ಇಡೀ ಭಾರತದಲ್ಲಿ ಬದಲಾವಣೆ ಅಲೆ ಪ್ರಾರಂಭವಾಗಿದೆ: ಉಪಚುನಾವಣೆ ಫಲಿತಾಂಶದ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ
DK Shivakumar: ಕಾರ್ಯಕರ್ತರು ಯಾವುದೇ ಆಮಿಷಕ್ಕೆ ಒಳಗಾಗದೆ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.
ಬೆಂಗಳೂರು: ಈ ಉಪಚುನಾವಣೆಯ ಫಲಿತಾಂಶ ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತವಲ್ಲ, ಇಡೀ ಭಾರತದಲ್ಲಿ ಬದಲಾವಣೆ ಅಲೆ ಪ್ರಾರಂಭವಾಗಿದೆ ಎಂದು ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದಾರೆ. ಸಿಂದಗಿ ಕ್ಷೇತ್ರದ ಮತದಾರರ ತೀರ್ಪು ಗೌರವಿಸುತ್ತೇವೆ. ಆದರೆ ಕೊಟ್ಟ ಮತವನ್ನು ಗೌರವದಿಂದ ಸ್ವೀಕರಿಸುತ್ತೇವೆ ಎಂದು ಬೆಂಗಳೂರಲ್ಲಿ ಶಿವಕುಮಾರ್ ತಿಳಿಸಿದ್ದಾರೆ.
ಸಿಂದಗಿಯಲ್ಲಿ ಯಾರ ಜತೆಗೂ ಮೈತ್ರಿ ಮಾಡಿಕೊಂಡಿರಲಿಲ್ಲ. ಸಿಂದಗಿ ಕ್ಷೇತ್ರದಲ್ಲಿ ಈ ಬಾರಿ ಪಡೆದ ಮತ ಖುಷಿ ತಂದಿದೆ. ಮುಂದೆ ಸಿಂದಗಿ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲಿದ್ದೇವೆ. ಕಾರ್ಯಕರ್ತರು ಯಾವುದೇ ಆಮಿಷಕ್ಕೆ ಒಳಗಾಗದೆ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.
ಹಾನಗಲ್ ಗೆಲುವಿಗೆ ಸಂಭ್ರಮಿಸುವುದು ಬೇಡವೆಂಬ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಆಯ್ತು ಯಡಿಯೂರಪ್ಪನವರು ಹೇಳಿದಂತೆಯೇ ಕೇಳುತ್ತೇವೆ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಹಾನಗಲ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವರ್ಚಸ್ಸಿನಿಂದ ಗೆದ್ದಿಲ್ಲ. ಕಾಂಗ್ರೆಸ್ ನಾಯಕರ ಸಂಘಟಿತ ಹೋರಾಟದಿಂದ ಗೆದ್ದಿದ್ದಾರೆ. ಉಪ ಚುನಾವಣೆ ಫಲಿತಾಂಶ ರಾಜ್ಯಕ್ಕಲ್ಲ, ದೇಶಕ್ಕೇ ದಿಕ್ಸೂಚಿ. ಜೆಡಿಎಸ್, ಕಾಂಗ್ರೆಸ್ ನಾಯಕರ ನಡುವೆ ಆರೋಪ, ಪ್ರತ್ಯಾರೋಪ ಆಗಿದೆ. ನಮ್ಮ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇವೆ. ವೈಯಕ್ತಿಕವಾಗಿ ಯಾರನ್ನೂ ಟೀಕಿಸುವ ಉದ್ದೇಶ ಇರಲಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಜನತೆಯ ತೀರ್ಪನ್ನು ತಲೆಬಾಗಿ ಸ್ವೀಕರಿಸುವುದು ಬಿಜೆಪಿಯ ಸುಸಂಸ್ಕೃತಿ: ಕೆ. ಸುಧಾಕರ್ ಟ್ವೀಟ್ ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ 80,117 ಮತ ಪಡೆದಿದ್ದು, ಶೇ.46.65% ಮತ ಗಳಿಸಿದೆ. ಬಿಜೆಪಿಯನ್ನು ಬೆಂಬಲಿಸಿದ ಹಾಗೂ ಅತ್ಯಂತ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡ ಎಲ್ಲ 1,71,726 ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೋತಾಗ ಮತಯಂತ್ರಗಳನ್ನು ದೂಷಿಸದೆ, ಜನತೆಯ ತೀರ್ಪನ್ನು ತಲೆಬಾಗಿ ಸ್ವೀಕರಿಸುವುದು ಬಿಜೆಪಿಯ ಸುಸಂಸ್ಕೃತಿ ಎಂದು ಹಾನಗಲ್ನಲ್ಲಿ ಪ್ರಚಾರದ ಹೊಣೆಹೊತ್ತಿದ್ದ ಸಚಿವ ಡಾ.ಕೆ. ಸುಧಾಕರ್ ಟ್ವಿಟರ್ ಮೂಲಕ ಆಶಯ ವ್ಯಕ್ತಪಡಿಸಿದ್ದಾರೆ.
ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ 80,117 ಮತ ಪಡೆದಿದ್ದು, ಶೇ.46.65% ಮತ ಗಳಿಸಿದೆ. ಬಿಜೆಪಿಯನ್ನು ಬೆಂಬಲಿಸಿದ ಹಾಗೂ ಅತ್ಯಂತ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡ ಎಲ್ಲ 1,71,726 ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಸೋತಾಗ ಮತಯಂತ್ರಗಳನ್ನು ದೂಷಿಸದೆ, ಜನತೆಯ ತೀರ್ಪನ್ನು ತಲೆಬಾಗಿ ಸ್ವೀಕರಿಸುವುದು ಬಿಜೆಪಿಯ ಸುಸಂಸ್ಕೃತಿ.
1/3
— Dr Sudhakar K (@mla_sudhakar) November 2, 2021
ದಿವಂಗತ ಸಿ.ಎಂ. ಉದಾಸಿ ಅವರು ಬಾಳಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದರ ಜೊತೆಗೆ ಕಳೆದ 38 ವರ್ಷಗಳಿಂದ ಹಾನಗಲ್ ಕ್ಷೇತ್ರ ಮಾತ್ರವಲ್ಲದೆ ಇಡೀ ಹಾವೇರಿ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಉದಾಸಿರವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ಕಾಂಗ್ರೆಸ್ ಪಕ್ಷಕ್ಕೆ ಜನರು ಒಂದು ಅವಕಾಶ ನೀಡಿದ್ದಾರೆ ಎಂದು ಹೇಳಿದ್ದಾರೆ.
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನು ಒಂದೂವರೆ ವರ್ಷ ಉಳಿದಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ಕಾಂಗ್ರೆಸ್ ಪಕ್ಷ ಹಾನಗಲ್ ಜನತೆ ನೀಡಿರುವ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ ಹಾಗೂ ಮತದಾರರು ಅವರ ಮೇಲಿಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳುತ್ತದೆ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಾನಗಲ್, ಸಿಂದಗಿ ಉಪಚುನಾವಣೆ ಅಂತಿಮ ಫಲಿತಾಂಶ: ಯಾರಿಗೆ ಎಷ್ಟು ಅಂತರದ ಗೆಲುವು? ಇಲ್ಲಿದೆ ವಿವರ
ಇದನ್ನೂ ಓದಿ: Hangal Byelection 2021: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆಗೆ ಕಾರಣಗಳು ಏನೇನು?
Published On - 6:46 pm, Tue, 2 November 21