ಬೆಂಗಳೂರು ಜನತೆಗೆ ಮತ್ತೊಂದು ದರ ಏರಿಕೆ ಬಿಸಿ, ನೀರಿನ ದರ ಹೆಚ್ಚಳಕ್ಕೆ ಜಲಮಂಡಳಿ ಪ್ರಸ್ತಾವನೆ
ಅಧಿಕಾರಕ್ಕೆ ಬಂದ ಹೊತ್ತಲ್ಲೇ ಜಲಮಂಡಳಿಯ ನೀರಿನ ದರ ಏರಿಕೆ ಸುಳಿವು ನೀಡಿದ್ದ ಸರ್ಕಾರ, ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ನೀರಿನ ದರ ಪರಿಷ್ಕರಣೆಗೆ ಸದ್ದಿಲ್ಲದೇ ಸಜ್ಜಾಗುತ್ತಿದೆ. 2014 ರಲ್ಲಿ ದರ ಪರಿಷ್ಕರಿಸಿದ್ದ ಜಲಮಂಡಳಿ, ಇದೀಗ ನೀರಿನ ದರ ಹೆಚ್ಚಳಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್ಗೆ ಕಾದುಕುಳಿತಿದೆ.
ಬೆಂಗಳೂರು, ಜೂನ್ 17: ರಾಜ್ಯದ ಜನರಿಗೆ ಸರ್ಕಾರ (Karnataka Government) ತೈಲ ಬೆಲೆ ಏರಿಕೆ (Petrol, Diesel Price Hike) ಶಾಕ್ ನೀಡಿರುವ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಮತ್ತೊಂದು ದರ ಏರಿಕೆ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯ ಬಳಿಕ ನೀರಿನ ಮೇಲಿನ ದರ ಏರಿಕೆ (Water Price Hike) ಸುಳಿವು ನೀಡಿದ್ದ ಸರ್ಕಾರ, ಇದೀಗ 10 ವರ್ಷಗಳ ಬಳಿಕ ನೀರಿನ ದರ ಏರಿಕೆಗೆ ಪ್ಲಾನ್ ನಡೆಸಿದೆ. ಈಗಾಗಲೇ ಜಲಮಂಡಳಿ ದರ ಏರಿಕೆಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿದ್ದು, ಜನರಿಗೆ ಮತ್ತಷ್ಟು ಹೊರೆಬೀಳುವ ಸಾಧ್ಯತೆ ಇದೆ.
ಅಧಿಕಾರಕ್ಕೆ ಬಂದ ಹೊತ್ತಲ್ಲೇ ಜಲಮಂಡಳಿಯ ನೀರಿನ ದರ ಏರಿಕೆ ಸುಳಿವು ನೀಡಿದ್ದ ಸರ್ಕಾರ, ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ನೀರಿನ ದರ ಪರಿಷ್ಕರಣೆಗೆ ಸದ್ದಿಲ್ಲದೇ ಸಜ್ಜಾಗುತ್ತಿದೆ. ನಗರಾಭಿವೃದ್ಧಿ ಸಚಿವರಾದ ಬಳಿಕ ಜಲಮಂಡಳಿಗೆ ಭೇಟಿ ನೀಡಿದ್ದ ವೇಳೆ ನೀರಿನ ದರ ಪರಿಷ್ಕರಣೆಯ ಸುಳಿವು ನೀಡಿದ್ದ ಡಿ.ಕೆ.ಶಿವಕುಮಾರ್, ಇದೀಗ ಜಲಮಂಡಳಿಯ ದರ ಏರಿಕೆ ಪ್ರಸ್ತಾವನೆಗೆ ಅಸ್ತು ಅನ್ನುವ ಸಾಧ್ಯತೆ ಇದೆ. 2014 ರಲ್ಲಿ ದರ ಪರಿಷ್ಕರಿಸಿದ್ದ ಜಲಮಂಡಳಿ, ಇದೀಗ ನೀರಿನ ದರ ಹೆಚ್ಚಳಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್ಗೆ ಕಾದುಕುಳಿತಿದೆ.
ಲೋಕಸಭಾ ಚುನಾವಣೆ ಬಳಿಕ ನೀರಿನ ದರ ಪರಿಷ್ಕರಣೆ ಬಗ್ಗೆ ಚಿಂತಿಸೋಣ ಎಂದಿದ್ದ ಸರ್ಕಾರ, ಇದೀಗ ತೆರೆಮರೆಯಲ್ಲಿ ನೀರಿನ ದರ ಪರಿಷ್ಕರಣೆಗೆ ಸಜ್ಜಾಗುತ್ತಿದೆ. ಗೃಹಬಳಕೆ, ವಾಣಿಜ್ಯ ಸೇರಿ ಎಲ್ಲ ರೀತಿಯ ನೀರು ಪೂರೈಕೆ ಮೇಲೆ ಶೇ40 ರಷ್ಟು ದರ ಏರಿಕೆಗೆ ಚರ್ಚೆ ನಡೆಯುತಿದ್ದು, ಸರ್ಕಾರ ಒಪ್ಪಿಗೆ ಸೂಚಿಸೂವುದೆ ತಡ, ದರ ಪರಿಷ್ಕರಿಸಲು ಜಲಮಂಡಳಿ ಕೂಡ ಸಜ್ಜಾಗಿ ಕುಳಿತಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಸದಿದ್ದರೆ ಕರ್ನಾಟಕ ಬಂದ್ಗೆ ಕರೆ ಕೊಡುತ್ತೇವೆ: ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ
ಈಗಾಗಲೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬೆಂಗಳೂರು ಮಂದಿ, ನೀರಿನ ದರ ಏರಿಕೆ ಪ್ಲ್ಯಾನ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೆ ಸರಿಯಾಗಿ ನೀರು ಬಾರದಿದದ್ದರೂ ಬಿಲ್ ಕಟ್ಟುತ್ತಿದ್ದೇವೆ, ಈಗ ನೀರಿನ ದರವನ್ನು ಏರಿಕೆ ಮಾಡಿದರೆ ಬದುಕುವುದು ಹೇಗೆ ಅಂತ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಒಟ್ಟಿನಲ್ಲಿ ಗ್ಯಾರಂಟಿಗಳ ಹೆಸರಲ್ಲಿ ಬಿಟ್ಟಿ ಭಾಗ್ಯಗಳನ್ನು ನೀಡಿದ್ದ ಸರ್ಕಾರ, ಇದೀಗ ಪರೋಕ್ಷವಾಗಿ ಆದಾಯ ಸಂಗ್ರಹಕ್ಕೆ ಕೈ ಹಾಕುತ್ತಿದೆ ಅಂತ ಸಾರ್ವಜನಿಕರಲ್ಲಿ ಚರ್ಚೆ ಶುರುವಾಗಿದೆ. ಚುನಾವಣೆ ಮುಗಿಯುತ್ತಿದ್ದಂತೆ ತೈಲ ಬೆಲೆ ಏರಿಸಿರುವ ಸರ್ಕಾರ, ನೀರಿನ ದರ ಹೆಚ್ಚಳ ಮಾಡಿದರೆ ಜೀವನ ಹೇಗೆ ಅಂತ ಜನರು ಕಂಗಾಲಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ