ಅತ್ತಿಬೆಲೆ ಪಟಾಕಿ ಗೋಡೌನ್ ಅಗ್ನಿ ದುರಂತ: ಮೃತರ ಸಂಖ್ಯೆ 14ಕ್ಕೆ ಏರಿಕೆ, ಗೋದಾಮು ಮಾಲೀಕನ ಪುತ್ರ ಪೊಲೀಸರ ವಶಕ್ಕೆ
ಆನೇಕಲ್ ತಾಲೂಕಿನ ಅತ್ತಿಬೆಲೆ ಪಟಾಕಿ ಗೋಡೌನ್ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ಮಾಲಿಕರಾದ ರಾಮಸ್ವಾಮಿ ರೆಡ್ಡಿ ಹಾಗೂ ಜಾಗದ ಮಾಲೀಕ ಅನಿಲ್ ವಿರುದ್ಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 337, 338, 304 ಅಡಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ಅ.08: ಆನೇಕಲ್ (Anekal) ತಾಲೂಕಿನ ಅತ್ತಿಬೆಲೆಯಲ್ಲಿ (Attibele) ಪಟಾಕಿ ಗೋದಾಮಿನಲ್ಲಿ (Firecrackers Godown) ಶನಿವಾರ ಭಾರಿ ಅಗ್ನಿ ಅವಘಡ (Explosion) ಸಂಭವಿಸಿದ್ದು, ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಮೃತಪಟ್ಟ ಕಾರ್ಮಿಕರ ಪೈಕಿ ಬಹುತೇಕರು ತಮಿಳುನಾಡಿನ ಶಿವಕಾಶಿ ಮೂಲದವರು ಎಂದು ತಿಳಿದು ಬಂದಿದೆ. ಇನ್ನು ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ಮಾಲಿಕರಾದ ರಾಮಸ್ವಾಮಿ ರೆಡ್ಡಿ ಹಾಗೂ ಜಾಗದ ಮಾಲೀಕ ಅನಿಲ್ ವಿರುದ್ಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 337, 338, 304 ಅಡಿ ಎಫ್ಐಆರ್ ದಾಖಲಾಗಿದೆ.
ಐಪಿಸಿ ಸೆಕ್ಷನ್ 337 – ಇತರರ ಜೀವ ಮತ್ತು ಸುರಕ್ಷತೆಗೆ ಧಕ್ಕೆ, ಐಪಿಸಿ ಸೆಕ್ಷನ್ 338 – ಇತರರ ಜೀವ ಮತ್ತು ವೈಯಕ್ತಿಕ ಸುರಕ್ಷತೆಗೆ ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಧಕ್ಕೆ ಮಾಡುವುದು. 304- ಅಪರಾಧಿ ನರಹತ್ಯೆ (ಕೊಲೆಗೆ ಸಮಾನವಲ್ಲ) 9 (ಬಿ) ಸ್ಪೋಟಕ ವಸ್ತು ಅಡಿ ಪ್ರಕರಣ ದಾಖಲಾಗಿದೆ.
ಗೋದಾಮು ಮಾಲೀಕನ ಪುತ್ರ ಪೊಲೀಸರ ವಶಕ್ಕೆ
ಶನಿವಾರ ಮಧ್ಯಾಹ್ನ 3.30ಕ್ಕೆ ಲಾರಿಯಿಂದ ಪಟಾಕಿ ಇಳಿಸಲಾಗುತ್ತಿತ್ತು. ಈ ವೇಳೆ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ. ಮೇಲ್ನೋಟಕ್ಕೆ ಗೋದಾಮಿನ ನಿರ್ಲಕ್ಷ್ಯದಿಂದ ಅಂತ ತಿಳಿದು ಬಂದಿದೆ. ಗೋದಾಮು ಮಾಲೀಕ ಅಗ್ನಿಶಾಮಕ ನಿಯಮ ಉಲ್ಲಂಘಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಹೇಳಿದರು.
ಪಟಾಕಿ ಯಾರು ಕಳಿಸಿದ್ದಾರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಪಟಾಕಿ ಆರ್ಡರ್ ಬಂದಮೇಲೆ ಇಲ್ಲಿನ ದಾಖಲೆ ಪಡೆದು ಸಾಗಿಸಬೇಕು. ಜೊತೆಗೆ ಪಟಾಕಿ ಸಾಗಾಣಿಕೆ ವೇಳೆಯೂ ಎಸ್ಒಪಿ ಪಾಲಿಸಬೇಕಾಗುತ್ತೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ. ಪಟಾಕಿಗಳನ್ನು ತಮಿಳುನಾಡಿನ ಧರ್ಮಪುರಿಯಿಂದ ತಂದಿರುವ ಮಾಹಿತಿ ಇದೆ. ದುರಂತ ಬಗ್ಗೆ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸಲಾಗುತ್ತದೆ. ಗಾಯಾಳುಗಳಿಂದಲೇ ದೂರು ಪಡೆಯಲಾಗಿದೆ. ನರಹತ್ಯೆ ಎಂಬ ಆರೋಪದ ಮೇಲೆ ದೂರು ತೆಗೆದುಕೊಳ್ಳಲಾಗಿದೆ. ಯಾವ್ಯಾವ ಇಲಾಖೆಯಿಂದ ಲೋಪ ಆಗಿದೆ ಆ ಬಗ್ಗೆಯೂ ತನಿಖೆ ನಡೆಯುತ್ತದೆ. ಯಾರೇ ಇರಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದರು.
ಇದನ್ನೂ ಓದಿ: ಹಾವೇರಿ ಪಟಾಕಿ ಗೋದಾಮು ದುರಂತ: ನಾಲ್ವರ ವಿರುದ್ಧ ಎಫ್ಐಆರ್ ದಾಖಲು, ತನಿಖೆಗೆ ಬೊಮ್ಮಾಯಿ ಆಗ್ರಹ
ಇನ್ನು ಗೋದಾಮು ಮಾಲೀಕನ ಪುತ್ರ ನವೀನ್ನ್ನು ವಶಕ್ಕೆ ಪಡೆದಿದ್ದೇವೆ. ಘಟನೆಯಲ್ಲಿ ನವೀನ್ಗೂ ಗಾಯಗಳಾಗಿವೆ, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಪಟಾಕಿ ದುರಂತ ಸ್ಥಳದಲ್ಲಿದ್ದ ಅಧಿಕಾರಿಗಳು, ಎಫ್ಎಸ್ಎಲ್ ಹಾಗೂ ಅಗ್ನಿಶಾಮಕ ಅಧಿಕಾರಿಗಳ ವರದಿಯ ಮೇಲೆ ಕ್ರಮ ಕೈಗೊಳ್ಳಲಾಗುತ್ತೆ.
ಒಂಬತ್ತು ಜನರ ಗುರುತು ಸದ್ಯಕ್ಕೆ ಸಿಕ್ಕಿದೆ. ಇನ್ನೂ ಮೂರು ಜನ ಗಂಡಸರ ಶವ ಪತ್ತೆಯಾಗಿಲ್ಲ. ಗಾಯಾಳುಗಳಲ್ಲಿ ವೆಂಕಟೇಶ ಎಂಬಾತನ ಸ್ಥಿತಿ ಗಂಭೀರವಾಗಿದೆ. ಇನ್ನುಳಿದವರು ಔಟ್ ಆಫ್ ಡೇಂಜರ್ ಇದ್ದಾರೆ.
ದುರಂತ ಸ್ಥಳಕ್ಕೆ ಇಂದು ಸಿಎಂ ಭೇಟಿ
ದುರಂತ ಸ್ಥಳಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:57 am, Sun, 8 October 23