ಪೆಟ್ರೋಲ್, ಡೀಸೆಲ್ ಬೆಲೆ ಇಳಿಸದಿದ್ದರೆ ಕರ್ನಾಟಕ ಬಂದ್ಗೆ ಕರೆ ಕೊಡುತ್ತೇವೆ: ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ
ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳವಾಗಿದ್ದನ್ನು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆಗಳ ಒಕ್ಕೂಟ ಖಂಡಿಸಿದೆ. ಕರ್ನಾಟಕ ರಾಜ್ಯ ಖಾಸಗಿ ಸಾರಿಗೆಗಳ ಒಕ್ಕೂಟ ರಾಜ್ಯಾದ್ಯಂತ ಪ್ರತಿಭಟನೆ ಮಾಡಲು ನಿರ್ಧರಿಸಿದೆ.
ಬೆಂಗಳೂರು, ಜೂನ್ 16: ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವುದನ್ನು (Petrol and Diesel Price Hike) ಖಂಡಿಸುತ್ತೇವೆ. ಪೆಟ್ರೋಲ್, ಡೀಸೆಲ್ ದರ ಇಳಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ (Karnataka Private Transport Union) ರಾಜ್ಯಾಧ್ಯಕ್ಷ ನಟರಾಜ್ ಶರ್ಮ ಹೇಳಿದರು. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೆಟ್ರೋಲ್ ದರ ಇಳಿಸದಿದ್ದರೆ ಮೊದಲು ಬೆಂಗಳೂರು ಬಂದ್ ಮಾಡುತ್ತೇವೆ. ನಂತರ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮ ನೆಲಕಚ್ಚಿದೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ದೊಡ್ಡ ಹೊಡೆತ ಬಿದ್ದಿದೆ. ತೈಲ ದರ ಏರಿಕೆ ಮಾಡಿದರೆ ಗ್ರಾಹಕರಿಗೆ ಸೇವೆ ನೀಡೋದು ಹೇಗೆ? ರೋಡ್ ಟ್ಯಾಕ್ಸ್, ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿದರೆ, ಪ್ರಯಾಣಿಕರ ಮೇಲೆ ಹೆಚ್ಚಿನ ದರ ಹಾಕಬೇಕಾಗುತ್ತದೆ ಎಂದರು.
ಇದನ್ನೂ ಓದಿ: ಬೆಲೆ ಏರಿಕೆ ಭಾಗ್ಯ ಕೊಟ್ಟ ಕಾಂಗ್ರೆಸ್ ಸರ್ಕಾರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ: ಆರ್ ಅಶೋಕ್
ಸರ್ಕಾರ ತನ್ನ ದಿವಾಳಿತನವನ್ನು ಎತ್ತಿ ತೋರಿಸುತ್ತಿದೆ. ಚುನಾವಣೆ ಸಮಯದಲ್ಲಿ ತೆರಿಗೆ ಏರಿಕೆ ಮಾಡಿದರೆ ಜನರು ಮತ ಹಾಕುವುದಿಲ್ಲ ಅಂತ ಭಯದಲ್ಲಿದ್ದ ಸರ್ಕಾರ ದರ ಏರಿಕೆ ಮಾಡಿರಲಿಲ್ಲ. ಶಕ್ತಿ ಯೋಜನೆಯನ್ನು ಸರ್ಕಾರ ಕೈಬಿಡಲಿಲ್ಲ ಅಂದರೆ ದೊಡ್ಡ ಮಟ್ಟದಲ್ಲಿ ನಮಗೆ ಹೊಡೆತ ಬೀಳುತ್ತದೆ. ಖಾಸಗಿ ಸಾರಿಗೆ ಉದ್ಯಮ ನಶಿಸಿ ಹೋಗುವಂತ ಸಂದರ್ಭದಲ್ಲಿ ಕೊನೆಯ ಮೊಳೆ ಹೊಡೆಯಲು ಸರ್ಕಾರ ಮುಂದಾಗಿದೆ ಎಂದು ವಾಗ್ದಾಳಿ ಮಾಡಿದರು.
ತೆರಿಗೆ ವಾಪಸ್ಸು ಪಡೆದಿಲ್ಲ ಎಂದರೆ 2023ರ ಸೆಪ್ಟೆಂಬರ್ 11 ರಂದು ನಡೆಸಿದ ರೀತಿಯಲ್ಲೇ 31 ಖಾಸಗಿ ಸಾರಿಗೆ ಸಂಘಟನೆಗಳು ಪ್ರತಿಭಟನೆ ನಡೆಸುತ್ತವೆ. ಮೊದಲು ಬೆಂಗಳೂರು ಬಂದ್ಗೆ ಕರೆ ಕೊಡುತ್ತೇವೆ. ಬೆಲೆ ಕಡಿಮೆ ಆಗಲಿಲ್ಲ ಅಂದರೆ ಕರ್ನಾಟಕ ಬಂದ್ಗೆ ಕರೆ ಕೊಡುತ್ತೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ