
ಬೆಂಗಳೂರು, ಜನವರಿ 25: ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) , ಹಲವು ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ದಾವೋಸ್‌ನಲ್ಲಿ ನಡೆದ ವರ್ಲ್ಡ್ ಎಕನಾಮಿಕ್ ಫೋರಂ ಸಭೆಯಲ್ಲಿ ಭಾಗವಹಿಸಿದ್ದ ಅನುಭವವನ್ನು ಹಂಚಿಕೊಳ್ಳುವುದರ ಜೊತೆಗೆ ಇಡೀ ರಾಜ್ಯದಲ್ಲಿ ಸಮಗ್ರ ಮೊಬಿಲಿಟಿ ವ್ಯವಸ್ಥೆ ಅಭಿವೃದ್ಧಿಪಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದಿದ್ದಾರೆ. ಬೆಂಗಳೂರು ಸೇರಿದಂತೆ ಚಿಕ್ಕ ಹಾಗೂ ದೊಡ್ಡ ನಗರಗಳ ಬೆಳವಣಿಗೆ ಅಗತ್ಯವಾಗಿದ್ದು, ದೇಶದ ಮಾನವ ಸಂಪತ್ತು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಅನಿವಾರ್ಯ ಎಂದರು.
ದಾವೋಸ್ ಸಭೆಯ ಕುರಿತು ಮಾತಾನಾಡಿದ ಡಿಸಿಎಂ, ಪ್ರಪಂಚದ 65 ದೇಶಗಳ ಪ್ರಮುಖರು ಅಲ್ಲಿ ಭಾಗವಹಿಸಿದ್ದರು. ಸುಮಾರು 45 ಕಂಪನಿಗಳ ಮುಖ್ಯಸ್ಥರು ಕರ್ನಾಟಕದಲ್ಲಿ ಹೂಡಿಕೆ ಬಗ್ಗೆ ನಮ್ಮೊಂದಿಗೆ ಚರ್ಚೆ ನಡೆಸಿದ್ದಾರೆ. ಎಲೆಕ್ಟ್ರಾನಿಕ್ಸ್, ನ್ಯಾನೋ ಟೆಕ್ನಾಲಜಿ, ಎಐ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಆಸಕ್ತಿ ವ್ಯಕ್ತವಾಗಿದೆ ಎಂದು ಹೇಳಿದರು.
ಸೌದಿ ಅರೇಬಿಯಾ ಹಣಕಾಸು ಸಚಿವರು ಸೇರಿದಂತೆ ಹಲವು ಅಂತಾರಾಷ್ಟ್ರೀಯ ನಾಯಕರು ಕರ್ನಾಟಕದ ನೀರು, ವಿದ್ಯುತ್ ಮತ್ತು ಮೂಲಸೌಕರ್ಯ ವ್ಯವಸ್ಥೆಯನ್ನು ಮೆಚ್ಚಿದ್ದಾರೆ. ಪಾರ್ಕಿಂಗ್ ವ್ಯವಸ್ಥೆ, ಟ್ರಾಫಿಕ್ ನಿರ್ವಹಣೆ ಹಾಗೂ ಟನಲ್ ರಸ್ತೆ ಯೋಜನೆಗಳ ಬಗ್ಗೆ ಮಹಾರಾಷ್ಟ್ರ ಸಿಎಂ ಫಡ್ನವಿಸ್ ಹಾಗೂ ಜಪಾನ್ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಟನಲ್ ಮಿಷಿನ್ ಕುರಿತು ನಮ್ಮ ತಂಡ ಸಮಗ್ರ ಅಧ್ಯಯನ ನಡೆಸುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ದಾವೋಸ್ ವ್ಯವಸ್ಥೆಯ ಕುರಿತು ಹೇಳುತ್ತಾ, ಅಲ್ಲಿನ ಕಾನೂನು ಪಾಲನೆಯ ವಾತಾವರಣ ಶ್ಲಾಘನೀಯವಾಗಿದ್ದು, ಅಲ್ಲಿ ಯಾರು ಕೂಡ ಸಿಗ್ನಲ್ ಜಂಪ್ ಮಾಡುವುದಿಲ್ಲ. ಕಾನೂನಿಗೆ ಗೌರವ ನೀಡುವ ಸಂಸ್ಕೃತಿ ನಮ್ಮಲ್ಲೂ ಬೆಳೆಯಬೇಕು ಎಂದು ಡಿಸಿಎಂ ಕರೆ ನೀಡಿದರು. ಈ ದಾವೋಸ್ ಭೇಟಿ ರಾಜ್ಯಕ್ಕೆ ಉತ್ತಮ ಅವಕಾಶಗಳನ್ನು ತಂದಿದ್ದು, ಯುವಕರಿಗೆ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಯೋಜನೆ ರೂಪಿಸಿದ್ದು, ಫೆಬ್ರವರಿ ತಿಂಗಳಲ್ಲಿ ಕೆಲವು ಪ್ರಮುಖ ಯೋಜನೆಗಳ ಉದ್ಘಾಟನೆ ನಡೆಯಲಿದೆ ಎಂದು ಹೇಳಿದರು. ಬೆಂಗಳೂರು ಕೇಬಲ್ ವಿಚಾರದಲ್ಲಿ ಟೀಕೆಗಳಿದ್ದು, ಅದಕ್ಕೆ ಸಂಬಂಧಿಸಿದಂತೆ ತಜ್ಞರ ಸಲಹೆಗಳನ್ನು ಪಡೆಯಲಾಗುತ್ತಿದೆ ಎಂದರು. ಇದಲ್ಲದೆ ಬಿಡದಿ ಬಳಿ ಐಟಿ ಸಿಟಿ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ವ್ಯಕ್ತವಾಗಿದ್ದು, ರೈತರು ಸ್ವಯಂಪ್ರೇರಿತವಾಗಿ ಭೂಮಿ ನೀಡಲು ಮುಂದಾಗಿದ್ದಾರೆ. ರೈತರಿಗೆ ಉತ್ತಮ ಪರಿಹಾರ ಹಾಗೂ ಸೌಲಭ್ಯ ಒದಗಿಸಲಾಗುತ್ತದೆ. ಇಂತಹ ಆಫರ್ ದೇಶದಲ್ಲಿ ಎಲ್ಲೂ ನೀಡಲಾಗಿಲ್ಲ ಎಂದು ಡಿಕೆ ಹೇಳಿದರು.
ವರದಿ : ಈರಣ್ಣ ಬಸವ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.