ಬೆಂಗಳೂರು, ಜೂ.25: ಪೆಟ್ರೋಲ್, ಡೀಸೆಲ್ ಹಾಗೂ ಹಾಲಿನ ದರ ಏರಿಕೆ ಬೆನ್ನಲ್ಲೇ ಇದೀಗ ಗ್ರಾಹಕರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಹೌದು, ಆಟೋ ಪ್ರಯಾಣ ದರ ಏರಿಕೆ(Auto fare Hike)ಗೆ ಚಾಲಕರ ಸಂಘ ಒತ್ತಾಯ ಮಾಡಿದೆ. ಬೆಲೆ ಏರಿಕೆ ಬಿಸಿಯಿಂದ ಆಟೋ ಚಾಲಕರು ಆರ್ಥಿಕ ಸಂಕಷ್ಟದಲ್ಲಿದ್ದು, ಹೀಗಾಗಿ ಪ್ರಯಾಣ ದರ ಹೆಚ್ಚಿಸುವಂತೆ ಬೆಂಗಳೂರು ಆಟೋ ಚಾಲಕರ ಸಂಘಟನೆಗಳು ಒತ್ತಾಯ ಮಾಡುತ್ತಿದೆ.
ಇನ್ನು ಈ ಕುರಿತು ಮಾತನಾಡಿದ ಆದರ್ಶ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ‘ಮೂರು ವರ್ಷಗಳಿಂದ ಪ್ರಯಾಣ ದರ ಏರಿಕೆಯಾಗದ ಹಿನ್ನೆಲೆ ಕನಿಷ್ಠ ಆಟೋ ದರವನ್ನು 30 ರೂಪಾಯಿಯಿಂದ 40 ರೂಪಾಯಿಗೆ ಹೆಚ್ಚಿಸುವಂತೆ ಆಟೋ ಸಂಘಟನೆಗಳು ಒತ್ತಾಯಿಸಿದೆ. ಈಗಾಗಲೇ ಓಲಾ, ಉಬರ್ಗಳಲ್ಲಿ ಮಿನಿಮಮ್ ಚಾರ್ಚ್ 50 ರೂಪಾಯಿ ಇದೆ. ಆಟೋ ದರ ಪರಿಷ್ಕರಣೆಯಾಗಿ ಎರಡು ವರೆ ವರ್ಷ ಕಳೆದಿದೆ. 2021ರ ಡಿಸೆಂಬರ್ 20ರಂದು ಆಟೋ ದರ ಪರಿಷ್ಕರಿಸಲಾಗಿತ್ತು. ನಂತರ ಪರಿಷ್ಕರಣೆ ಮಾಡಿಲ್ಲ ಎಂದರು.
ಇದನ್ನೂ ಓದಿ:ಹಾಲಿನ ದರ ಏರಿಕೆ ಮಾಡುವುದು ಸರ್ಕಾರ ಅಲ್ಲ, ಕೆಎಂಎಫ್; ಈ ಬಗ್ಗೆ ಚರ್ಚೆ ಮಾಡ್ತೀನಿ -ಸಿಎಂ ಸಿದ್ದರಾಮಯ್ಯ
ಆರಂಭದ 2 ಕಿ.ಮೀ.ಗೆ 30 ರೂ. ನಂತರ ಪ್ರತಿ ಹೆಚ್ಚುವರಿ ಕಿ.ಮೀ. 15 ರೂ ದರ ನಿಗದಿಯಾಗಿದೆ. ಈ ದರ 3 ವರ್ಷಗಳ
ಹಿಂದೆ ಪರಿಷ್ಕರಿಸಲಾಗಿತ್ತು. ಇದೀಗ ಆರಂಭದ ದರ 40 ರೂಪಾಯಿ ಹಾಗೂ ಪ್ರತಿ ಕಿಲೋಮೀಟರ್ ಗೆ 20 ರೂಪಾಯಿಗೆ ಹೆಚ್ಚಿಸುವಂತೆ ಆಟೋ ಚಾಲಕರ ಸಂಘದಿಂದ ಬೆಂಗಳೂರು ನಗರ ಜಿಲ್ಲಾ ಉಪ ಆಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಅದರಲ್ಲಿ ಬೆಂಗಳೂರಿನಲ್ಲಿ ಆಟೋ ರಿಕ್ಷಾ ದರವನ್ನು ಸಗಟು ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ಪರಿಷ್ಕರಿಸಲು ಕೋರಿದ್ದು, ಪ್ರತಿ ವರ್ಷ ದರ ಪರಿಷ್ಕರಿಸಿದರೆ ಪ್ರಯಾಣಿಕರಿಗೆ ಸೇವೆ ನಿರಾಕರಿಸುವುದನ್ನು ತಪ್ಪಿಸಬಹುದು. ಅಧಿಕ ಶುಲ್ಕ ವಿಧಿಸುವ ದೂರುಗಳನ್ನು ಕಡಿಮೆ ಮಾಡಬಹುದು ಎಂಬುದಾಗಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ