ಬೆಂಗಳೂರು, ಅ.07: ಬೆಂಗಳೂರು ನಗರ ಜಾಗತಿಕವಾಗಿ ಗುರುತಿಸಿಕೊಂಡಿದೆ. ಆದರೆ, ಇತರೆ ರಾಜ್ಯಗಳಿಗಿಂತ ಟ್ರಾಫಿಕ್ ಸಮಸ್ಯೆ ಬೆಂಗಳೂರಿನಲ್ಲಿ ಕಡಿಮೆ ಇದ್ದರೂ ದೇಶದಲ್ಲಿ ಹೆಚ್ಚು ಸುದ್ದಿ ಆಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಮಾರತಹಳ್ಳಿಯಲ್ಲಿ ಮಾತನಾಡಿದ ಅವರು ‘ಔಟರ್ ರಿಂಗ್ ರೋಡ್ ಕಂಪನಿಗಳ ಸಂಘದ (ORRCA) ಸದಸ್ಯರೊಂದಿಗೆ ಇಂದು ಸಭೆ ನಡೆಸಿದ್ದು, ಅವರು ಸಮಸ್ಯೆ ಕೇಳಿದ್ದೇನೆ. ಟ್ರಾಫಿಕ್ ಸಮಸ್ಯೆ ಸೇರಿ ಎಲ್ಲ ತಿಳಿಸಿದ್ದಾರೆ ಎಂದರು.
ಬೆಂಗಳೂರು ವಿಶ್ವ ಮಟ್ಟದಲ್ಲಿ ಮುನ್ನುಗ್ಗುತ್ತಿರುವುದಕ್ಕೆ ಉದ್ಯಮಿಗಳ ಪಾತ್ರವು ಕೂಡ ಇದೆ. ಒಆರ್‌ಆರ್‌ಸಿಎ ಸಂಘದ ಸದಸ್ಯರ ಮನವಿಗೆ ಸರ್ಕಾರ ಸ್ಪಂದಿಸಲಿದೆ. ನಾವು ಕಲೆಕ್ಟಿವ್ ಜವಾಬ್ದಾರಿ ತೆಗೆದುಕೊಂಡು ಕಾರ್ಯನಿರ್ವಹಣೆ ಮಾಡುತ್ತೇನೆ. ಜೊತೆಗೆ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಕರ್ನಾಟಕ ಹೂಡಿಕೆಗೆ ಸೂಕ್ತವಾದ ಸ್ಥಳ ಇದಾಗಿದ್ದು, ಉದ್ಯಮಕ್ಕೆ ಪ್ರೋತ್ಸಾಹಿಸುವ ಸರ್ಕಾರ ರಾಜ್ಯದಲ್ಲಿದೆ. ಬೆಂಗಳೂರು ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಟ್ರಾಫಿಕ್ ಜಾಮ್ನಲ್ಲೇ ಕಾರಲ್ಲಿ ಕುಳಿತು ಪಿಜ್ಜಾಗೆ ಆರ್ಡರ್ ಮಾಡಿದ ಚಾಲಕ; ವಿಡಿಯೋ ವೈರಲ್
ಇನ್ನು ಮಾರತ್ ಹಳ್ಳಿ ವ್ಯಾಪ್ತಿಯ ಪಣತ್ತೂರಿನ ಔಟರ್ ರಿಂಗ್ ರೋಡ್ ಸ್ಥಿತಿಗತಿಗಳನ್ನು ಹಾಗೂ ಅಲ್ಲಿನ ಕಾಮಗಾರಿಯ ನೀಲನಕ್ಷೆಯನ್ನು ಪರಿಶೀಲನೆ ನಡೆಸಿದೆ. ನೂರಾರು ಐಟಿಬಿಟಿ ಕಂಪನಿಗಳು ನೆಲೆಸಿರುವ ಕಾರಣ ಈ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಗುತ್ತಿದ್ದು, ಸರಾಗ ಸಂಚಾರಕ್ಕಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದೇನೆ ಎಂದು ಹೇಳಿದರು.
ಇದೇ ವೇಳೆ ‘ಫ್ಲೆಕ್ಸ್, ಬ್ಯಾನರ್ ವಿಷಯವಾಗಿ ಬೆಂಗಳೂರು ನಗರ ಪದೇ ಪದೆ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಯಾರ ಫ್ಲೆಕ್ಸ್, ಬ್ಯಾನರ್ ಹಾಕದಂತೆ ಕೋರುತ್ತಿದ್ದೇನೆ. ಈ ಮುಂಚೆಯೇ ಹೇಳಿದಂತೆ ಫ್ಲೆಕ್ಸ್, ಬ್ಯಾನರ್ ಹಾಕಿದವವರಿಗೆ 50 ಸಾವಿರ ದಂಡ ವಿಧಿಸಲಾಗುವುದು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ನಾವೇ ತಪ್ಪು ಸಂದೇಶ ರವಾನಿಸುವುದು ಬೇಡ. ಬೆಂಗಳೂರಿನ ಘನತೆ, ಗೌರವ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ