Drink And Drive: ಬೆಂಗಳೂರಿನಲ್ಲಿ ಒಂದೇ ದಿನ 26 ಸ್ಕೂಲ್ ಬಸ್ ಚಾಲಕರ ವಿರುದ್ಧ ಪ್ರಕರಣ ದಾಖಲು

|

Updated on: Aug 08, 2024 | 9:26 AM

ಮದ್ಯಪಾನ ಮಾಡಿ ಶಾಲಾ ಬಸ್ ಚಲಾಯಿಸುವ ಚಾಲಕರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ವರ್ಷ ಜನವರಿಯಿಂದ ಪ್ರತಿ ತಿಂಗಳು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆಗಸ್ಟ್​ 5ರಂದು ನಡೆಸಿದ ಕಾರ್ಯಾಚರಣೆಯಲ್ಲಿ 26 ಸ್ಕೂಲ್ ಬಸ್ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದು ಈ ವರ್ಷ ದಿನವೊಂದರಲ್ಲಿ ದಾಖಲಾದ ಅತಿಹೆಚ್ಚಿನ ಪ್ರಕರಣವಾಗಿದೆ.

Drink And Drive: ಬೆಂಗಳೂರಿನಲ್ಲಿ ಒಂದೇ ದಿನ 26 ಸ್ಕೂಲ್ ಬಸ್ ಚಾಲಕರ ವಿರುದ್ಧ ಪ್ರಕರಣ ದಾಖಲು
ಬೆಂಗಳೂರಿನಲ್ಲಿ ಒಂದೇ ದಿನ 26 ಸ್ಕೂಲ್ ಬಸ್ ಚಾಲಕರ ವಿರುದ್ಧ ಪ್ರಕರಣ ದಾಖಲು (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಆಗಸ್ಟ್ 8: ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು ಸೋಮವಾರ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಇದೇ ವೇಳೆ ಪಾಸಣೆ ನಡೆಸಿದ 3,676 ಶಾಲಾ ಬಸ್‌ಗಳು ಮತ್ತು ವ್ಯಾನ್‌ಗಳ ಪೈಕಿ 26 ಶಾಲಾ ಬಸ್‌ಗಳ ಚಾಲಕರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇದು ಈ ವರ್ಷ ದಿನವೊಂದರಲ್ಲಿ ಶಾಲಾ ಬಸ್​​ಗಳ ಚಾಲಕರ ವಿರುದ್ಧ ದಾಖಲಿಸಲಾದ ಅತಿಹೆಚ್ಚಿನ ಸಂಖ್ಯೆಯ ಪ್ರಕರಣಗಳಾಗಿವೆ.

ಒಂದು ತಿಂಗಳ ಹಿಂದೆ ನಡೆದಿದ್ದ ಕಾರ್ಯಾಚರಣೆಯಲ್ಲಿ 23 ಚಾಲಕರು ಮದ್ಯಪಾಮ ಮಾಡಿ ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದರು. ಈ ವರ್ಷ ಇಲ್ಲಿಯವರೆಗೆ ಒಟ್ಟು 72 ಚಾಲಕರ ಮೇಲೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇದು ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಚಿಕ್ಕ ವ್ಯಾನ್‌ಗಳಲ್ಲಿ ಶಾಲೆಗೆ ತೆರಳುವ ಮಕ್ಕಳು ಚಾಲಕರು ಮದ್ಯದ ವಾಸನೆ ಬರುತ್ತಿದ್ದಾರೆ ಎಂದು ಕೆಲವೊಮ್ಮೆ ದೂರು ನೀಡುತ್ತಾರೆ ಎಂದು 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯೊಬ್ಬನ ಪೋಷಕರಾದ ಆರ್‌ಆರ್‌ನಗರದ ರೇಷ್ಮಾ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಮಕ್ಕಳಿಗಾಗಿ ಹೆಚ್ಚುವರಿ ಸುರಕ್ಷತಾ ಕ್ರಮಗಳ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಶಾಲಾ ಬಸ್​​​ಗಳಲ್ಲಿ ಸಹಾಯಕರನ್ನು ನೇಮಿಸುವುದು ಮತ್ತು ಬಸ್‌ಗಳ ಒಳಗೆ ಕಡ್ಡಾಯವಾಗಿ ಸಿಸಿಟಿವಿಗಳನ್ನು ಅಳವಡಿಸುವುದು ಅತ್ಯಗತ್ಯ. ಚಾಲಕರು ಮದ್ಯಪಾನ ಮಾಡಿದ್ದಾರೆಯೇ ಎಂದು ಪೋಷಕರು ಪರಿಶೀಲಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿದಿನ ಬೆಳಿಗ್ಗೆ ಬಸ್‌ಗಳು ಶಾಲಾ ಆವರಣದಿಂದ ಹೊರಡುವ ಮೊದಲು ಶಾಲೆಗಳ ಸಿಬ್ಬಂದಿ ತಪಾಸಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಕರಣ ದಾಖಲಿಸಿರುವ ಚಾಲಕರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 185 ರ ಅಡಿಯಲ್ಲಿ ಆರೋಪ ಹೊರಿಸಲಾಗಿದ್ದು, ಅವರ ಚಾಲನಾ ಪರವಾನಗಿಗಳನ್ನು ಅಮಾನತುಗೊಳಿಸಲು ಆಯಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಫ್ಯಾನ್ಸಿ ನಂಬರ್ ಹರಾಜು: ಯಾವ ನಂಬರ್​ಗೆ ಎಷ್ಟು ಹಣ? ಇಲ್ಲಿದೆ ಪಟ್ಟಿ

ವಿಶೇಷ ಅಭಿಯಾನದ ವಿವರ

  1. ಆಗಸ್ಟ್ 5 ರಂದು ಕಾರ್ಯಾಚರಣೆ ನಡೆಸಲಾಗಿದ್ದು, 3,676 ವಾಹನಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ 26 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
  2. ಜುಲೈ 9 ರಂದು ನಡೆಸಿದ ಕಾರ್ಯಾಚರಣೆಯಲ್ಲಿ 3,016 ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 23 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
  3. ಫೆಬ್ರವರಿ 22 ರಂದು ನಡೆಸಿದ ಕಾರ್ಯಾಚರಣೆಯಲ್ಲಿ 2,059 ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 7 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
  4. ಜನವರಿ 23 ರಂದು ನಡೆಸಿದ ಕಾರ್ಯಾಚರಣೆಯಲ್ಲಿ 3,414 ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 16 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:24 am, Thu, 8 August 24