ಕೊಳವೆ ಬಾವಿ ಹೆಸರಲ್ಲಿ 969 ಕೋಟಿ ರೂ. ಅವ್ಯವಹಾರ; ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಇ.ಡಿ. ನೋಟಿಸ್

| Updated By: Ganapathi Sharma

Updated on: Dec 28, 2022 | 7:53 AM

ED Notice to BBMP Commissioner; ಕೊಳವೆ ಬಾವಿ ಕೊರೆಸುವ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೆಸರಲ್ಲಿ 969 ಕೋಟಿ ರೂ. ಅವ್ಯವಹಾರ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಬಿಬಿಎಂಪಿ ಮುಖ್ಯ ತುಷಾರ್ ಗಿರಿನಾಥ್​​ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಕೊಳವೆ ಬಾವಿ ಹೆಸರಲ್ಲಿ 969 ಕೋಟಿ ರೂ. ಅವ್ಯವಹಾರ; ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಇ.ಡಿ. ನೋಟಿಸ್
ತುಷಾರ್ ಗಿರಿನಾಥ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕೊಳವೆ ಬಾವಿ ಕೊರೆಸುವ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೆಸರಲ್ಲಿ 969 ಕೋಟಿ ರೂ. ಅವ್ಯವಹಾರ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಬಿಬಿಎಂಪಿ (BBMP) ಮುಖ್ಯ ತುಷಾರ್ ಗಿರಿನಾಥ್​​ಗೆ (Tushar Giri Nath) ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. 198 ವಾರ್ಡ್​ಗಳಲ್ಲಿ ಕೊಳವೆ ಬಾವಿ ಕೊರೆಸುವ ಮತ್ತು ಆರ್​​ಒ ಘಟಕಗಳ ಸ್ಥಾಪನೆ ಹೆಸರಿನಲ್ಲಿ 2016ರಿಂದ 2018ರ ವರೆಗೆ ನಡೆದಿರುವ ಕಾಮಗಾರಿಗಳಲ್ಲಿ ಅಕ್ರಮ ಎಸಗಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕ ಅಧ್ಯಕ್ಷ ಎನ್​.ಆರ್​.ರಮೇಶ್ ದೂರು ನೀಡಿದ್ದರು. ಅಕ್ರಮ ಹಣಕಾಸು ವರ್ಗಾವಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಒಟ್ಟು 969 ಕೋಟಿ ರೂ. ವೆಚ್ಚದಲ್ಲಿ 9,588 ಕೊಳವೆ ಬಾವಿ ಕೊರೆಸಲಾಗಿದೆ. 976 ಆರ್​ಒ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದರಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ರಮೇಶ್, 2019ರ ಮೇ ತಿಂಗಳಲ್ಲಿ ಭರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರು. 2016ರಿಂದ 2018ವರೆಗೆ ಆಯುಕ್ತರಾಗಿದ್ದವರ ವಿರುದ್ಧ, 5 ಜನ ಜಂಟಿ ಆಯುಕ್ತರು, 5 ಮುಖ್ಯ ಅಭಿಯಂತರರು ಸೇರಿದಂತೆ 40 ಅಧಿಕ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿತ್ತು. ಎಸಿಬಿ ರದ್ದಾದ ಬಳಿಕ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿತ್ತು. ಬೃಹತ್ ಮೊತ್ತದ ಪ್ರಕರಣವಾದ್ದರಿಂದ ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆ ಅಡಿ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮತದಾರರ ಪಟ್ಟಿ ಅಕ್ರಮ: ಮನೆ ಮನೆಗೆ ತೆರಳಿ ವೋಟರ್​ ಐಡಿ ಪರಿಶೀಲಿಸಿದ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ, ಆರ್​ಒ ಘಟಕಗಳು ಎಲ್ಲೆಲ್ಲಿವೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ಕಲೆ ಹಾಕುತ್ತಿದೆ.

ಬಿಬಿಎಂಪಿ ಅಧಿಕಾರಿಗಳಿಗೆ ಆತಂಕ

ಜಾರಿ ನಿರ್ದೇಶನಾಲಯ ನೋಟಿಸ್ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಆಂತರಿಕ ಸಭೆ ನಡೆಸಿದ್ದಾರೆ. 2016ರಿಂದ 18ರ ಅವಧಿಯಲ್ಲಿ ಎಲ್ಲೆಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ, ಎಲ್ಲೆಲ್ಲಿ ಆರ್​ಒ ಘಟಕಗಳನ್ನು ಸ್ಥಾಪಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ವಾರ್ಡ್ ಮಟ್ಟದ ಇಂಜಿನಿಯರ್​ಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಆದರೆ, ಈ ವೇಳೆ 9,588 ಕೊಳವೆ ಬಾವಿಗಳು ಮತ್ತು ಆರ್​ಒ ಘಟಕಗಳ ಬಗ್ಗೆ ಸೂಕ್ತ ಲೆಕ್ಕ ಸಿಕ್ಕಿಲ್ಲ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ