ಕರ್ನಾಟಕದಲ್ಲಿ ಹೆಚ್ಚಿದ ಡೆಂಗ್ಯೂ ಪ್ರಕರಣಗಳು: ಮೈಸೂರು, ಉತ್ತರ ಕನ್ನಡದಲ್ಲಿ ಸೋಂಕಿಗೆ ಮೊದಲ ಬಲಿ
ಎಲ್ಲೆಲ್ಲೂ ಅನಾರೋಗ್ಯ, ಜ್ವರ, ಕೆಮ್ಮು, ಮೈಕೈ ನೋವು. ಆಸ್ಪತ್ರೆಗಳು ಹೌಸ್ಫುಲ್ ಆಗುತ್ತಿವೆ. ಮಾರಕ ಡೆಂಗ್ಯೂ ಇಡೀ ರಾಜ್ಯವನ್ನೇ ನಡುಗುವಂತೆ ಮಾಡಿದೆ. ಜಿಲ್ಲೆ ಜಿಲ್ಲೆಯಲ್ಲೂ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಪುಟ್ಟ ಮಕ್ಕಳನ್ನೇ ಹೆಚ್ಚು ಬಾಧಿಸುತ್ತಿದೆ. ಮೈಸೂರು, ಉತ್ತರ ಕನ್ನಡದಲ್ಲಿ ಕೂಡ ಡೆಂಗ್ಯೂವಿನಿಂದ ಸಾವು ಸಂಭವಿಸಿದೆ.
ಬೆಂಗಳೂರು, ಜುಲೈ 5: ಈಡಿಸ್ ಸೊಳ್ಳೆಗಳಿಂದ ಹರಡುತ್ತಿರುವ ಡೆಂಗ್ಯೂ ರಾಜ್ಯದ ಜನರನ್ನ ದಂಗು ಬಡಿಸಿದೆ. ಜನವರಿಯಿಂದ ಜುಲೈ 3ರವರೆಗೆ ರಾಜ್ಯದಲ್ಲಿ 6,300ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಸೋಂಕು ತಗುಲಿದೆ. ಮೈಸೂರಿನಲ್ಲಿ ಸಮುದಾಯ ಆರೋಗ್ಯಾಧಿಕಾರಿಯೇ ಸೋಂಕಿಗೆ ಬಲಿಯಾಗಿದ್ದಾರೆ. ಹುಣಸೂರು ಆರೋಗ್ಯಾಧಿಕಾರಿ ನಾಗೇಂದ್ರ ಮೃತಪಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಡೆಂಗ್ಯೂ ಮೊದಲ ಬಲಿ ಪಡೆದಿದೆ. ಅಂಕೋಲದ ಬಾವಿಕೇರಿ ನಿವಾಸಿ ಹರೇರಾಮ್ ಗೋಪಾಲ್ ಭಟ್, ವಾರದಿಂದ ಬೆಳಗಾವಿ ಆಸ್ಪತ್ರೆಯಲ್ಲಿ ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದವರು ಮೃತಪಟ್ಟಿದ್ದಾರೆ.
ಹಾಸನದಲ್ಲಿ ಪುಟ್ಟ ಮಕ್ಕಳಿಗೇ ಸೋಂಕು
ಹಾಸನ ಜಿಲ್ಲೆಯಲ್ಲಿ ಮಕ್ಕಳೇ ಹೆಚ್ಚಾಗಿ ಡೆಂಗ್ಯೂಗೆ ತುತ್ತಾಗ್ತಿದ್ದಾರೆ. ಕಳೆದೊಂದು ವಾರದಲ್ಲಿ, ಹೊಳೆನರಸೀಪುರದ ಇಬ್ಬರು ಮಕ್ಕಳು, ಅರಕಲಗೂಡಿನಲ್ಲಿ ಮಗುವೊಂದು ಡೆಂಗ್ಯೂವಿನಿಂದ ಪ್ರಾಣ ಕಳೆದುಕೊಂಡಿದೆ. ಹಿಮ್ಸ್ನಲ್ಲಿ 37 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, 8 ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.
ಡೆಂಗ್ಯೂ ಪ್ರಕರಣಗಳ ಏರಿಕೆ ಬೆನ್ನಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಡಿಸಿ ಹಾಗೂ ಡಿಹೆಚ್ಓಗಳ ಜೊತೆ ವಿಧಾನಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಜಿಲ್ಲಾಡಳಿತ, ತಾಲೂಕು, ಪಂಚಾಯ್ತಿ ಅಧಿಕಾರಿಗಳು ಡೆಂಗ್ಯೂ ನಿಯಂತ್ರಿಸಲು ಶ್ರಮ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ ಕಾಲುಬಾಯಿ ರೋಗ; ಲಕ್ಷಣಗಳು, ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಇಲ್ಲಿದೆ ಮಾಹಿತಿ
ಮಕ್ಕಳಲ್ಲಿ ಡೆಂಗ್ಯೂ ಪ್ರಕರಣಗಳು ಗಮನಾರ್ಹವಾಗಿ ಕಂಡುಬರುತ್ತಿವೆ. ಪ್ರತಿದಿನ ಸರಾಸರಿ 10 ಪ್ರಕರಣಗಳು ಮಕ್ಕಳಲ್ಲಿ ವರದಿಯಾಗುತ್ತಿದ್ದು ತಿಂಗಳಿಗೆ ಸರಿಸುಮಾರು 300- 400 ಮಕ್ಕಳಲ್ಲಿ ಇದು ಕಂಡುಬರುತ್ತಿದೆ ಎಂಬ ಆಘತಕಾರಿ ಮಾಹಿತಿಯನ್ನು ಬೆಂಗಳೂರಿನ ಮದರ್ ಹುಡ್ ಆಸ್ಪತ್ರೆಗಳ ವೈದ್ಯರು ಹಂಚಿಕೊಂಡಿದ್ದಾರೆ.
ಮಕ್ಕಳೇ ಹೆಚ್ಚಾಗಿ ಡೆಂಗ್ಯೂಗೆ ತುತ್ತಾಗುತ್ತಿರುವುದು ಕಳವಳ ಹೆಚ್ಚಿಸಿದೆ. ಪೋಷಕರು ಮಕ್ಕಳ ಆರೋಗ್ಯದ ಜೊತೆ ತಮ್ಮ ಸುತ್ತಮುತ್ತಲಿನ ಸ್ವಚ್ಛತೆ ಬಗ್ಗೆಯೂ ಗಮನಹರಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ