ಬೆಂಗಳೂರು, ಮೇ 30: ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲು (Driverless Metro train) ಸಂಚಾರ ಶೀಘ್ರದಲ್ಲೇ ಸನ್ನಿಹಿತವಾಗಲಿದೆ. ಟೆಸ್ಟಿಂಗ್ ಕಾರ್ಯಗಳು ಈಗಾಗಲೇ ಆರಂಭವಾಗಿದ್ದು, ಸಿಗ್ನಲಿಂಗ್ ಟೆಸ್ಟ್ ಪ್ರಕ್ರಿಯೆಗಳು ಜೂನ್ 7ರಿಂದ ಶುರುವಾಗಲಿದೆ ಎಂದು ಬಿಎಂಆರ್‌ಸಿಎಲ್ (BMRCL) ತಿಳಿಸಿದೆ. ಸಿಗ್ನಲಿಂಗ್ ಟೆಸ್ಟ್, ಸಿಗ್ನಲ್ ಮತ್ತು ರೈಲಿನ ಸಂಯೋಜನೆ ಪರೀಕ್ಷೆಗಳು ಚಾಲಕ ರಹಿತ ರೈಲಿನ ಮುಖ್ಯ ಪರೀಕ್ಷೆಯ ಭಾಗವಾಗಿದೆ ಎಂದು ಮೆಟ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ (Yellow Line) ಡಿಸೆಂಬರ್ನಲ್ಲಿ ಚಾಲಕ ರಹಿತ ರೈಲು ಸಂಚಾರ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ 20 ನಿಮಿಷಗಳಿಗೊಮ್ಮೆ ಚಾಲಕ ರಹಿತ ಮೆಟ್ರೋ ರೈಲು ಸಂಚಾರ ನಡೆಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸುತ್ತಿದೆ. ಮೊದಲಿಗೆ ಒಟ್ಟು 57 ಏಕಮುಖ ಸಂಚಾರ ಮತ್ತು ನಂತರದಲ್ಲಿ ದ್ವಿಮುಖ ಸಂಚಾರಕ್ಕೆ ಪ್ಲ್ಯಾನ್ ಮಾಡಲಾಗುತ್ತಿದೆ. ಇದಕ್ಕಾಗಿ 18.82 ಕಿಮೀ ಎತ್ತರದ ಮಾರ್ಗದಲ್ಲಿ ಮತ್ತು ಅದರಲ್ಲಿ ಬರುವ ಎಲ್ಲಾ 16 ನಿಲ್ದಾಣಗಳಲ್ಲಿ ಮೂಲಸೌಕರ್ಯಗಳನ್ನು ಸಿದ್ಧಪಡಿಸಲಾಗಿದೆ. ಆದರೆ ಚೀನಾದ ಸಂಸ್ಥೆಯಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್‌ನಿಂದ ಸಂವಹನ ಆಧಾರಿತ ರೈಲು ನಿಯಂತ್ರಣ (ಸಿಬಿಟಿಸಿ) ರೈಲುಗಳ ಪೂರೈಕೆಯಲ್ಲಿ ವಿಳಂಬದಿಂದಾಗಿ ಬಹುನಿರೀಕ್ಷಿತ ಚಾಲಕ ರಹಿತ ಮೆಟ್ರೋ ರೈಲು ಸಂಚಾರ ಆರಂಭ ಮುಂದೂಡಿಕೆಯಾಗುತ್ತಿದೆ.
ಬೊಮ್ಮಸಂದ್ರ ಮತ್ತು ಬೊಮ್ಮನಹಳ್ಳಿ ನಡುವೆ ಚಾಲಕ ರಹಿತ ರೈಲಿನ ಸರಳ ಪರೀಕ್ಷಾರ್ಥ ಸಂಚಾರವನ್ನು ರೈಲು ಬೆಂಗಳೂರಿಗೆ ಬಂದ ತಕ್ಷಣವೇ ನಡೆಸಲಾಗಿದೆ. ಬೊಮ್ಮನಹಳ್ಳಿ ಮತ್ತು ಆರ್‌ವಿ ರಸ್ತೆ ನಡುವಣ ಎನರ್ಜೈಸೇಷನ್ ಪ್ರಕ್ರಿಯೆ ಮೇ 20 ರಂದು ಪೂರ್ಣಗೊಂಡಿತು. ಈಗ ಪೂರ್ಣ ಸ್ಟ್ರೆಚ್‌ನಲ್ಲಿ ಮುಖ್ಯ ಪರೀಕ್ಷೆಯನ್ನು ಮಾಡಬಹುದು ಎಂದು ಮೂಲಗಳು ತಿಳಿಸಿವೆ.
ಸಿಗ್ನಲ್ ಏಕೀಕರಣದ ಹೊರತಾಗಿ, ಮೂರನೇ ರೈಲು (ರೈಲು ಓಡಿಸಲು ವಿದ್ಯುತ್ ಪೂರೈಸುವ 750 ವೋಲ್ಟ್ ಟ್ರ್ಯಾಕ್) ಮತ್ತು ರೈಲು ಕಾರ್ಯಕ್ಷಮತೆ ಪರೀಕ್ಷೆಗಳನ್ನು ಕೂಡ ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ. ರೈಲನ್ನು ಆರಂಭದಲ್ಲಿ ನಿಧಾನಗತಿಯ ವೇಗದಲ್ಲಿ ಮತ್ತು ನಂತರ ಶಿಫಾರಸು ಮಾಡಿದ ವೇಗದಲ್ಲಿ ಓಡಿಸಲಾಗುತ್ತದೆ ಎಂದು ಮತ್ತೊಂದು ಮೂಲವು ತಿಳಿಸಿದೆ. ಬೆಂಗಳೂರು ಮೆಟ್ರೋಗೆ ರೈಲುಗಳನ್ನು ನಿಗದಿತ ರೀತಿಯಲ್ಲಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ರೋಬೋಟಿಕ್ ಆಟೊಮ್ಯಾಟಿಕ್ ಅಸೆಂಬ್ಲಿ ಲೈನ್ಗಳನ್ನೂ ಸ್ಥಾಪಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಇದನ್ನೂ ಓದಿ: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳಿಗೆ ಕೇರಳದ ಮಲಯಾಳಿ ಹುಡುಗರೀಗ ಚಾಲಕರು! ಕನ್ನಡ ಬಾರದವರ ಜತೆ ಕಂಡಕ್ಟರ್ಗಳು ಕಂಗಾಲು
ಎರಡನೇ ಚಾಲಕ ರಹಿತ ರೈಲು ಆಗಸ್ಟ್‌ನಲ್ಲಿ, ಮುಂದಿನ ರೈಲು ಸೆಪ್ಟೆಂಬರ್‌ನಲ್ಲಿ ಮತ್ತು ಡಿಸೆಂಬರ್‌ನೊಳಗೆ ಒಟ್ಟು ಮೂರು ರೈಲುಗಳ ಆಗಮನವಾಗಲಿದೆ. ಒಟ್ಟು ಆರು ರೈಲುಗಳಲ್ಲಿ, ಐದರ ಸಂಚಾರ ಡಿಸೆಂಬರ್ ವೇಳೆಗೆ ಆರಂಭವಾಗಲಿದೆ. ಒಂದು ರೈಲನ್ನು ಬ್ಯಾಕಪ್ ಆಗಿ ಬಿಎಂಆರ್‌ಸಿಎಲ್ ಇರಿಸಿಕೊಳ್ಳಲಿದೆ ಎಂದು ಮತ್ತೊಂದು ಮೂಲವು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ