ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಯಾಲಿಸಿಸ್(Dialysis )ಘಟಕದ ಸಿಬ್ಬಂದಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ(Protest) ನಡೆಸುತ್ತಿದ್ದು ರಾಜ್ಯದ ಹಲವೆಡೆ ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಸಿಗದೆ ರೋಗಿಗಳು ತೀವ್ರ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಚಿಕ್ಕಬಳ್ಳಾಪುರ, ಚಾಮರಾಜನಗರ, ಯಾದಗಿರಿ ಜಿಲ್ಲಾ ಆಸ್ಪತ್ರೆ ಸೇರಿ ರಾಜ್ಯದ ಹಲವು ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಡುತ್ತಿದ್ದಾರೆ.
ಪ್ರತಿಭಟನೆ ಹಿನ್ನೆಲೆ ಜಿಲ್ಲಾ ಕೇಂದ್ರಗಳಿಂದ ಡಯಾಲಿಸಿಸ್ ಘಟಕದ ಸಿಬ್ಬಂದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಹೀಗಾಗಿ ಡಯಾಲಿಸಿಸ್ ಮಾಡುವವರು ಇಲ್ಲದೆ ರೋಗಿಗಳು ನರಳುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲಾಸ್ಪತ್ರೆಗಳ ಮುಂದೆ ರೋಗಿಗಳು, ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳ ಪರದಾಟ
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಡಯಾಲಿಸಿಸ್ ಘಟಕಗಳ ಸಿಬ್ಬಂದಿಗಳ ಮುಷ್ಕರ ಹಿನ್ನಲೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳು ಪರದಾಡುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ಜನ ಡಯಾಲಿಸಿಸ್ ರೋಗಿಗಳು ತುರ್ತಾಗಿ ಡಯಾಲಿಸಿಸ್ ಮಾಡಿಸಬೇಕು ಆದ್ರೆ ಘಟಕ ತೆರೆದಿಲ್ಲವೆಂದು ಆಕ್ರೋಶ ಹೊರ ಹಾಕಿದ್ದಾರೆ. ಕರ್ತವ್ಯದಲ್ಲಿ ಇದ್ದಾಗಲೂ ಸರಿಯಾಗಿ ಕೆಲಸ ಮಾಡಲ್ಲವೆಂದು ಕಿಡಿಕಾರಿದ್ದಾರೆ. ಸ್ವತಃ ಆರೋಗ್ಯ ಸಚಿವರ ಸ್ವಕ್ಷೇತ್ರದ ಆಸ್ಪತ್ರೆಯಲ್ಲೇ ರೋಗಿಗಳಿಗೆ ಇಂತಹ ಸ್ಥಿತಿ ಎಂದು ಕೆಲವರು ಗರಂ ಆಗಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಶಾಸಕರ ದೂರುಗಳ ಬಗ್ಗೆ ಪತ್ರವೊಂದನ್ನು ಟ್ವೀಟ್ ಮಾಡಿದ ಶಿಂಧೆ; ಅದರಲ್ಲೇನಿದೆ?
ಚಾಮರಾಜನಗರ ಜಿಲ್ಲಾಸ್ಪತ್ರೆಯ ರೋಗಿಗಳ ಪರದಾಟ
ಚಾಮರಾಜನಗರ ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ಡಿಸಿ ಕಚೇರಿ ಬಳಿ 20 ರೋಗಿಗಳು ಜಮಾಯಿಸಿದ್ದಾರೆ. ನಿತ್ಯ ಡಯಾಲಿಸಿಸ್ ಮಾಡದಿದ್ರೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಉಬ್ಬಿದ ಕಾಲು, ಕೈ ಸಮಸ್ಯೆಗಳಿಂದ ರೋಗಿಗಳು ಬಳಲುತ್ತಿದ್ದಾರೆ. ಆದರೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ಸೌಲಭ್ಯವಿಲ್ಲ ಎಂದು ಡಿಹೆಚ್ಒ ಡಾ.ವಿಶ್ವೇಶ್ವರಯ್ಯ ಮುಂದೆ ರೋಗಿಗಳು ಕಣ್ಣೀರಿಟ್ಟಿದ್ದಾರೆ. ಆಸ್ಪತ್ರೆಯ ಡಯಾಲಿಸಿಸ್ ಸಿಬ್ಬಂದಿ ಬೆಂಗಳೂರಿಗೆ ಹೋಗಿದ್ದಾರೆ. ತಮ್ಮ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಬೆಂಗಳೂರಿಗೆ ತೆರಳಿದ್ದಾರೆ. ನಮಗೆ ಡಯಾಲಿಸಿಸ್ ಮಾಡದಿದ್ರೆ ಜೀವಕ್ಕೆ ಕುತ್ತಾಗುವ ಸಂಭವವಿದೆ. ಆಸ್ಪತ್ರೆ ಆಡಳಿತ ಮಂಡಳಿ ಬಡವರ ಪ್ರಾಣದೊಂದಿಗೆ ಚೆಲ್ಲಾಟ ಆಡ್ತಿದೆ ಎಂದು ಡಿಸಿ ಕಚೇರಿ ಬಳಿ ಜಿಲ್ಲಾಸ್ಪತ್ರೆ ವಿರುದ್ಧ ರೋಗಿಗಳು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಮನವಿ ಸ್ವೀಕರಿಸಿ ಡಯಾಲಿಸಿಸ್ ಮಾಡಿಸುವುದಾಗಿ ಡಿಹೆಚ್ಒ ಭರವಸೆ ನೀಡಿದ್ದಾರೆ.
ಯಾದಗಿರಿ ಜಿಲ್ಲಾಸ್ಪತ್ರೆಯ ಮುಂದೆ ರೋಗಿಗಳ ನರಳಾಟ
ಇಂದು ರಾಜ್ಯಾದ್ಯಂತ ಡಯಾಲಿಸಸ್ ಸಿಬ್ಬಂದಿ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ಹಿನ್ನಲೆ ಡಯಾಲಿಸಿಸ್ ಕೇಂದ್ರ ಬಂದ್ ಆಗಿದ್ದಕ್ಕೆ ರೋಗಿಗಳು ನರಳುತ್ತಿದ್ದಾರೆ. ಯಾದಗಿರಿ ಜಿಲ್ಲಾಸ್ಪತ್ರೆಯ ಮುಂದೆ ಡಯಾಲಿಸಿಸ್ ಮಾಡಿಸದಿದ್ದರೆ ರೋಗಿಗಳ ಜೀವಕ್ಕೆ ಅಪಾಯ. ರಾಜ್ಯಾದ್ಯಂತ ಡಯಾಲಿಸಸ್ ಕೇಂದ್ರವನ್ನ ಹೆಸ್ಕಾನ್ ಸಂಜೀವಿನಿ ಸಂಸ್ಥೆ ನಡೆಸುತ್ತಿದೆ. ಸಂಸ್ಥೆ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳ ನೀಡ್ತಾಯಿಲ್ಲ ಎನ್ನುವ ಆರೋಪವಿದೆ. ಡಯಾಲಿಸಿಸ್ ಕೇಂದ್ರ ಆರಂಭಿಸಿ ಎಂದು ರೋಗಿಗಳು ಮನವಿ ಮಾಡಿದ್ದಾರೆ. ಸರ್ಜನ್ ಸಂಜೀವ ಕುಮಾರ್, ಇವತ್ತು ಕಾದು ನೋಡಿ ನಾಳೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ರೋಗಿಗಳಿಗೆ ಭರವಸೆ ನೀಡಿದ್ದಾರೆ. ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಲೇಬೇಕು. ಮಾಡಿಸದಿದ್ದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತೆ. ಕಳೆದ ವರ್ಷ ಕೊರೊನಾ ಕಾಲದಲ್ಲಿ 8 ದಿನ ಕೇಂದ್ರ ಬಂದ್ ಆಗಿತ್ತು. ಇದೆ ಕಾರಣಕ್ಕೆ ಕಳೆದ ವರ್ಷ 8 ಮಂದಿ ರೋಗಿಗಳು ಪ್ರಾಣ ಕಳೆದುಕೊಂಡಿದ್ರು. ಮತ್ತೆ ಅದೆ ಸಂಕಷ್ಟ ಎದುರಾಗುತ್ತೆ ಅಂತ ರೋಗಿಗಳು ಭಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಜುಲೈನಲ್ಲಿ ಡಿಎ ಹೆಚ್ಚಳ; ಲೆಕ್ಕಾಚಾರ ಹೇಗೆ ಎಂಬ ವಿವರಣೆ ಇಲ್ಲಿದೆ
ಹಾಸನದಲ್ಲೂ ಡಯಾಲಿಸಿಸ್ ರೋಗಿಗಳು ಪರದಾಟ
ಹಾಸನ- ಸರ್ಕಾರಿ ಆಸ್ಪತ್ರೆ ಡಯಾಲಿಸಿಸ್ ವಿಭಾಗದ ಸಿಬ್ಬಂದಿ ಪ್ರತಿಭಟನೆ ಎಫೆಕ್ಟ್ ಜೋರಾಗಿ ತಟ್ಟಿದೆ. ಹಾಸನ ಜಿಲ್ಲೆಯಲ್ಲೂ ಡಯಾಲಿಸಿಸ್ ರೋಗಿಗಳು ನರಳುತ್ತಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಆಸ್ಪತ್ರೆ ಎದುರು ರೋಗಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ಮೆಷಿನ್ ಕೆಟ್ಟು ಆರು ತಿಂಗಳಾಗಿದೆ. ಇರೋ ಯಂತ್ರದಲ್ಲಿ ಕೆಲಸ ಮಾಡಲು ಸಿಬ್ಬಂದಿ ಹಲವು ಕಾರಣ ಹೇಳ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಡಯಾಲಿಸಿಸ್ ಗೆ ಬಂದರೆ ಕೊಠಡಿ ಬಾಗಿಲು ಹಾಕಲಾಗಿದೆ. ಅಧಿಕಾರಿಗಳನ್ನ ಕೇಳಿದ್ರು ಸ್ಪಂದಿಸುತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಲು ಹಣ ಇಲ್ಲ. ಕೂಡಲೆ ಡಯಾಲಿಸಿಸ್ ಗೆ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದ್ದಾರೆ.
Published On - 4:35 pm, Thu, 23 June 22