ಗ್ಯಾರಂಟಿ ಭರವಸೆಯಲ್ಲಿದ್ದ ಜನರಿಗೆ ಬೆಲೆ ಏರಿಕೆ ಬರೆ; ಪೆಟ್ರೋಲ್‌ – ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ

ಗ್ಯಾರಂಟಿ ಯೋಜನೆಗಳು ಸಿಕ್ಕಿದ್ದರಿಂದ ಜೇಬಿನಲ್ಲಿ ಕೊಂಚ ಕಾಸು ಉಳಿಯುತ್ತೆ ಅಂತ ಬಡ ಮಧ್ಯಮ ವರ್ಗದ ಜನರು ಅಂದುಕೊಂಡಿದ್ದರು. ಇನ್ನೇನು ಶ್ರಾವಣ ಶುರುವಾಗತ್ತೆ ಹಬ್ಬ ಹರಿದಿನಗಳಿಗೆ ಅನುಕೂಲ ಅಂದುಕೊಂಡಿದ್ದ ರಾಜ್ಯದ ಜನರಿಗೆ ಸರ್ಕಾರ ಬೆಲೆ ಏರಿಕೆಯ ಬರೆ ನೀಡಿದೆ. ಪೆಟ್ರೋಲ್ ಡೀಸೆಲ್ ಮೇಲಿನ ಸುಂಕವನ್ನು ಏರಿಕೆ ಮಾಡಲಾಗಿದೆ. ಪಂಚ ಗ್ಯಾರಂಟಿಗಳ ವೆಚ್ಚಕ್ಕೆ ಕಾಂಗ್ರೆಸ್ ಸರ್ಕಾರ ತತ್ತರಿಸಿದ್ದು ಜನರಿಗೆ ಶಾಕ್ ನೀಡಿದೆ.

ಗ್ಯಾರಂಟಿ ಭರವಸೆಯಲ್ಲಿದ್ದ ಜನರಿಗೆ ಬೆಲೆ ಏರಿಕೆ ಬರೆ; ಪೆಟ್ರೋಲ್‌ - ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ
ಪೆಟ್ರೋಲ್Image Credit source: Business Standard
Follow us
| Updated By: ಆಯೇಷಾ ಬಾನು

Updated on:Jun 16, 2024 | 9:23 AM

ಬೆಂಗಳೂರು, ಜೂನ್.16: ತಕ್ಷಣದಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್‌ (Petrol) ಮತ್ತು ಡೀಸೆಲ್‌ (Diesel) ಮೇಲಿನ ತೆರಿಗೆಯನ್ನು ರಾಜ್ಯ ಸರಕಾರ (Karnataka Government) ಹೆಚ್ಚಳ ಮಾಡಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಕರ್ನಾಟಕ ಮಾರಾಟ ತೆರಿಗೆ ಸುಮಾರು ಶೇಕಡಾ 4ರಷ್ಟು ಏರಿಕೆ ಮಾಡಲಾಗಿದೆ. ಇದರಿಂದ ಲೀಟರ್‌ಗೆ 3 ರೂ.ಗಿಂತ ಹೆಚ್ಚು ಏರಿಕೆ ಕಾಣಲಿದೆ ಪೆಟ್ರೋಲ್‌ ಹಾಗೂ ಡೀಸೆಲ್‌ ದರ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ 102.87 ರೂ.ಗೆ ತಲುಪಲಿದೆ, ಒಂದು ಲೀಟರ್‌ ಡೀಸೆಲ್‌ ಬೆಲೆ 88.95 ರೂ.ಗೆ ಮುಟ್ಟಲಿದೆ.

ಸರ್ಕಾರದ ನಿರೀಕ್ಷೆಗಿಂತ ಪಂಚ ಗ್ಯಾರಂಟಿಗಳ ವೆಚ್ಚ ಹೆಚ್ಚಾಗಿದೆ. ಐದು ಗ್ಯಾರಂಟಿಗಳಿಗೆ 36 ಸಾವಿರ ಕೋಟಿ ಎಂದು ಕಾಂಗ್ರೆಸ್ ಸರ್ಕಾರ ನಿರೀಕ್ಷೆಯಲ್ಲಿತ್ತು. ಆದರೆ ಎಂಟು ತಿಂಗಳಿಗೆ 46 ಸಾವಿರ ಕೋಟಿಗೂ ಹೆಚ್ಚು ವೆಚ್ಚವಾಗಿದೆ. ಈ ವರ್ಷ 52 ಸಾವಿರ ಕೋಟಿಗೂ ಹೆಚ್ಚು ವೆಚ್ಚವಾಗುವ ಸಾಧ್ಯತೆ ಇದೆ. ನಿರಂತರವಾಗಿ ವೆಚ್ಚ ಹೆಚ್ಚಳದಿಂದ ಸರ್ಕಾರಕ್ಕೆ ಟೆನ್ಶನ್ ಶುರುವಾಗಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ಸರಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ.

ಹಣಕಾಸು ಇಲಾಖೆ ಹೊರಡಿಸಿದ ಅಧಿಸೂಚನೆ ಪ್ರಕಾರ, ಪೆಟ್ರೋಲ್‌ ಮೇಲಿನ ಕರ್ನಾಟಕ ಮಾರಾಟ ತೆರಿಗೆ (ಕೆಎಸ್‌ಟಿ)ಯನ್ನು ಸರಕಾರ ಶೇ. 25.92ರಿಂದ ಶೇ. 29.84ಕ್ಕೆ ಹೆಚ್ಚಿಸಿದೆ. ಇದೇ ರೀತಿ ಡೀಸೆಲ್‌ ಮೇಲಿನ ತೆರಿಗೆಯನ್ನು ಶೇ. 14.34ರಿಂದ ಶೇ. 18.44ಕ್ಕೆ ಏರಿಕೆ ಮಾಡಿದೆ. ಈ ಹೊಸ ತೆರಿಗೆಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಹೊರಡಿಸಲಾದ ಕರ್ನಾಟಕ ರಾಜ್ಯ ಪತ್ರದಲ್ಲಿ ತಿಳಿಸಲಾಗಿದೆ. ಪೆಟ್ರೋಲ್‌ ಮೇಲಿನ ಕರ್ನಾಟಕ ಮಾರಾಟ ತೆರಿಗೆಯನ್ನು ಶೇ. 3.92ರಷ್ಟು ಹೆಚ್ಚಿಸಲಾಗಿದ್ದರೆ, ಡೀಸೆಲ್‌ ಮೇಲಿನ ತೆರಿಗೆಯನ್ನು ಶೇ. 4.1ರಷ್ಟು ಏರಿಕೆ ಮಾಡಲಾಗಿದೆ.

ಇದನ್ನೂ ಓದಿ: Petrol Diesel Price on June 16: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿ, ದೇಶದ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ನವೆಂಬರ್ 4, 2021ರಂದು ಕೇಂದ್ರ ಸರಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ದರವನ್ನು ಕ್ರಮವಾಗಿ 5 ರೂ. ಮತ್ತು 10 ರೂ. ಇಳಿಕೆ ಮಾಡಿತ್ತು. ಇದಾದ ಬೆನ್ನಲ್ಲೇ ಆಗಿನ ಬಸವರಾಜ ಬೊಮ್ಮಾಯಿ ಸರಕಾರ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ದರನ್ನು ಲೀಟರ್‌ಗೆ ತಲಾ 7 ರೂ. ಇಳಿಸಿತ್ತು. ಅಷ್ಟೇ ಅಲ್ಲದೇ ಸತತವಾಗಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಒಂದಿಷ್ಟು ಕ್ರಮ ಕೈಗೊಂಡಿದ್ದರಿಂದ ಪೆಟ್ರೋಲ್ ಬೆಲೆ ಶತಕದ ಗಡಿಯಲ್ಲೇ ನಿಂತಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ತನ್ನ ತೆರಿಗೆ ಹೆಚ್ಚಳ ಮಾಡಿರುವುದರಿಂದ ಸಹಜವಾಗಿಯೇ ಬೆಲೆ ಏರಿಕೆ ಬಿಸಿ ಮಧ್ಯಮ ವರ್ಗವನ್ನು ತಟ್ಟಲಿದೆ.

ಗ್ಯಾರಂಟಿ ಹಣ ಹೊಂದಿಸಲು ವಿವಿಧ ಆಯಾಮಗಳಲ್ಲಿ ಹಣ ಕ್ರೋಡೀಕರಣ

ಇನ್ನು ಗ್ಯಾರಂಟಿಗಳಿಗೆ ಹಣ ಹೊಂದಿಸಲು ವಿವಿಧ ಆಯಾಮಗಳಲ್ಲಿ ಹಣ ಕ್ರೋಡೀಕರಣ ಮಾಡಲಾಗುತ್ತಿದೆ. ಮದ್ಯದ ಬೆಲೆ ಹೆಚ್ಚಳ, ಆಸ್ತಿ ನೋಂದಣಿ ದರ ಬಳಿಕ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ರಿಟೇಲ್ ಸೇಲ್ಸ್ ಟ್ಯಾಕ್ಸ್ ದರ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:21 am, Sun, 16 June 24