Petrol Diesel Price Hike: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ; ಮಾರಾಟ ತೆರಿಗೆ ಹೆಚ್ಚಿಸಿದ ಸರ್ಕಾರ

Petrol, Diesel Retail Sales Tax hike in Karnataka: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಶಾಕ್ ನೀಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಳ ಮಾಡಲಾಗಿದ್ದು, ಇಂಧನ ದರ ರಾಜ್ಯದಲ್ಲಿ ದುಬಾರಿಯಾಗಲಿದೆ. ವಿವರ ಇಲ್ಲಿದೆ.

Petrol Diesel Price Hike: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ; ಮಾರಾಟ ತೆರಿಗೆ ಹೆಚ್ಚಿಸಿದ ಸರ್ಕಾರ
ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆ ಹೆಚ್ಚಳ
Follow us
| Updated By: ಗಣಪತಿ ಶರ್ಮ

Updated on:Jun 15, 2024 | 4:35 PM

ಬೆಂಗಳೂರು, ಜೂನ್ 15: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ (Retail Sales Tax) ದರವನ್ನು ಹೆಚ್ಚಳ ಮಾಡುವ ನಿರ್ಧಾರವನ್ನು ಕರ್ನಾಟಕ ಸರ್ಕಾರ ಶನಿವಾರ ಪ್ರಕಟಿಸಿದೆ. ತೆರಿಗೆ ದರ ಹೆಚ್ಚಳದ ಕಾರಣ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳ‌ವಾಗಲಿದೆ. ಇದರೊಂದಿಗೆ, ಸುದೀರ್ಘ ಸಮಯದ ನಂತರ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ (Petrol, Diesel Price) ದುಬಾರಿಯಾಗುತ್ತಿದೆ.

ಈ ಹಿಂದೆ ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಶೇ 25.92 ರಷ್ಟಿತ್ತು. ಈಗ ಶೇ 3.9ರಷ್ಟು ಹೆಚ್ಚಳ ಮಾಡಲಾಗಿದ್ದು, ಶೇ 29.84 ಕ್ಕೆ ಏರಿಕೆಯಾಗಿದೆ. ಡಿಸೇಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಈ‌ ಹಿಂದೆ ಶೇ 14.34 ರಷ್ಟಿತ್ತು. ಈಗ ಶೇ 4.1 ರಷ್ಟು ಹೆಚ್ಚಳ ಮಾಡಲಾಗಿದ್ದು, ಶೇ 18.44 ಕ್ಕೆ ಏರಿಕೆಯಾಗಿದೆ. ಪರಿಣಾಮವಾಗಿ ರಾಜ್ಯದಲ್ಲಿ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡಿಸೇಲ್ ದರ 3.50 ರೂಪಾಯಿ ಹೆಚ್ಚಳವಾಗಲಿದೆ.

ಯಾವಾಗಿನಿಂದ ಹೆಚ್ಚಳ?

ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಶನಿವಾರ (ಜೂನ್ 15) ಮಧ್ಯಾಹ್ನ ಹೊರಡಿಸಿರುವ ಸುತ್ತೋಲೆಯಲ್ಲಿ ಸರ್ಕಾರ ಉಲ್ಲೇಖಿಸಿದೆ.

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ದರ 99.84 ರೂ. ಆಗಿದ್ದು, ಡೀಸೆಲ್‌ ದರ ಲೀಟರ್‌ಗೆ 85.93 ರೂ. ಆಗಿದೆ. ಇದೀಗ ತೆರಿಗೆ ಹೆಚ್ಚಳದ ಬಳಿಕ ಪೆಟ್ರೋಲ್‌ ದರ ಲೀಟರ್‌ಗೆ 102.84 ರೂ. ಆಗಲಿದೆ. ಡೀಸೆಲ್‌ ದರ ಲೀಟರ್‌ಗೆ 89.43 ರೂ. ಆಗಲಿದೆ. ಸಾಗಾಟ ವೆಚ್ಚಕ್ಕನುಗುಣವಾಗಿ ದರ ವ್ಯತ್ಯಾಸವಾಗುವುದರಿಂದ ವಿವಿಧ ಜಿಲ್ಲೆಗಳಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ದರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳು ಮುಕ್ತಾಯಗೊಂಡು ಫಲಿತಾಂಶ ಪ್ರಕಟವಾಗಿ ಚುನಾವಣಾ ನೀತಿ ಸಂಹಿತೆ ಕೊನೆಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಇಲಾಖೆಗಳ ಜತೆ ಸಮಾಲೋಚನೆ ನಡೆಸಿದ್ದರು. ಆದಾಯ ಹೆಚ್ಚಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದ್ದರು. ಸರ್ಕಾರ ಈಗಾಗಲೇ ಮದ್ಯ ಮಾರಾಟದ ಮೇಲೆ ತೆರಿಗೆ ಹೆಚ್ಚಳ ಮಾಡಿದೆ. ವಾಹನ, ರಸ್ತೆ ತೆರಿಗೆ ಹೆಚ್ಚಳದ ಆಯ್ಕೆಯೂ ಸರ್ಕಾರದ ಮುಂದಿಲ್ಲ. ಹೀಗಾಗಿ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ಮಾರಾಟದ ಮೇಲಿನ ತೆರಿಗೆ ಹೆಚ್ಚಳದ ಮೂಲಕ ಬೊಕ್ಕಸ ತುಂಬಿಸಲು ಮುಂದಾಗಿದೆ.

ಇದನ್ನೂ ಓದಿ: ಬಿಹಾರ ಹಾಗೂ ಛತ್ತೀಸ್​ಗಢದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:00 pm, Sat, 15 June 24

ತಾಜಾ ಸುದ್ದಿ