ವೀರಲೋಕದಲ್ಲಿ ಉತ್ತರ ಕರ್ನಾಟಕದ ಸಾಹಿತ್ಯ ಸುಗ್ಗಿ: ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಕಥಾ ಸಂಕಲನ ಆಯ್ಕೆ
ವೀರಲೋಕ "ಉತ್ತರ ಕರ್ನಾಟಕದ ಸಾಹಿತ್ಯ ಸುಗ್ಗಿ" ಎಂಬ ಅರ್ಥಪೂರ್ಣ ಪರಿಕಲ್ಪನೆಯೊಂದಿಗೆ ಕನ್ನಡ ಸಾರಸ್ವತ ಲೋಕದಲ್ಲಿ ಉತ್ತರ ಪರ್ವ ಎನ್ನುವ ಮತ್ತೊಂದು ವಿಭಿನ್ನ ಹೆಜ್ಜೆ ಇರಿಸಿದೆ. ಪ್ರತಿಷ್ಠಿತ ವೀರಲೋಕದಲ್ಲಿ ಉತ್ತರ ಕರ್ನಾಟಕದ ಸಾಹಿತ್ಯ ಸುಗ್ಗಿ, ನೂರಾರು ಕೃತಿಗಳಲ್ಲಿ ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಕಥಾ ಸಂಕಲನ ವರದಾ ತೀರದ ಕಥೆಗಳು ಆಯ್ಕೆ ಆಗಿದೆ.
ಬೆಂಗಳೂರು, ಮಾರ್ಚ್ 17: ಕನ್ನಡ ಸಾಹಿತ್ಯ ಪುಸ್ತಕ ಲೋಕ ಬಹುದೊಡ್ಡ ಮಟ್ಟಿಗೆ ಬೆಳೆಯಬೇಕು. ಪ್ರತಿಯೊಬ್ಬ ಓದುಗರಿಗೂ ಸುಲಭವಾಗಿ ಅವರಿಷ್ಟದ ಪುಸ್ತಕಗಳು ಸಿಗುವಂತಾಗಬೇಕು ಎನ್ನುವ ಕಾಳಜಿಯನ್ನಿಟ್ಟುಕೊಂಡು ವೀರಕಪುತ್ರ ಎಂ ಶ್ರೀನಿವಾಸ್ ಅವರ ವೀರಲೋಕ (Viraloka) ಪುಸ್ತಕ ತಂಡ ಈಗಾಗಲೇ ಕರ್ನಾಟಕದ ಮೂಲೆ ಮೂಲೆಯಲ್ಲಿ ಹಲವು ವಿಭಿನ್ನ ಪ್ರಯೋಗಗಳನ್ನು ಮಾಡಿದ್ದಾರೆ. ಪ್ರತಿ ವರ್ಷವೂ ಕರ್ನಾಟಕದ ಹಲವು ಹೊಸ ಹೊಸ ಬರಹಗಾರರನ್ನು ಪ್ರೋತ್ಸಾಹಿಸಿ ಅವರ ಕೃತಿಗಳನ್ನು ಪ್ರಕಟಿಸಿ, ಅವುಗಳನ್ನು ಆಸಕ್ತ ಓದುಗರು ಕೈ ಸೇರುವಂತೆಯೂ ಮಾಡುತ್ತಲೇ ಬರುತ್ತಿದ್ದಾರೆ. ಈಗ ವೀರಲೋಕ “ಉತ್ತರ ಕರ್ನಾಟಕದ ಸಾಹಿತ್ಯ ಸುಗ್ಗಿ” ಎಂಬ ಅರ್ಥಪೂರ್ಣ ಪರಿಕಲ್ಪನೆಯೊಂದಿಗೆ ಕನ್ನಡ ಸಾರಸ್ವತ ಲೋಕದಲ್ಲಿ ಉತ್ತರ ಪರ್ವ ಎನ್ನುವ ಮತ್ತೊಂದು ವಿಭಿನ್ನ ಹೆಜ್ಜೆ ಇರಿಸಿದೆ.
ಏನಿದು ಉತ್ತರ ಪರ್ವ?
ವೀರಲೋಕ ಸಂಸ್ಥೆಯು ಉತ್ತರ ಕರ್ನಾಟಕದ ಲೇಖಕರ ಕನಸುಗಳಿಗೆ ಜೀವ ತುಂಬುವ ಉದ್ದೇಶದಿಂದ ಈ ‘ಉತ್ತರ ಪರ್ವ’ ಎನ್ನುವಂಥ ವಿಶೇಷ ಹಾಗೂ ವಿಭಿನ್ನ ಪರಿಕಲ್ಪನೆ ಹುಟ್ಟು ಹಾಕಿ ಆ ಮೂಲಕ ಉತ್ತರ ಕರ್ನಾಟಕದ ಬರಹಗಾರರ ಕೃತಿಗಳನ್ನು ಪ್ರಕಟಿಸಲು ಯೋಜನೆಯೊಂದನ್ನು ರೂಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆಯಲಿದೆ ಪುಸ್ತಕ ಸಂತೆ! ಕರ್ನಾಟಕದ ಜನತೆಗೆ ಪ್ರೀತಿಯಿಂದ ಇಲ್ಲಿದೆ ಮುಕ್ತ ಆಹ್ವಾನ
ವೀರಲೋಕದ ಇಂಥದೊಂದು ಅಪರೂಪದ ಕೆಲಸಕ್ಕೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು 100 ಕ್ಕಿಂತ ಹೆಚ್ಚು ಬರಹಗಾರರು ತಮ್ಮ ತಮ್ಮ ಕೃತಿಗಳನ್ನು ಕಳುಹಿಸಿದ್ದರು ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ. ಪ್ರಾಯಶ: ಉತ್ತರ ಕರ್ನಾಟಕದ ಬರಹಗಾರರಿಗೆ ಇಂತದೊಂದು ಮುಕ್ತ ಅವಕಾಶವನ್ನು ಕೊಟ್ಟಿದ್ದು ಮಾತ್ರ ಇದೇ ಮೊದಲು ಬಾರಿ ಎಂದರೂ ತಪ್ಪಾಗಲಾರದು. ಈ ಕೀರ್ತಿ ವೀರಲೋಕಕ್ಕೆ ಸಲ್ಲಲೇಬೇಕು.
ಆಯ್ಕೆ ಹೇಗೆ ನಡೆಯುತ್ತೆ?
ಉತ್ತರ ಪರ್ವಕ್ಕೆ ಬಂದಂಥ 100 ಕ್ಕಿಂತ ಹೆಚ್ಚು ಕೃತಿಗಾರರ ಕೃತಿಗಳನ್ನು ಕನ್ನಡದ ಶ್ರೇಷ್ಠ ಬರಹಗಾರರಾದ ರಾಗಂ ಎಂದೇ ಖ್ಯಾತರಾದ ರಾಜಶೇಖರ ಮಠಪತಿ ಹಾಗೂ ವೀರಕಪುತ್ರ ಎಂ ಶ್ರೀನಿವಾಸ್ ಅವರ ತಂಡವು ಈಗಾಗಲೇ ಲೇಖಕರ ಕೃತಿಗಳ ಗುಣಮಟ್ಟವನ್ನು ಎರಡು ಸುತ್ತಿನಲ್ಲಿ ಪರಿಶೀಲಿಸಿ ಪ್ರಕಟಿಸಲು ಯೋಗ್ಯವಾದಂಥ, ಕಥಾಸಂಕಲನ, ಕಾದಂಬರಿ, ಕವನ ಸಂಕಲನ ಸೇರಿದಂತೆ ಸುಮಾರು 20 ಬರಹಗಾರರ ಕೃತಿಗಳನ್ನು ಆಯ್ಕೆ ಮಾಡಿದ್ದಾರೆ. ಬರುವ ಏಪ್ರಿಲ್ 17 ರಂದು ಅಂತಿಮ ಪಟ್ಟಿ ಬಿಡುಗಡೆ ಮಾಡಿ ಅದರಲ್ಲಿ ಆಯ್ಕೆಯಾದ ಬರಹಗಾರರ ಕೃತಿಗಳನ್ನು ಪ್ರಕಟಿಸಲು ತೀರ್ಮಾನಿಸಿದ್ದಾರೆ.
ವೀರಲೋಕದ ಈ ಉತ್ತರ ಪರ್ವದ ಎರಡನೆ ಸುತ್ತಿನಲ್ಲಿ ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಬರೆದಿರುವ ವರದಾ ತೀರದ ಕಥೆಗಳು ಎನ್ನುವ ಕಥಾ ಸಂಕಲನ ಆಯ್ಕೆಯಾಗಿದ್ದು ಹೆಮ್ಮೆಯ ವಿಚಾರ. ನಾಡಿನ ಶ್ರೇಷ್ಠ ಎಲ್ಲ ಸಾಹಿತಿಗಳು ವೀರಲೋಕದ ಇಂಥ ಹೊಸ ಅವಿಷ್ಕಾರಗಳಿಗೆ ಬೆನ್ನು ತಟ್ಟಿದ್ದು, ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಸಾಹಿತ್ಯ ಸುಗ್ಗಿಯಲ್ಲಿ ನಾಡಿನ ಶ್ರೇಷ್ಠ ಗಣ್ಯರ ಸಮ್ಮುಖದಲ್ಲಿ ಉತ್ತರ ಪರ್ವದಲ್ಲಿ ಆಯ್ಕೆಗೊಂಡ ಕೃತಿಗಳನ್ನು ಪ್ರಕಟಿಸಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.