ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ; ಇಂದು ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಸಭೆ

| Updated By: ಆಯೇಷಾ ಬಾನು

Updated on: Mar 18, 2024 | 8:54 AM

ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಹೀಗಾಗಿ ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ಬೆಂಗಳೂರು ನಗರ ಡಿಸಿ, ಬಿಬಿಎಂಪಿ, ಬೆಂಗಳೂರು ಜಲಮಂಡಳಿ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದು ಈ ಹಿಂದಿನ ಸಭೆಯಲ್ಲಿ ತೆಗೆದುಕೊಂಡಿದ್ದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ; ಇಂದು ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಸಭೆ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಮಾರ್ಚ್​.18: ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ (Drinking Water Crisis) ಹಿನ್ನೆಲೆ ಇಂದು ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಮಹತ್ವದ ಸಭೆ ನಡೆಸಲಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ. ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಆಗಮಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರು ನಗರ ಡಿಸಿ, ಬಿಬಿಎಂಪಿ, ಬೆಂಗಳೂರು ಜಲಮಂಡಳಿ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಮಾ.5ರಂದು ರಾಜ್ಯದ ನೀರಿನ ಸಮಸ್ಯೆ ಕುರಿತು ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಇಂದು ಬೆಂಗಳೂರು ನಗರ ಭಾಗಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ನೀರಿನ‌ ಸಮಸ್ಯೆ ಪರಿಹಾರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಖಾಸಗಿ ಟ್ಯಾಂಕರ್ ಮಾಲೀಕರ ಸುಲಿಗೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಮೊದಲ ಬಾರಿ ಸಿಎಂ ಸಭೆ ಬಳಿಕ ಸುಲಿಗೆಗೆ ಬ್ರೇಕ್ ಹಾಕಲಾಗಿತ್ತು. ಮಾ.7ರಂದು ಟ್ಯಾಂಕರ್ ನೀರಿನ ದರ ನಿಗದಿಪಡಿಸಿ ಆದೇಶ ಮಾಡಲಾಗಿತ್ತು. ಬೆಂಗಳೂರು ನಗರದಲ್ಲಿ ಸುಮಾರು 3,500 ಖಾಸಗಿ ಟ್ಯಾಂಕರ್‌ಗಳಿವೆ. ಖಾಸಗಿ ಟ್ಯಾಂಕರ್‌ಗಳ ಬಹುತೇಕ ಮಾಲೀಕರು ಪರವಾನಗಿ ಪಡೆದಿಲ್ಲ. ಹೀಗಾಗಿ ಮಾ.1ರಿಂದ 7ರೊಳಗೆ ಸ್ವಯಂ ನೋಂದಣಿಗೆ ಸೂಚಿಸಲಾಗಿತ್ತು. ಇಂದಿನ ಸಭೆಯಲ್ಲಿ ಈ ಬಗ್ಗೆ ಸಿದ್ದರಾಮಯ್ಯ ಮಾಹಿತಿ ಪಡೆಯಲಿದ್ದಾರೆ. ಜೊತೆಗೆ ಕಾವೇರಿ 5ನೇ ಹಂತದ ಮುಕ್ತಾಯ ಹಂತದ ಮಾಹಿತಿ ಸಂಗ್ರಹಿಸಲಿದ್ದಾರೆ. ನೀರಿನ ಸಮಸ್ಯೆ ಪರಿಹಾರ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದಾರೆ.

ಇದನ್ನೂ ಓದಿ: ಮೈತ್ರಿಗೆ ಮುಳುವಾಗುತ್ತಾ ಕೋಲಾರ? ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಲು ಬಿಜೆಪಿ ಹಿಂದೇಟು, ಪಟ್ಟು ಬಿಡದ ಜೆಡಿಎಸ್​​

ಮತ್ತೊಂದೆಡೆ ಕಳೆದ 6 ತಿಂಗಳ ಹಿಂದೆ ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಿಗೆ ಜಲಕ್ಷಾಮದ ಎಚ್ಚರಿಕೆಯನ್ನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆ ನೀಡಿತ್ತು. ರಾಜ್ಯದಲ್ಲಿನ ಅಂತರ್ಜಲದ ಕುರಿತು ಅಧ್ಯಯನದ ವರದಿಯನ್ನ ಸರ್ಕಾರಕ್ಕೆ ನೀಡಿತ್ತು. ನೀರಿನ ಕೊರತೆ ಬಗ್ಗೆ ಎಚ್ಚರಿಸಿತ್ತು. ಆದ್ರೆ ಸರ್ಕಾರ ಈ ಬಗ್ಗೆ ಯಾವುದೇ ಸೂಕ್ತ ಕ್ರಮವಹಿಸದೆ ನಿರ್ಲಕ್ಷ್ಯ ಹಿನ್ನಲೆ ಬೆಂಗಳೂರಿಗೆ ಜಲಕ್ಷಾಮದ ಸಮಸ್ಯೆ ಎದುರಾಗಿದೆ. ಹೀಗಾಗಿ ಸರ್ಕಾರ ಈಗ ಮತ್ತೆ ಹಲವು ಜಿಲ್ಲೆಗಳಲ್ಲಿ ಜಲಕ್ಷಾಮದ ಬಗ್ಗೆ ಅಧ್ಯಯನಕ್ಕೆ ಮುಂದಾಗಿದೆ. ಅಂತರ್ಜಲ ಲಭ್ಯತೆ, ಕಾಡು ಪ್ರದೇಶ, ಜನಸಾಂದ್ರತೆ, ದಿನ ಬಳಕೆಗೆ ನೀರಿನ ಬೇಡಿಕೆ, ಕೃಷಿ ಜಾನುವಾರು ಹಾಗೂ ಕಾರ್ಖಾನೆ, ಸರಾಸರಿ ವಾರ್ಷಿಕ ಮಳೆ ಮತ್ತು ದಶಕಗಳ ಉಷ್ಣಾಂಶವನ್ನ ಗಣನೆಗೆ ತೆಗೆದುಕೊಂಡು ಮತ್ತೊಂದು ವರದಿ ನೀಡಲು ಮುಂದಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ