ಮತ್ತೆ ಹಾಟ್ ಸಿಟಿಯಾಗುತ್ತಿದೆ ಬೆಂಗಳೂರು: ಹವಾಮಾನ ತಜ್ಞರು ಹೇಳುವುದೇನು?
ಈ ವಾರ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ ದಿಢೀರ್ 3 ರಿಂದ 4 ಡಿಗ್ರಿ ಏರಿಕೆಯಾಗಿದೆ. ಬಿಸಿಗಾಳಿ ಗಾಳಿಯ ಪ್ರಮಾಣವು ಜಾಸ್ತಿಯಾಗಿದೆ. ನಗರದಲ್ಲಿ ಥಟ್ಟನೆ ವಾತಾವರಣದಲ್ಲಿ ಈ ರೀತಿ ಬದಲಾವಣೆಗೆ ಕಾರಣವೇನು? ಮುಂದಿನ ದಿನಗಳಲ್ಲಿ ಉಷ್ಣಾಂಶ ಹೇಗಿರಲಿದೆ? ಹವಾಮಾನ ತಜ್ಞರ ಹೇಳಿಕೆ ಆಧಾರಿತ ವಿವರ ಇಲ್ಲಿದೆ.
ಬೆಂಗಳೂರು, ಮೇ 30: ಮಳೆಯಾದ ಕಾರಣ ಬೆಂಗಳೂರಿನಲ್ಲಿ (Bengaluru) ಕಳೆದ ಒಂದು ವಾರದಿಂದ ವಾತಾವರಣ (Bengaluru Weather) ತುಸು ತಣ್ಣಗಾಗಿತ್ತ್ತು. ಆದರೆ, ಈಗ ಮತ್ತೆ ಬಿಸಿಲಿನ ಪ್ರಮಾಣ ಹಾಗೂ ಉಷ್ಣಾಂಶ (Temperature) ಜಾಸ್ತಿಯಾಗುತ್ತಿದೆ. ಕಳೆದ ಒಂದು ವಾರದ ಅವಧಿಯಲ್ಲಿ ನಗರದಲ್ಲಿ ಉಷ್ಣಾಂಶದ ಪ್ರಮಾಣದಲ್ಲಿ ಶೇ 2-3ರಷ್ಟು ಹೆಚ್ಚಳವಾಗಿದೆ. ಒಂದು ತಿಂಗಳ ಹಿಂದೆ ಸಿಲಿಕಾನ್ ಸಿಟಿ ಕಾದ ಕೆಂಡವಾಗಿತ್ತು. ನಂತದಲ್ಲಿ ಒಂದು ವಾರಗಳ ಕಾಲ ಮಳೆಯಾಗಿ ತಂಪಾಗಿತ್ತು. ಈಗ ಮತ್ತೆ ವಾತಾವರಣ ಬದಲಾಗುತ್ತಿದೆ.
ಕಳೆದ ವಾರ ಗರಿಷ್ಠ ಉಷ್ಣಾಂಶ 29 ರಿಂದ 30 ಡಿಗ್ರಿ ಇತ್ತು. ಈ ವಾರ ದಿಢೀರ್ ಗರಿಷ್ಠ ಉಷ್ಣಾಂಶ 3 ರಿಂದ 4 ಡಿಗ್ರಿ ಏರಿಕೆಯಾಗಿದೆ. ಜೊತೆಗೆ ಬಿಸಿಗಾಳಿ ಗಾಳಿಯ ಪ್ರಮಾಣವು ಜಾಸ್ತಿಯಾಗಿದೆ. ಅಲ್ಲದೆ, ಬೆಳಗ್ಗೆ ತಣ್ಣನೆಯ ವಾತಾವರಣ, ಮಧ್ಯಾಹ್ನ ಸುಡುಬಿಸಿಲು ಹಾಗೂ ಸಂಜೆಯಾಗುತ್ತಿದ್ದಂತೆ ತುಸು ಚಳಿಯ ಅನುಭವ ಆಗುತ್ತಿದೆ.
ಇಂತಹ ಸಂದರ್ಭದಲ್ಲಿ ಆರೋಗ್ಯದ ಮೇಲೂ ನಿಗಾ ಇಡಬೇಕಾಗಿದೆ. ಹವಾಮಾನ ವೈಪರೀತ್ಯದ ಪರಿಣಾಮ ಸರಿಯಾಗಿ ಜೀರ್ಣವಾಗದೇ ಇರುವುದು, ಶೀತ, ಕೆಮ್ಮು, ಜ್ವರ, ತಲೆ ಭಾರದಂಥ ಸಮಸ್ಯೆಗಳು ಜಾಸ್ತಿಯಾಗಿವೆ. ಜೊತೆಗೆ ವಯಸ್ಕರಲ್ಲಿ ಉಸಿರಾಟ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳೂ ಇದೆ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳಿಗೆ ಕೇರಳದ ಮಲಯಾಳಿ ಹುಡುಗರೀಗ ಚಾಲಕರು! ಕನ್ನಡ ಬಾರದವರ ಜತೆ ಕಂಡಕ್ಟರ್ಗಳು ಕಂಗಾಲು
ಬಂಗಾಳಕೊಲ್ಲಿಯ ಚಂಡಮಾರುತ ಉಂಟಾಗಿರುವ ಕಾರಣ ಅದರ ಪರಿಣಾಮ ರಾಜ್ಯದ ಮೇಲೂ ಆಗುತ್ತಿದೆ. ಗರಿಷ್ಠ ಉಷ್ಣಾಂಶದ ಪ್ರಮಾಣ ಕೊಂಚ ಜಾಸ್ತಿಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ 32 ಡಿಗ್ರಿ ಸೆಲ್ಶಿಯಸ್ ಇದ್ದು, ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಒಂದರಿಂದ ಎರಡು ಶೇಕಡ ಜಾಸ್ತಿಯಾಗಿದೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರಿಯಲಿದ್ದು ಬಿಸಿಲು ಸಹ ಜಾಸ್ತಿ ಇರಲಿದೆ. ಮೇ 31 ರಂದು ಮುಂಗಾರು ಕೇರಳ ಪ್ರವೇಶಿಸಲಿದ್ದು, ಜೂನ್ 5 ರಂದು ರಾಜ್ಯದಲ್ಲಿ ಮಳೆಯಾಗುವ ಸಾಧ್ಯಾತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿಎಸ್ ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ