ಏರ್​ಪೋರ್ಟ್​ನಿಂದ ಮೆಟ್ರೋ ವರೆಗೆ: ಆಧುನಿಕ ಬೆಂಗಳೂರಿಗೆ ಬುನಾದಿ ಹಾಕಿದ್ದ ಮನಮೋಹನ್ ಸಿಂಗ್

|

Updated on: Dec 27, 2024 | 11:51 AM

ದೇಶದ ಅರ್ಥ ವ್ಯವಸ್ಥೆಯ ಪ್ರಗತಿಗೆ ವಿಶೇಷ ಕೊಡುಗೆ ನೀಡಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಬೆಂಗಳೂರಿನ ಅಭಿವೃದ್ಧಿಗೂ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲೇ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ಲೋಕಾರ್ಪಣೆಗೊಂಡಿದ್ದವು. ಆಧುನಿಕ ಬೆಂಗಳೂರಿಗೆ ಅವರ ಕೊಡುಗೆಯೇನು ಎಂಬ ಮಾಹಿತಿ ಇಲ್ಲಿದೆ.

ಏರ್​ಪೋರ್ಟ್​ನಿಂದ ಮೆಟ್ರೋ ವರೆಗೆ: ಆಧುನಿಕ ಬೆಂಗಳೂರಿಗೆ ಬುನಾದಿ ಹಾಕಿದ್ದ ಮನಮೋಹನ್ ಸಿಂಗ್
ಮಾಜಿ ಸಿಎಂ ಎಸ್​ಎಂ ಕೃಷ್ಣ, ಬಿಎಸ್ ಯಡಿಯೂರಪ್ಪ, ಡಾ. ಮನಮೋಹನ್ ಸಿಂಗ್, ವೀರಪ್ಪ ಮೊಯ್ಲಿ ಹಾಗೂ ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ)
Image Credit source: Government of India
Follow us on

ಬೆಂಗಳೂರು, ಡಿಸೆಂಬರ್ 27: ಕರ್ನಾಟಕಕ್ಕೆ, ಅದರಲ್ಲಿಯೂ ಬೆಂಗಳೂರಿಗೆ ಹಲವು ಮೂಲಸೌಕರ್ಯ ಯೋಜನೆಗಳನ್ನು ಒದಗಿಸಿಕೊಡುವಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗಲೇ 2008 ರ ಮೇ 24 ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ಲೋಕಾರ್ಪಣೆಗೊಳಿಸಿದ್ದರು.

ಅದಾದ ಮೂರು ವರ್ಷಗಳ ನಂತರ, 2011 ರ ನವೆಂಬರ್ 20 ರಂದು, ಬೆಂಗಳೂರಿನಲ್ಲಿ ಮತ್ತೊಂದು ಮಹತ್ವದ ಯೋಜನೆಗೆ ಚಾಲನೆ ನೀಡಿದ್ದರು. ಅದುವೇ, ನಮ್ಮ ಮೆಟ್ರೋ. ಆಗ ಬೈಯಪ್ಪನಹಳ್ಳಿಯಿಂದ ಎಂಜಿ ರಸ್ತೆಯವರೆಗೆ ನಗರದ ಮೊದಲ ಮೆಟ್ರೋ ರೈಲಿಗೆ ಅವರು ಚಾಲನೆ ನೀಡಿದ್ದರು.

ಬೆಂಗಳೂರಿನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದ ಮನಮೋಹನ್ ಸಿಂಗ್

6,300 ಕೋಟಿ ರೂ. ವೆಚ್ಚದ ಬೆಂಗಳೂರು ಮೆಟ್ರೊ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದ ಸಂದರ್ಭದಲ್ಲಿ ಮಾತನಾಡಿದ್ದ ಮನಮೋಹನ್ ಸಿಂಗ್, ‘ಭಾರತದ ಪ್ರತಿಯೊಂದು ನಗರವು ಬೆಂಗಳೂರನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಹೆಜ್ಜೆ ಇಡುತ್ತಿವೆ. ಈ ನಗರದ ಹಿಂದಿನ ಯಶಸ್ಸನ್ನು ಗಮನದಲ್ಲಿಟ್ಟುಕೊಂಡೇ ದೃಢವಾದ, ಸಕಾರಾತ್ಮಕ ಹೆಜ್ಜೆಗಳನ್ನಿಡುತ್ತಿವೆ’ ಎಂದು ಹೇಳಿದ್ದರು.

ಬೆಂಗಳೂರಿನ ಡಾ. ಬಿಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದ ಅಕಾಡೆಮಿಕ್ ಸೆಷನ್​ಗಳನ್ನು ಡಾ. ಸಿಂಗ್ 2017 ರಂದು ಅಕ್ಟೋಬರ್ 4 ರಂದು ಉದ್ಘಾಟಿಸಿದ್ದರು. ಸಿಂಗ್ ಅವರ ಬೆಂಗಳೂರು ಒಡನಾಟ ತುಂಬಾ ಹಿಂದಿನದ್ದಾಗಿತ್ತು.

ಇದನ್ನೂ ಓದಿ: ದಿವಾಳಿಯಂಚಿನಲ್ಲಿದ್ದ ದೇಶವನ್ನು ಆ ಒಂದು ಬಜೆಟ್​ನಿಂದ ರಕ್ಷಿಸಿದ್ದ ಮನಮೋಹನ್ ಸಿಂಗ್!

1991 ರಲ್ಲೇ (ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರ ಆರ್ಥಿಕ ಸಲಹೆಗಾರರಾಗಿದ್ದಾಗ) ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ 16 ನೇ ಘಟಿಕೋತ್ಸವದಲ್ಲಿ ಸಿಂಗ್ ಭಾರತದ ಕುರಿತ ತಮ್ಮ ಆರ್ಥಿಕ ದೃಷ್ಟಿಕೋನವನ್ನು ಹಂಚಿಕೊಂಡಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ