕುಳಿದ ಮಹಿಳೆ

ಒಟ್ನಲ್ಲಿ ಇವರ ಸಂಕಷ್ಟ ಕೇಳಲು ಯಾರು ಇಲ್ಲದ ಸ್ಥಿತಿ ಈಗ ನಿರ್ಮಾಣ ಆಗಿದೆ. ಏನೇ ಆದರೂ ನಮಗೆ ಒಂದು ಸೂರು ಭದ್ರ ಆಗುವವರೆಗೂ ನಾವು ಈಗ ಜಾಗ ಬಿಟ್ಟು ಕದಲಲ್ಲ ಅಂತ ಸ್ಥಳೀಯರು ಪಟ್ಟು ಹಿಡಿದು ರಸ್ತೆಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಮನವಿಗೆ ಸ್ಪಂದಿಸದೆ, ಮನೆಗಳ ತೆರವು ಮಾಡಲು ಬಂದರೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಅಂತ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸರ್ಕಾರ ಏನು ಪರಿಹಾರ ನೀಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ