ಬೆಂಗಳೂರು, (ಅಕ್ಟೋಬರ್ 17): ಕಳೆದ 15 ದಿನಗಳಲ್ಲಿ ಬೆಂಗಳೂರಿನಲ್ಲಿ(Bengaluru) ಐಟಿ ದಾಳಿ ನಡೆದಿದೆ. ಮೊನ್ನೇ ಅಷ್ಟೇ ದಾಳಿ ಮಾಡಿದ್ದ ಐಟಿ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ನಗದು ಹಣ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಇದೀಗ ಇಡಿ ದಾಳಿಯಾಗಿದೆ(ED Raids ). ಬೆಂಗಳೂರಿನ ಉದ್ಯಮಿಯೋರ್ವ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎರಡು ಕಂಪನಿಗಳ ಎಂಡಿ ಮತ್ತು ಡೈರೆಕ್ಟರ್ ಆಗಿರುವ ಉದ್ಯಮಿಯ ಕಸವಿನಹಳ್ಳಿ ಬಳಿ ಇರುವ ನಿವಾಸದ ಮೇಲೆ ದಾಳಿಯಾಗಿದೆ.
ಉದ್ಯಮಿ ಉಷಾ ರಾಮನಾನಿ ಮನೆ ಹಾಗೂ ಕಂಪನಿಗಳ ಕಚೇರಿಗಳ ಮೇಲೆ ದಾಳಿಯಾಗಿದೆ. ಇವರು ಹಲವು ಖಾಸಗಿ ಕಂಪನಿಗಳನ್ನು ಹೊಂದಿರುವ ಬ್ಗಗೆ ಮಾಹಿತಿ ತಿಳಿದುಬಂದಿದೆ. ಒಟ್ಟು 8 ಕಾರುಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್ 17) ಬೆಳಗ್ಗೆ 5 ಗಂಟೆಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: 5 ದಿನ ನಡೆದ ಐಟಿ ದಾಳಿ: ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಸಿಕ್ಕಿರುವ ಹಣವೆಷ್ಟು ಗೊತ್ತಾ?
ಆಪ್ಟ್ ಸರ್ಕ್ಯೂಟ್ ಇಂಡಿಯಾ ಪ್ರೈವೇಟ್. ಲಿಮಿಟೆಡ್ ಕಂಪನಿ ಎಂಡಿ ಆಗಿರುವ ಉಷಾ ರಾಮನಾನಿ ಅವರು ಕಂಪನಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲೋನ್ ಪಡೆದು ವಂಚನೆ ಮಾಡಿದ್ದಾರೆ. ಎಸ್ ಬಿಐ ಬ್ಯಾಂಕ್ ನಿಂದ 354 ಕೋಟಿ ರೂ. ಲೋನ್ ಪಡೆದು ವಂಚಿಸಿದ್ದಾರೆ. ಈ ವಂಚನೆ ಪ್ರಕರಣ ಇಡಿಗೆ ವರ್ಗಾವಣೆಯಾಗಿತ್ತು.
2011-16 ರ ವರೆಗೂ ಎಸ್ಬಿಐ ಬ್ಯಾಂಕ್ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಒಟ್ಟು 354 ಕೋಟಿ ರೂಪಾಯಿ ಲೋನ್ ಪಡೆದುಕೊಂಡಿದ್ದರು. ಆದ್ರೆ, ಪಡೆದುಕೊಂಡಿದ್ದ ಲೋನ್ ಕಟ್ಟದೇ ವಂಚನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಪ್ಟ್ ಸರ್ಕ್ಯೂಟ್ ಇಂಡಿಯಾ ಪ್ರೈ.ಲಿ. ಓಸಿಐಲ್ (ಮೆಡಿಕಲ್ ಟೆಕ್ನಾಲಜಿ) ಕಂಪನಿ ವಿರುದ್ಧ 2019ರಲ್ಲಿ ಸಿಬಿಐಗೆ ದೂರು ನೀಡಿತ್ತು. ಬಳಿಕ ಈ ಪ್ರಕರಣವನ್ನು ಸಿಬಿಐ, ಇಡಿಗೆ ವರ್ಗಾವಣೆ ಮಾಡಿತ್ತು. ಸದ್ಯ ಇದೇ ಪ್ರಕರಣ ಸಂಬಂಧ ಉಷಾ ರಾಮನಾನಿ ಮನೆ, ಕಂಪನಿ ಹಾಗೂ ಕಚೇರಿ ಮೇಲೆ ಇಡಿ ದಾಳಿ ಮಾಡಿದ್ದು, PMLA ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದೆ.
ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ನಗರದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವಿಷಯ ಅಂದರೆ ಅದು ಐಟಿ ರೇಡ್. ದಾಳಿ ವೇಳೆ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಪುತ್ರನ ಮನೆಯಲ್ಲಿ, ಮಂಚದ ಕೆಳಗೆ ಅಡಗಿಸಿಟ್ಟಿದ್ದ 40 ಕೋಟಿಗೂ ಹೆಚ್ಚು ಹಣವನ್ನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ರು.. ಇದಾದ ಒಂದು ದಿನದ ಬೆನ್ನಲ್ಲೇ ಬಿಲ್ಡರ್ ಸಂತೋಷ್‌ಗೆ ಸೇರಿದ ಅಪಾರ್ಟ್ಮೆಂಟ್‌ನ ಫ್ಲ್ಯಾಟ್ನಲ್ಲಿ 40 ಕೋಟಿಗೂ ಅಧಿಕ ಹಣವನ್ನು ಜಪ್ತಿಮಾಡಲಾಗಿತ್ತು.
ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಮತ್ತು ಬಿಲ್ಡರ್ ಸಂತೋಷ್ ಮನೆಯಲ್ಲಿ ಸಿಕ್ಕ ಒಟ್ಟಾರೆ 80 ಕೋಟಿ ಹಣ ಯಾರಿಗೆ ಸೇರಿದ್ದು ಅನ್ನೋ ಪ್ರಶ್ನೆ ಎದುರಾಗಿದೆ. ಹಣ ಸೇರಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿರುವ ಆದಾಯ ತೆರಿಗೆ ಇಲಾಖೆ ಈಗಾಗ್ಲೇ ಅಂಬಿಕಾಪತಿ ಪುತ್ರ ಪ್ರದೀಪ್ ಮತ್ತು ಬಿಲ್ಡರ್ ಸಂತೋಷ್‌ಗೆ ನೋಟಿಸ್ ನೀಡಿದೆ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಇಂದು ಇಬ್ಬರನ್ನು ವಿಚಾರಣೆಗೊಳಪಡಿಸಲಿದೆ.
Published On - 10:47 am, Tue, 17 October 23