
ಬೆಂಗಳೂರು, ಡಿ.29: ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ನಡೆದ ಅನಧಿಕೃತ ಮನೆಗಳ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಾಯಕ ಪಿಕೆ ಕುನ್ಹಾಲಿಕುಟ್ಟಿ (P K Kunhalikutty) ಇದೀಗ ಹೇಳಿಕೆಯೊಂದನ್ನು ನೀಡಿದ್ದಾರೆ. ಕೋಗಿಲು ಕಟ್ಟಡ ಧ್ವಂಸಗಳನ್ನು ಉತ್ತರ ಪ್ರದೇಶದಲ್ಲಿ ನಡೆದ ಇದೇ ರೀತಿಯ ಕ್ರಮಗಳಿಗೆ ಹೋಲಿಸಬಾರದು ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಐಯುಎಂಎಲ್ ರಾಷ್ಟ್ರೀಯ ಕಾರ್ಯದರ್ಶಿ ಆಗಿರುವ ಪಿಕೆ ಕುನ್ಹಾಲಿಕುಟ್ಟಿ, ಈಗಾಗಲೇ ಕರ್ನಾಟಕದ ಹಿರಿಯ ನಾಯಕರೊಂದಿಗೆ, ಸಚಿವರೊಂದಿಗೆ, ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದೇವೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಈ ಮೂಲಕ ಹಲವು ನಿರ್ಧಾರಗಳನ್ನು ಕರ್ನಾಟಕ ಸರ್ಕಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ ಎಂದು ಹೇಳಿದರು.
ಭಾನುವಾರ (ಡಿ.29)ದಂದು ಮಾಧ್ಯಮಗಳೊಂದಿಗೆ ಮಾತನಾಡಿದರ ಅವರು, ಬೆಂಗಳೂರಿನಲ್ಲಿ ನಡೆದ ಧ್ವಂಸ ಕಾರ್ಯಾಚರಣೆ ಕೇವಲ ಮುಸ್ಲಿಂರ ಮೇಲೆ ಮಾತ್ರ ಆಗಿಲ್ಲ, ಇತರ ಧರ್ಮದವರು ಕೂಡ ಇದ್ದಾರೆ. ಮನೆ ಕಳೆದುಕೊಂಡ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಲಾಗಿದೆ. ರಾಜ್ಯ ಸರ್ಕಾರವು ಸಂತ್ರಸ್ತ ನಿವಾಸಿಗಳಿಗೆ ಪುನರ್ವಸತಿ ನೀಡಲು ಬದ್ಧವಾಗಿದೆ. ಈ ವಿಷಯವನ್ನು ರಾಜಕೀಯಗೊಳಿಸುವ ಪ್ರಯತ್ನ ಮಾಡುವುದು ಬೇಡ ಎಂದು ಹೇಳಿದರು.
ಇದನ್ನೂ ಓದಿ: ಕೋಗಿಲು ಬಡಾವಣೆ ತೆರವು: ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ ಎಂದ ಸಿಎಂ ಸಿದ್ದರಾಮಯ್ಯ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂದು ಈ ರೀತಿಯ ಹೇಳಿಕೆಯನ್ನು ನೀಡುವುದು ಸರಿಯಲ್ಲ. ಸರ್ಕಾರ ಅವರಿಗೆ ತಕ್ಷಣವೇ ಬೇರೆ ಜಾಗದಲ್ಲಿ ವಸತಿ ನೀಡುತ್ತದೆ. ಈ ವಿಷಯದ ಲಾಭ ಪಡೆದು, ಕೀಳು ರಾಜಕಾರಣ ಮಾಡಬೇಡಿ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೆಂಗಳೂರಿನಲ್ಲಿ ಮುಸ್ಲಿಮರಿಗೆ ಸೇರಿದ ಮನೆಗಳನ್ನು ನೆಲಸಮಗೊಳಿಸುವುದನ್ನು ತೀವ್ರವಾಗಿ ಖಂಡಿಸಿದ್ದರು, ಈ ಬೆಳವಣಿಗೆಯು ಆತಂಕಕಾರಿ ಮತ್ತು ತೀವ್ರ ದುಃಖಕರವಾಗಿದೆ. ಯೋಗಿ ಮಾದರಿಯನ್ನು ಅನುಸರಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಿದ್ದರು. ವಸೀಮ್ ಲೇಔಟ್ ಮತ್ತು ಫಕೀರ್ ಕಾಲೋನಿಯಲ್ಲಿ 200 ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ತ್ಯಾಜ್ಯ ಸಂಸ್ಕರಣಾ ಸೌಲಭ್ಯಕ್ಕಾಗಿ ಗೊತ್ತುಪಡಿಸಿದ ಭೂಮಿಯಲ್ಲಿ ಅಕ್ರಮವಾಗಿ ನೆಲೆಸಲಾಗಿದೆ ಎಂದು ಹೇಳಿ, ಕಟ್ಟಡಗಳನ್ನು ಹೊಡೆದು ಹಾಕಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಈ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಹೇಳಲಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:56 am, Mon, 29 December 25