ಬೆಂಗಳೂರು, ಜುಲೈ 5: ಬೆಂಗಳೂರಿನಲ್ಲಿ ಡೆಂಗ್ಯೂ ಹಾವಳಿ ಮಿತಿ ಮೀರಿದ್ದು, ನೈರ್ಮಲ್ಯ ಕಾಪಾಡದಿರುವುದು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿ ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತಿದೆ. ಹೀಗಾಗಿ ಸ್ವಚ್ಛತೆ ಕಾಪಾಡದವರಿಗೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ. ವೈಯಕ್ತಿಕ ಜಾಗಗಳಲ್ಲಿ ಮತ್ತು ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವಂತೆ ಮಾಡುವ ಸಾರ್ವಜನಿಕರಿಗೆ ದಂಡ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಖಾಸಗಿಯವರ ನಿವೇಶನ, ಜಾಗ ಅಥವಾ ಸ್ವತ್ತುಗಳಲ್ಲಿ ಸೊಳ್ಳೆ ಉತ್ಪತ್ತಿ ಕಂಡು ಬಂದಲ್ಲಿ ಮೊದಲಿಗೆ ಎಚ್ಚರಿಕೆ ನೀಡಲಾಗುತ್ತದೆ. ಅದಕ್ಕೆ ಸ್ಪಂದಿಸದಿದ್ದರೆ ಮೊದಲ ಹಂತದಲ್ಲಿ 50 ರೂ. ದಂಡ ವಿಧಿಸಲಾಗುತ್ತದೆ. ನಂತರ ಆ ಸ್ಥಳ ಸ್ವಚ್ಛವಾಗುವ ತನಕ ಪ್ರತಿ ನಿತ್ಯ 15 ರೂ. ದಂಡ ವಿಧಿಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ಅನೈರ್ಮಲ್ಯಕ್ಕೆ ದಂಡದ ಮೊತ್ತ ಕಡೆಮೆ ಇದೆ. ಇದನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ ಎಂದು ಬಿಬಿಎಂಪಿ ಮೂಲಗಳಿಂದ ಅಧಿಕೃತ ಮಾಹಿತಿ ದೊರೆತಿದೆ.
ಒಂದೆಡೆ ಖಾಸಗಿಯವರಿಗೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದ್ದರೆ ಅತ್ತ ಸಾರ್ವಜನಿಕ ಸ್ಥಳಗಳೇ ಸೊಳ್ಳೆ ಉತ್ಪತ್ತಿಯ ಹಾಟ್ಸ್ಪಾಟ್ಗಳಾಗಿ ಪರಿಣಮಿಸಿರುವುದು ಕಂಡುಬಂದಿದೆ. ನಗರದ ಬಹುತೇಕ ರಸ್ತೆಗಳಲ್ಲಿರುವ ಕಸದ ರಾಶಿ ಇದೀಗ ಸೊಳ್ಳೆಗಳ ಸ್ಪಾಟ್ ಆಗಿ ಬದಲಾಗಿದೆ. ಸಸ್ಯಕಾಶಿ ಲಾಲ್ಬಾಗ್ ಸುತ್ತಮುತ್ತ ಫುಟ್ ಪಾತ್ನಲ್ಲಿ ರಾಶಿ ರಾಶಿ ಕಸ ಬಿದ್ದಿದ್ದು, ಕಸದ ರಾಶಿ ಸೊಳ್ಳೆಗಳ ವಾಸಸ್ಥಾನವಾಗಿರುವುದರಿಂದ ಡೆಂಗ್ಯೂ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.
ವಿಧಾನಸೌಧದ ಕೂಗಳತೆ ದೂರದಲ್ಲಿರುವ ಕೆಆರ್ ಸರ್ಕಲ್ ಬಳಿ ಪಾಲಿಕೆಯೇ ನಿರ್ಮಿಸಿದ್ದ ಕಾರಂಜಿ ಇದೀಗ ಸೊಳ್ಳೆಗಳ ಹಾಟ್ಸ್ಪಾಟ್ ಆಗಿ ಬದಲಾಗಿದೆ. ಮಳೆ ನೀರು ನಿಂತಿರುವ ಜಾಗದಲ್ಲಿ ಸೊಳ್ಳೆಗಳ ಉತ್ಪತಿಯಾಗ್ತಿದ್ದು, ಕಾರಂಜಿಯನ್ನ ಸರಿಯಾಗಿ ನಿರ್ವಹಿಸದ ಪಾಲಿಕೆ ಹಾಗೂ ಸರ್ಕಾರಕ್ಕೆ ಜನರು ಹಿಡಿಶಾಪ ಹಾಕ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಿದ ಡೆಂಗ್ಯೂ ಪ್ರಕರಣಗಳು: ಮೈಸೂರು, ಉತ್ತರ ಕನ್ನಡದಲ್ಲಿ ಸೋಂಕಿಗೆ ಮೊದಲ ಬಲಿ
ಇತ್ತ ನಗರದಲ್ಲಿ ಮನೆ ಮನೆ ಸರ್ವೇ ಮಾಡುತ್ತಿದ್ದೇವೆ ಎನ್ನುತ್ತಿರುವ ಪಾಲಿಕೆ ಅಧಿಕಾರಿಗಳನ್ನು ಈ ಬಗ್ಗೆ ಕೇಳಿದರೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಲ್ಲಿ ಅಂಥ ಸ್ಥಳಗಳಿವೆಯೋ ಅಲ್ಲೆಲ್ಲ ನಿಗಾ ಇಟ್ಟಿದ್ದೇವೆ. ನಮ್ಮ ತಂಡ ಸ್ವಚ್ಚತೆ ಕಾಪಾಡಲು ಕ್ರಮ ಕೈಗೊಳ್ಳುತ್ತಿದೆ ಎಂದು ಸಬೂಬು ಹೇಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ