ಪ್ರಭಾವಿಗಳ ಕಟ್ಟಡ ಮುಟ್ಟದ ಜೆಸಿಬಿಗಳು: ಬೆಂಗಳೂರು ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯ, ಜನರ ಆಕ್ರೋಶ
ಬಿಬಿಎಂಪಿ ಜೆಸಿಬಿಗಳು ಬಡವರು ಮತ್ತು ಮಧ್ಯಮ ವರ್ಗದವರ ಮನೆ, ಗುಡಿಸಲುಗಳನ್ನು ಅಬ್ಬರದಿಂದ ತೆರವುಗೊಳಿಸುತ್ತಿವೆ. ಪ್ರಭಾವಿಗಳ ಬಂಗಲೆಗಳಿಗೆ ಕೈಹಾಕಲು ಹಿಂಜರಿಯುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸುರಿದಿದ್ದ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದ ಹಿನ್ನೆಲೆಯಲ್ಲಿ ಒತ್ತುವರಿ ತೆರವುಗೊಳಿಸಿ ರಾಜಕಾಲುವೆಗಳಲ್ಲಿ ನೀರು ಸುಸೂತ್ರ ಹರಿಯುವಂತೆ ಮಾಡಲು ಬಿಬಿಎಂಪಿ ಕಾರ್ಯಾಚರಣೆ ಆರಂಭಿಸಿದೆ. ಆದರೆ ಈ ಕಾರ್ಯಾಚರಣೆಯಲ್ಲಿ ಬಿಬಿಎಂಪಿ ಜೆಸಿಬಿಗಳು ಬಡವರು ಮತ್ತು ಮಧ್ಯಮ ವರ್ಗದವರ ಮನೆ, ಗುಡಿಸಲುಗಳನ್ನು ಅಬ್ಬರದಿಂದ ತೆರವುಗೊಳಿಸುತ್ತಿವೆ. ಶ್ರೀಮಂತರು ಮತ್ತು ರಾಜಕೀಯ ಪ್ರಭಾವಿಗಳ ಬಂಗಲೆಗಳಿಗೆ ಕೈಹಾಕಲು ಹಿಂಜರಿಯುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪ್ರಭಾವಿಗಳ ಅತಿಕ್ರಮ ಕಟ್ಟಡಗಳು ಇರುವ ಸ್ಥಳಗಳಲ್ಲಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ದೂರಲಾಗುತ್ತಿದೆ. ಬೆಂಗಳೂರು ನಗರದ 696 ಸ್ಥಳಗಳಲ್ಲಿ ಪ್ರಭಾವಿಗಳ ಕಟ್ಟಡಗಳಿಂದ ರಾಜಕಾಲುವೆಗಳು ಅತಿಕ್ರಮಣಗೊಂಡಿವೆ ಎಂದು ದೂರಲಾಗಿದೆ. 2016ರಲ್ಲೇ ರಾಜಕಾಲುವೆ ಒತ್ತುವರಿ ಮಾಡಿದ ಬಗ್ಗೆ ಪಟ್ಟಿ ಸಿದ್ಧಪಡಿಸಿದ್ದ ಬಿಬಿಎಂಪಿ 2,515 ಒತ್ತುವರಿ ಪ್ರದೇಶಗಳನ್ನು ಗುರುತು ಮಾಡಿತ್ತು. ಈ ಪೈಕಿ ಈಗ 428 ಸ್ಥಳಗಳಲ್ಲಿ ಅತಿಕ್ರಮಣ ತೆರವುಗೊಳಿಸಲಾಗಿದೆ. ಆದರೆ 696 ಸ್ಥಳಗಳಲ್ಲಿ ಉಳಿದೆಡೆ ಪ್ರಭಾವಿಗಳ ಮನೆಗಳು, ಕಟ್ಟಡಗಳು, ಆಸ್ಪತ್ರೆಗಳು ಮತ್ತು ವಾಣಿಜ್ಯ ಮಳಿಗೆಗಳು ಇರುವ ಕಾರಣ ತೆರವು ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಲಾಗಿದೆ. ಇದೀಗ ಮತ್ತೊಮ್ಮೆ ಹೊಸದಾಗಿ ಸರ್ವೇ ಪ್ರಕ್ರಿಯೆ ಆರಂಭಿಸಲು ಸರ್ಕಾರ ಮುಂದಾಗಿದೆ.
ಬೆಂಗಳೂರಿನ ಪೂರ್ವ ವಲಯದಲ್ಲಿ 110, ಪಶ್ಚಿಮ ವಲಯದಲ್ಲಿ 59, ದಕ್ಷಿಣ ವಲಯದಲ್ಲಿ 20, ಕೆ-100 ವ್ಯಾಲಿಯಲ್ಲಿ 3 ಒತ್ತುವರಿ ಕಟ್ಟಡಗಳನ್ನು ಗುರುತಿಸಲಾಗಿದ್ದು, ತೆರವು ಕಾರ್ಯಾಚರಣೆ ಬಾಕಿಯಿದೆ. ಯಲಹಂಕ ವಲಯದಲ್ಲಿ 96, ಮಹದೇವಪುರ ವಲಯದಲ್ಲಿ 136, ಮಹದೇವಪುರದಲ್ಲಿ 45, ಬೊಮ್ಮನಹಳ್ಳಿ 26, ಬೊಮ್ಮನಹಳ್ಳಿ ನ್ಯೂ 66, ಆರ್ಆರ್ ನಗರ 9, ದಾಸರಹಳ್ಳಿಯಲ್ಲಿ 126 ಕಟ್ಟಡಗಳ ತೆರವು ಬಾಕಿಯಿದೆ. ಬಹುತೇಕ ಸ್ಥಳಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಸೇರಿದ ಪ್ರಭಾವಿಗಳ ಆಸ್ತಿಯಿದೆ.
ಅಧಿಕಾರಿಗಳ ವಿರುದ್ಧ ಜಮೀನು ಮಾಲೀಕರ ಆಕ್ರೋಶ
ರಿಯಲ್ ಎಸ್ಟೇಟ್ ಡೆವಲಪರ್ಗಳಿಗೆ ಜಮೀನು ಮಾರಾಟ ಮಾಡಿರುವ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಜಮೀನು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು. ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜಮೀನು ಮಾಲೀಕ ರಘುರಾಮ್ ರೆಡ್ಡಿ, ‘ನಾವೆಲ್ಲರೂ ಎಪ್ಸಿಲಾನ್ ವಿಲ್ಲಾ ನಿರ್ಮಾಣಕ್ಕೆ ಜಮೀನು ಬಿಟ್ಟು ಕೊಟ್ಟಿದ್ದೇವೆ. ಏನೇ ತಂಟೆ ತಕರಾರು ಬಂದರೂ ಅದನ್ನು ಜಮೀನು ಮಾಲೀಕರಾದ ನಾವೇ ಬಗೆಹರಿಸಿಕೊಡಬೇಕು. ಇರೋ ರಾಜಕಾಲುವೆ ಬಿಟ್ಟು ಬೇರೆ ಕಡೆ ಮಾರ್ಕ್ ಮಾಡಿದ್ದಾರೆ. ಕಾಂಪೌಂಡ್ ಒಡೆಯಲು ಮಾರ್ಕ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ನಾವು ಕಾಂಪೌಂಡ್ ಒಡೆಯಲು ಬಿಡುವುದಿಲ್ಲ. ಯಾವ ಆಧಾರ ಮೇಲೆ ಸರ್ವೇ ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ’ ಎಂದು ಯಮಲೂರಿನ ಎಪ್ಸಿಲಾನ್ ಬಳಿ ಕಾರ್ಯಚರಣೆಗೆ ಜಮೀನು ಮಾಲೀಕರ ಆಕ್ರೋಶ ವ್ಯಕ್ತಪಡಿಸಿದರು.
ಏಕವಚನದಲ್ಲೇ ಅಧಿಕಾರಿಗಳನ್ನು ನಿಂದಿಸಲು ಆರಂಭಿಸಿದಾಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಸ್ಥಳೀಯರಿಂದ ಅಭಿಪ್ರಾಯ ಕಲೆಹಾಕಲು ಯತ್ನಿಸಿದರು. ಯಮಲೂರು ನಿವಾಸಿಗಳು ಮತ್ತು ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದರು.
ಯಮಲೂರಿನಲ್ಲಿರುವ ನಿವಾಸಿಗಳು ಎಫ್ಸಿಲಾನ್ ವಿರುದ್ಧ ಹರಿಹಾಯ್ದರು. ಯಮಲೂರು ಕೆರೆಯಿಂದ ಬೆಳ್ಳಂದೂರು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯನ್ನೇ ಎಫ್ಸಿಲಾನ್ ಒತ್ತುವರಿ ಮಾಡಿಕೊಂಡಿದೆ. ರಾಜಕಾಲುವೆ ಒತ್ತುವರಿ ಮಾಡಿ ಅದಕ್ಕೆ ಡಿಸೀಲಿಂಗ್ ಮಾಡಲಾಗಿದೆ. ಎಫ್ಸಿಲಾನ್ ಪ್ರದೇಶದ ಒಳಗೆ ವಾಸನೆ ಬರುತ್ತದೆ ಎನ್ನುವ ಕಾರಣಕ್ಕೆ ರಾಜಕಾಲುವೆಗೆ ಬಾಕ್ಸ್ ಮಾಡಿದ್ದಾರೆ. ಇದೀಗ ರಾಜಕಾಲುವೆ ಬಾಕ್ಸ್ಗಳನ್ನು ಬಿಬಿಎಂಪಿ ಬುಲ್ಡೋಜರ್ಗಳು ಡ್ರಿಲ್ ಮಾಡುತ್ತಿವೆ.
ಎಫ್ಸಿಲಾನ್ ಕಂಪನಿಯು ಸಮರ್ಪಕ ರೀತಿಯಲ್ಲಿ ಭೂ ಅಭಿವೃದ್ಧಿಪಡಿಸಿಲ್ಲ. ಹೀಗಾಗಿ ಪ್ರತಿ ಮಳೆಗೆ ನಮಗೆ ಸಮಸ್ಯೆ ಆಗುತ್ತಿದೆ. ಎಫ್ಸಿಲಾನ್ನಲ್ಲಿ ಇರುವವರೆಲ್ಲರೂ ಕೋಟ್ಯಾಧೀಶರೇ ಆಗಿದ್ದಾರೆ. ಯಮಲೂರಿನ ಸುತ್ತಮುತ್ತಲೂ ಇವರು 200 ಏಕರೆ ಜಮೀನು ಕೊಂಡಿದ್ದಾರೆ. ಆದರೆ ರಾಜಕಾಲುವೆಗೆ 15 ಅಡಿ ಜಾಗ ಬಿಡುತ್ತಿಲ್ಲ ಎಂದು ಯಮಲೂರು ನಿವಾಸಿ ನಾರಾಯಣ ಆಕ್ರೋಶ ವ್ಯಕ್ತಪಡಿಸಿದರು. ಯಮಲೂರಿನ ಮುನೇಶ್ವರ ದೇವಸ್ಥಾನದ ಬಳಿಯ ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾದಾಗ ಜಮೀನು ಮಾಲೀಕರು ವಿರೋಧ ವ್ಯಕ್ತಪಡಿಸಿದರು.
ನಲಪಾಡ್ ಅಕಾಡೆಮಿ ಸಮೀಪವೂ ಕಾರ್ಯಾಚರಣೆ ಸ್ಥಗಿತ
ಬೆಂಗಳೂರಿನ ಚಲಘಟ್ಟದಲ್ಲಿರುವ ನಲಪಾಡ್ ಅಕಾಡೆಮಿ ಸಮೀಪ ನಡೆಯುತ್ತಿದ್ದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಸ್ಥಗಿತಗೊಳಿಸಿದೆ. ಕಾರ್ಯಾಚರಣೆಗೆ ನ್ಯಾಯಾಲಯದಿಂದ ಸ್ಟೇ ತಂದಿರುವುದಾಗಿ ನಲಪಾಡ್ ಅಕಾಡೆಮಿಯ ಸಿಬ್ಬಂದಿ ಹೇಳಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದರು. ಮೇಲ್ಭಾಗದಲ್ಲಿ ಮಾತ್ರ ಒತ್ತುವರಿ ತೆರವು ಮಾಡಲಾಗಿತ್ತು.
ಲ್ಯಾಂಡ್ ಮಾರ್ಕ್ ಅಪಾರ್ಟ್ಮೆಂಟ್ಗೆ ವಿದ್ಯುತ್ ಪೂರೈಕೆ ಸ್ಥಗಿತ
ಸಿಂಗಾಪುರ ಕೆರೆ ಸಮೀಪದ ಲ್ಯಾಂಡ್ಮಾರ್ಕ್ ಅಕಾಡೆಮಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಒತ್ತುವರಿ ತೆರವು ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಕೆರೆಯ ತೂಬುಗಾಲುವೆ ಮಾರ್ಗದಲ್ಲಿ ಅಪಾರ್ಟ್ಮೆಂಟ್ ಮಾಲೀಕ ಮತ್ತು ಮಾಜಿ ಕಾರ್ಪೊರೇಟರ್ ನಂದಿನಿ ಅವರ ಪತಿ ಶ್ರೀನಿವಾಸ್ ಕಟ್ಟಡಕ್ಕೆ ವೈರಿಂಗ್ ಮಾಡಿಸಲಾಗಿತ್ತು. ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಅಧಿಕಾರಿಗಳು ಬೇರೆ ಮಾರ್ಗದಿಂದ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರೂ ಶ್ರೀನಿವಾಸ್ ಮತ್ತೆ ಹಳೆಯ ಸಂಪರ್ಕ ಮುಂದುವರಿಸಲು ಮುಂದಾದ ಹಿನ್ನೆಲೆಯಲ್ಲಿ ಸಂಪರ್ಕ ಸ್ಥಗಿತಗೊಳಿಸಲಾಯಿತು.
ನೊಟೀಸ್ ನೀಡದ ತಹಶೀಲ್ದಾರ್
ಮಹಾದೇವಪುರ ಭಾಗದಲ್ಲಿ ಒತ್ತುವರಿ ಸ್ಥಳವನ್ನು ಗುರುತಿಸಲು ಸರ್ವೆ ಇಲಾಖೆ ಸಿಬ್ಬಂದಿ ನಿಯೋಜಿಸಿದೆ. ನಂತರ ಮಾರ್ಕಿಂಗ್ ಹಾಗೂ ಡೆಮಾಲಿಷನ್ ಪ್ರಕ್ರಿಯೆಗಳು ನಡೆಯಬೇಕಿದೆ. ಆದರೆ ತೆರವು ಕಾರ್ಯಾಚರಣೆ ಶುರುವಾಗಿ ನಾಲ್ಕು ದಿನ ಕಳೆದರೂ ಒತ್ತುವರಿದಾರರಿಗೆ ತಹಶೀಲ್ದಾರ್ ನೊಟೀಸ್ ಜಾರಿ ಮಾಡಿಲ್ಲ. ತಹಶೀಲ್ದಾರ್ ನೋಟೀಸ್ ನೀಡುವವರೆಗೂ ಡೆಮಾಲಿಷನ್ ಮಾಡುವುದಿಲ್ಲ ಎಂದು ಬಿಬಿಎಂಪಿ ಹೇಳುತ್ತಿದೆ. ತಹಶೀಲ್ದಾರ್ ನೋಟೀಸ್ ನೀಡದ ಕಾರಣ, ಕಟ್ಟಡಗಳ ತೆರವು ವಿಳಂಬಗೊಳ್ಳುತ್ತದೆ.
ಇಂದು ಬೆಂಗಳೂರಿನ ಬಹುತೇಕ ಕಡೆ ತೆರವು ಕಾರ್ಯಾಚರಣೆ ಕುಂಠಿತಗೊಂಡಿದೆ. ಕಳೆದ ನಾಲ್ಕು ದಿನದಿಂದ ಕಾಂಪೌಂಡ್ ತೆರವು ಮಾಡುವುದಕ್ಕೆ ಸೀಮಿತವಾಗಿದ್ದ ಕಾರ್ಯಾಚರಣೆಯು ಇಂದು ಸರ್ವೇಗೆ ಸೀಮಿತವಾಯಿತು. ಕಳೆದ ಮೂರು ದಿನದಲ್ಲಿ 30 ಕಟ್ಟಡಗಳ ಕಾಂಪೌಂಡ್ ಹಾಗೂ ಕೊಂಚ ಭಾಗದ ಮಾತ್ರ ತೆರವುಗೊಳಿಸಲಾಗಿದೆ. ಹೈಫೈ ವಿಲ್ಲಾಗಳ ತಂಟೆಗೆ ಹೋಗಲು ಬಿಬಿಎಂಪಿ ಹಾಗೂ ಜಿಲ್ಲಾಡಳಿತ ಹೆದರುತ್ತಿದೆ.
Published On - 12:31 pm, Thu, 15 September 22