ವೈದ್ಯೆ ಕೊಲೆ ಕೇಸ್​​: ಮಾರಕ ಡ್ರಗ್ಸ್​​ನ ಮೂಲ ಬಯಲು; ಕೃತಿಕಾಳ ರೂಮ್​ನಲ್ಲಿ ಔಷಧಗಳು ಪತ್ತೆ

ಡಾ ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಪತಿ ಮಹೇಂದ್ರ ರೆಡ್ಡಿ ಪ್ರೊಪೋಫೋಲ್ ಅನಸ್ತೇಷಿಯಾ ಬಳಸಿ ಹತ್ಯೆ ಮಾಡಿರುವುದು ಬಹಿರಂಗವಾಗಿದೆ. ಪೊಲೀಸರ ತನಿಖೆಯಲ್ಲಿ ಮಹೇಂದ್ರ ಅಕ್ರಮವಾಗಿ ಔಷಧಿ ಖರೀದಿಸಿರುವುದು ಪತ್ತೆಯಾಗಿದೆ. ಇನ್ನು ಕೃತಿಕಾ ರೆಡ್ಡಿ ಇದ್ದ ರೂಮಿನಲ್ಲಿ ರಾಶಿ ರಾಶಿ ಔಷಧಗಳು ಪತ್ತೆಯಾಗಿವೆ.

ವೈದ್ಯೆ ಕೊಲೆ ಕೇಸ್​​: ಮಾರಕ ಡ್ರಗ್ಸ್​​ನ ಮೂಲ ಬಯಲು; ಕೃತಿಕಾಳ ರೂಮ್​ನಲ್ಲಿ ಔಷಧಗಳು ಪತ್ತೆ
ಡಾ.ಕೃತಿಕಾರೆಡ್ಡಿ, ವೈದ್ಯ ಮಹೇಂದ್ರರೆಡ್ಡಿ
Updated By: ಗಂಗಾಧರ​ ಬ. ಸಾಬೋಜಿ

Updated on: Oct 21, 2025 | 9:55 AM

ಬೆಂಗಳೂರು, ಅಕ್ಟೋಬರ್​ 21: ವೈದ್ಯ ಮಹೇಂದ್ರರೆಡ್ಡಿಯಿಂದ ಪತ್ನಿ ಡಾ.ಕೃತಿಕಾರೆಡ್ಡಿ ಕೊಲೆ ಪ್ರಕರಣಕ್ಕೆ (Dr kruthika reddy case) ಸಂಬಂಧಿಸಿದಂತೆ ಪೊಲೀಸರು ತನಿಖೆಯಲ್ಲಿ ಇದುವರಗೆ ಉತ್ತರ ಸಿಗದ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಕೃತಿಕ ದೇಹ ಹೊಕ್ಕಿದ್ದ ಮಾರಕ ಡ್ರಗ್ಸ್​​ನ ಮೂಲ ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಮಹೇಂದ್ರರೆಡ್ಡಿ ಮಾರಾಟಕ್ಕಿಲ್ಲದ ಔಷಧಿಗಳನ್ನು ಮನೆಗೆ ತಂದಿದ್ದು, ಕೃತಿಕಾ ರೆಡ್ಡಿ ಇದ್ದ ರೂಮಿನಲ್ಲಿ ರಾಶಿ ರಾಶಿ ಔಷಧಗಳು (Medicines) ಪತ್ತೆ ಆಗಿವೆ.

PROPOFOL ಅನಸ್ತೇಷಿಯಾ ಇಂಜೆಕ್ಷನ್ ಖರೀದಿ ಮಾಡಿದ್ದ ಡಾ. ಪತಿ

ಮಹೇಂದ್ರರೆಡ್ಡಿ ಪತ್ನಿ ಕೃತಿಕಾ ರೆಡ್ಡಿಯನ್ನ ಅನಸ್ತೇಷಿಯಾ ಕೊಟ್ಟು ಕೊಲೆ ಮಾಡಿ ಅರೆಸ್ಟ್ ಆಗಿದ್ದು ಗೊತ್ತಿದೆ. ಇದೀಗ ಆರೋಪಿಯಿಂದ ಪೊಲೀಸರು ಪ್ರಮುಖ ವಿಚಾರ ಬಾಯ್ಬಿಡಿಸಿದ್ದಾರೆ. ಮಾರತ್ ಹಳ್ಳಿ ಪೊಲೀಸರ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಆರೋಪಿ ಸತ್ಯ ಕಕ್ಕಿದ್ದಾನೆ. ಮಾರತ್ ಹಳ್ಳಿ ಇನ್ಸ್‌ಪೆಕ್ಟರ್​ ಅನಿಲ್ ಕುಮಾರ್ ಮತ್ತು ತಂಡದಿಂದ ನಿರಂತರ ವಿಚಾರಣೆ ವೇಳೆ ಅನಸ್ತೇಷಿಯಾ ಖರೀದಿ ಮಾಡಿದ್ದು, ಎಲ್ಲಿ ಅಂತಾ ಆರೋಪಿ ಬಾಯ್ಬಿಟ್ಟಿದ್ದಾನೆ. Propofol ಎಂಬ ಅನಸ್ತೇಷಿಯಾವನ್ನ ಕೊಟ್ಟು ಪತ್ನಿಯನ್ನು ಕೊಲೆ ಮಾಡಿದ್ದಾಗಿ ಹೇಳಿದ್ದಾನೆ. ಅಂದು ಸ್ವತಃ ತಾನೇ ಡ್ರಗ್ಸ್ ಖರೀದಿ ಮಾಡಲು ಮೆಡಿಕಲ್ ಶಾಪ್ ಒಂದಕ್ಕೆ ಹೋಗಿದ್ದಾಗಿ ಹೇಳಿಕೆ ನೀಡಿದ್ದಾನೆ.

ಇದನ್ನೂ ಓದಿ: ವೈದ್ಯೆ ಕೊಲೆ ಕೇಸ್​: ಆರೋಪಿ ಡಾ.ಮಹೇಂದ್ರ ರೆಡ್ಡಿ ಕುಟುಂಬಸ್ಥರ ಮೇಲೆ ಕೃತಿಕಾ ತಾಯಿ ಗಂಭೀರ ಆರೋಪ

ನಾನು ಡಾಕ್ಟರ್ propfol ಬೇಕು ಅಂತಾ ಆರೋಪಿ ಮಹೇಂದ್ರ ರೆಡ್ಡಿ ಮೆಡಿಕಲ್ ಸ್ಟೋರ್​​ನವರ ಬಳಿ ಕೇಳಿದ್ದಾನೆ. ಪ್ರೊಪೋಫೋಲ್ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ ಎಂದು ಮೆಡಿಕನ್​​ನವರು ಹೇಳಿದ್ದಾರೆ. ಆಗ ತಾನೊಬ್ಬ ಸರ್ಜನ್ ಅಂತಾ ತಾನೆ ಬರೆದಿದ್ದ ಪ್ರಿಸ್ಕ್ರಿಪ್ಷನ್ ನೀಡಿ ನನಗೆ ಚಿಕಿತ್ಸೆಗೆ ತುರ್ತಾಗಿ ಬೇಕಿದೆ ಎಂದು ಹೇಳಿ ಖರೀದಿ ಮಾಡಿದ್ದ. ಇತ್ತ ನೋವಿನಿಂದ ಬಳಲಿ ಮನೆಯಲ್ಲಿ ಮಲಗಿದ್ದ ಪತ್ನಿ ಕೃತಿಕಾಳಿಗೆ ರಾತ್ರಿ ವೇಳೆ ತೆರಳಿ ಐವಿ ಮೂಲಕ Propofol ನೀಡಿದ್ದ. ಇದು ಓವರ್ ಡೋಸ್ ಆಗಿ ಬೆಳಗ್ಗೆ ಏಳುವ ಸಮಯದಲ್ಲಿ ಆಕೆ ಜೀವಂತವಾಗಿ ಇರಲಿಲ್ಲ. ಇಂಜೆಕ್ಷನ್​​ ಪವರ್​​ಗೆ ಕೃತಿಕಾ ಮೊದಲು ನಿದ್ರೆಗೆ ಜಾರಿದ್ದು ನಂತರ ಕೋಮಾಗೆ ಜಾರಿದ್ದಳು. ಕೋಮಾದಿಂದ ಹೊರ ತರಲು ಮೆಡಿಸನ್ ನೀಡದ ಕಾರಣ ಕೊನೆಗೆ ಪ್ರಾಣಬಿಟ್ಟಿದ್ದಳು. ಈ ವೇಳೆ ರಾತ್ರಿಯೆಲ್ಲಾ ಕೃತಿಕ ಜೊತೆಗೆ ಅದೇ ರೂಮ್​​ನಲ್ಲಿಯೇ ಆರೋಪಿ ಮಹೇಂದ್ರ ರೆಡ್ಡಿ ಮಲಗಿದ್ದ.

ಕೃತಿಕಾ ರೆಡ್ಡಿ ರೂಮಿನಲ್ಲಿ ರಾಶಿ ರಾಶಿ ಔಷಧಗಳು ಪತ್ತೆ

ಇನ್ನು ಮಹೇಂದ್ರರೆಡ್ಡಿ ಮಾರಾಟಕ್ಕಿಲ್ಲದ ಔಷಧಿಗಳನ್ನು ಮನೆಗೆ ತಂದಿದ್ದ. ಗ್ಯಾಸ್ಟ್ರಿಕ್‌ ಔಷಧಿ, ಗ್ಲೂಕೋಸ್ ಬಾಟಲ್‌ ಸೇರಿದಂತೆ ರಾಶಿ ರಾಶಿ ಔಷಧಗಳು ಕೃತಿಕಾ ರೆಡ್ಡಿ ಇದ್ದ ರೂಮಿನಲ್ಲಿ ಪತ್ತೆಯಾಗಿವೆ. ಕೃತಿಕಾ ರೂಮನ್ನು ಕ್ಲಿನಿಕ್ ರೀತಿ ಬದಲಾಯಿಸಿದ್ದ. ಋತುಚಕ್ರದ ಸಮಯದಲ್ಲೂ ಡ್ರಿಪ್ ಹಾಕಿಕೊಳ್ಳಲು ಒತ್ತಾಯಿಸುತ್ತಿದ್ದ. ಕ್ಯಾನುವಲ್ ಚುಚ್ಚಿ ಕೈತುಂಬ ಸೂಜಿಯ ಗಾಯ ಮಾಡಿದ್ದ.

ಇದನ್ನೂ ಓದಿ: ಸಾಯೋಕು ಮುನ್ನ ಗಂಡನಿಗೆ ಕೃತಿಕಾ ಕೊನೆ ಮೆಸೇಜ್: ಕರುಳು ಚುರ್ ಎನ್ನುವ ಸಂದೇಶಕ್ಕೂ ಕರಗಲಿಲ್ಲ ಕಿಲ್ಲರ್ ವೈದ್ಯನ​​ ಮನಸ್ಸು

ಸದ್ಯ ಆರೋಪಿ ಅನಸ್ತೇಷಿಯಾ ಮೆಡಿಸನ್ ರಹಸ್ಯ ಬೇಧಿಸಿರುವ ಪೊಲೀಸರು, ಆತ ಖರೀದಿ ಮಾಡಿದ್ದಕ್ಕೆ ಸಾಕ್ಷಿ ಪತ್ತೆ ಮಾಡಿದ್ದಾರೆ. ಇದುವರೆಗೆ ತಾನು ಏನು ಮಾಡಿಲ್ಲವೆಂದು ಕಥೆ ಹೇಳ್ಳುತ್ತಿದ್ದ ಆತನೇ ಡ್ರಗ್ಸ್ ಖರೀದಿ ಮಾಡಿರುವುದು ಸಾಕ್ಷಿ ಸಹಿತ ಬಯಲಾಗಿದೆ. ಈ ಕೇಸ್​​ನಲ್ಲಿ ಸಿಗಬೇಕಿದ್ದ ಒಂದು ದಾಖಲಾತಿ ಅಂದರೆ ಅದು ಡ್ರಗ್ಸ್ ಖರೀದಿ, ಮತ್ತೊಂದು ಜೀವಂತ ಸಾಕ್ಷಿ ಅಂದರೆ ಅದು ಮೆಡಿಕಲ್ ಶಾಪ್​​ನವರ ಹೇಳಿಕೆ. ಈಗ ಅದೆರಡೂ ಸಿಕ್ಕಿದ್ದು, ತನಿಖೆ ಮುಂದುರೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:54 am, Tue, 21 October 25