ಪೆಟ್ರೋಲ್-ಡೀಸೆಲ್ ಬೆಲೆ ದುಬಾರಿ; ರಾಜ್ಯ ಸರ್ಕಾರದ ನಡೆಗೆ ಸಾರ್ವಜನಿಕರಿಂದ ಆಕ್ರೋಶ

ರಾಜ್ಯದಲ್ಲಿ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು ಜನರು ಆಕ್ರೋಶ ಹೊರ ಹಾಕಿದ್ದಾರೆ. ಬಿಜೆಪಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಪೆಟ್ರೋಲ್ ಮೇಲೆ 3 ರೂಪಾಯಿ, ಡಿಸೇಲ್ ಬೆಲೆಯಲ್ಲಿ ಮೂರುವರೆ ರೂಪಾಯಿ ಏರಿಕೆ ಮಾಡಲಾಗಿದೆ. ಸರ್ಕಾರದ ಈ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.

ಪೆಟ್ರೋಲ್-ಡೀಸೆಲ್ ಬೆಲೆ ದುಬಾರಿ; ರಾಜ್ಯ ಸರ್ಕಾರದ ನಡೆಗೆ ಸಾರ್ವಜನಿಕರಿಂದ ಆಕ್ರೋಶ
ಬಿಜೆಪಿ ಪ್ರತಿಭಟನೆ
Follow us
ಆಯೇಷಾ ಬಾನು
|

Updated on: Jun 16, 2024 | 1:08 PM

ಬೆಂಗಳೂರು, ಜೂನ್.16: ಕಾಂಗ್ರೆಸ್ ಸರ್ಕಾರ (Congress Government) ರಾಜ್ಯದ ವಾಹನ ಸವಾರರಿಗೆ ಬಿಗ್ ಶಾಕ್ ಕೊಟ್ಟಿದೆ. ಒಂದ್ಕಡೆ ಗ್ಯಾರಂಟಿ ಕೊಟ್ಟಿದ್ದೇವೆ ಅಂತಾ ಹೇಳೋ ಸರ್ಕಾರ, ಮತ್ತೊಂದ್ಕಡೆ ಪೆಟ್ರೋಲ್-ಡೀಸೆಲ್ ಬೆಲೆ (Petrol Diesel Price Increase) ಏರಿಸಿ ಸಾರ್ವಜನಿಕರಿಗೆ ಬರೆ ಎಳೆದಿದೆ. ಪೆಟ್ರೋಲ್ ಮೇಲೆ 3 ರೂಪಾಯಿ, ಡಿಸೇಲ್ ಬೆಲೆಯಲ್ಲಿ ಮೂರುವರೆ ರೂಪಾಯಿ ಏರಿಕೆ ಮಾಡಿದೆ. ಸರ್ಕಾರದ ಈ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ. ಹೀಗೆ ತೈಲ ಬೆಲೆ ಏರಿಸಿದ್ರೆ ಬಡವರು ಏನು ಮಾಡಬೇಕು ಎಂದು ಕಿಡಿಕಾರ್ತಿದ್ದಾರೆ.

ಕಿವಿಯಲ್ಲಿ ದಾಸವಾಳ, ಕೈಯಲ್ಲಿ ತೆಂಗಿನ ಚಿಪ್ಪು; ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಕಿವಿಯಲ್ಲಿ ದಾಸವಾಳ. ಕೈಯಲ್ಲಿ ತೆಂಗಿನ ಚಿಪ್ಪು. ಬಾಯಲ್ಲಿ ಲೂಟಿ ಲೂಟಿ ಅನ್ನೋ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಗ್ಯಾರಂಟಿಗೆ ಹಣ ಬೇಕಲ್ವಾ ಎಂದ ಸಚಿವ ಎಂ.ಬಿ.ಪಾಟೀಲ್

ಪೆಟ್ರೋಲ್-ಡೀಸೆಲ್ ಏರಿಕೆಯನ್ನ ಸಮರ್ಥಿಸಿಕೊಂಡಿರೋ ಸಚಿವ ಎಂ.ಬಿ ಪಾಟೀಲ್, ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗೆ ಹಣ ಬೇಕಲ್ವಾ ಎಂದಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರೋ ಪ್ರಹ್ಲಾದ್ ಜೋಶಿ, 2 ಸಾವಿರ ಕೊಟ್ಟು 4 ಸಾವಿರ ಕಿತ್ತುಕೊಳ್ತಿದ್ದಾರೆಂದು ಗರಂ ಆಗಿದ್ದಾರೆ.

‘2 ಸಾವಿರ ಕೊಟ್ಟು 4 ಸಾವಿರ ಕಿತ್ತುಕೊಳ್ತಿದ್ದಾರೆ’ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

ಇನ್ನು ವಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ಬೆಂಕಿ ಉಗುಳಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಈ ಹಿಂದೆ ಬೆಲೆ ಏರಿಕೆ ಬಗ್ಗೆ ಆಡಿದ್ದ ಮಾತುಗಳನ್ನ ಪ್ರಸ್ತಾಪಿಸಿದ್ರು. ಇಷ್ಟೇ ಅಲ್ಲದೇ ಕೈ ನಾಯಕರು ಮಾಡಿದ್ದ ಪ್ರತಿಭಟನೆಯ ಫೋಟೋ ತೋರಿಸಿ ಸಿಎಂ, ಡಿಸಿಎಂ ವಿರುದ್ಧ ಗುಡುಗಿದ್ರು. ಇತ್ತ ಹೆಚ್​.ಡಿ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಕೂಡ ಸರ್ಕಾರದ ಕಾಲೆಳೆದಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಭರವಸೆಯಲ್ಲಿದ್ದ ಜನರಿಗೆ ಬೆಲೆ ಏರಿಕೆ ಬರೆ; ಪೆಟ್ರೋಲ್‌ – ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ

ಗ್ಯಾರಂಟಿಗಳ ಹೊಡೆತಕ್ಕೆ ತತ್ತರಿಸಿ ಹೋಯ್ತಾ ರಾಜ್ಯ ಸರ್ಕಾರ?

ಕಾಂಗ್ರೆಸ್ ಮಹತ್ವದ ಗ್ಯಾರಂಟಿ ಯೋಜನೆಗಳನ್ನ ಜಾರಿಗೊಳಿಸಿದೆ. ಜನರಿಗೆ ಅನುಕೂಲ ಆಗ್ತಿರೋ ಇದೇ ಯೋಜನೆ ಸರ್ಕಾರಕ್ಕೆ ಹೊರೆಯಾಗಿದೆಯಾ ಅನ್ನೋ ಅನುಮಾನ ಶುರುವಾಗಿದೆ. ರಾಜ್ಯ ಸರ್ಕಾರ ಅಂದಾಜು ಮಾಡಿದ್ದಕ್ಕಿಂತ 5 ಗ್ಯಾರಂಟಿಗಳ ವೆಚ್ಚ ಅಧಿಕವಾಗಿದೆ. ಪಂಚ ಗ್ಯಾರಂಟಿಗಳಿಗೆ 36 ಸಾವಿರ ಕೋಟಿ ಎಂದು ಸರ್ಕಾರ ನಿರೀಕ್ಷೆ ಮಾಡಿತ್ತು. ಆದ್ರೆ ಕಳೆದ ಎಂಟು ತಿಂಗಳಲ್ಲಿ ವೆಚ್ಚವಾಗಿದ್ದು ಬರೋಬ್ಬರಿ 46 ಸಾವಿರ ಕೋಟಿ. ಈ ವರ್ಷ 52 ಸಾವಿರ ಕೋಟಿಗೂ ಹೆಚ್ಚು ವೆಚ್ಚವಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಹೀಗಾಗಿಯೇ ಸರ್ಕಾರಕ್ಕೆ ಹೊಸ ಟೆನ್ಷನ್ ಶುರುವಾಗಿದೆ.

ಅದೇನೆ ಇರಲಿ. ತೈಲ ಬೆಲೆ ದರ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಮತ್ತಷ್ಟು ಏರಿಕೆ ಆಗೋದು ನಿಶ್ಚಿತ. ಈಗಾಗಲೇ ಬೆಲೆ ಏರಿಕೆ ಬೆಂಕಿಯಲ್ಲಿ ಬೇಯ್ತಿರೊ ಜನರಿಗೆ ಮತ್ತಷ್ಟು ಶಾಕ್ ಎದುರಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ