ಬೆಳ್ಳಂಬೆಳಗ್ಗೆ ಸಚಿವ ಸತೀಶ್ ಜಾರಕಿಹೊಳಿಗೆ ಇಡಿ ಶಾಕ್! ಡಾಲರ್ಸ್ ಕಾಲೋನಿ ಮನೆ ಮೇಲೆ ದಾಳಿ
ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಅಬಕಾರಿ ಇಲಾಖೆ ಭ್ರಷ್ಟಾಚಾರ, ನಕಲಿ ಬಾರ್ ಲೈಸೆನ್ಸ್ ಹಾಗೂ ಹವಾಲಾ ಲಿಂಕ್ ಆರೋಪದಡಿ ತನಿಖೆ ತೀವ್ರಗೊಂಡಿದೆ. ಜೂನ್‌ನಲ್ಲಿ ಸಚಿವರ ಬಾಮೈದ ವೈ. ಮಂಜುನಾಥ್ ಮನೆಯಲ್ಲಿ 13.3 ಕೋಟಿ ಮೌಲ್ಯದ ಚಿನ್ನಾಭರಣ ಸಿಕ್ಕಿದ್ದ ಪ್ರಕರಣದ ಮುಂದುವರಿದ ಭಾಗವಾಗಿ ಈ ಶೋಧ ನಡೆದಿದೆ.

ಮುಖ್ಯಾಂಶಗಳು
- ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಮನೆ ಮೇಲೆ ಇಡಿ ದಾಳಿ.
- ಅಬಕಾರಿ ಅಕ್ರಮ ಹಾಗೂ ಹವಾಲಾ ಲಿಂಕ್ ಆರೋಪದಡಿ ತೀವ್ರ ದಾಖಲೆಗಳ ಪರಿಶೀಲನೆ.
- ಜೂನ್‌ನಲ್ಲಿ ಬಾಮೈದ ಮಂಜುನಾಥ್ ನಿವಾಸದ ಮೇಲೂ ಇಡಿ ದಾಳಿ ನಡೆಸಿತ್ತು.
ಬೆಂಗಳೂರು, ಸೆಪ್ಟೆಂಬರ್ 09: ಕಳೆದ ಜೂನ್ ತಿಂಗಳಿನಲ್ಲಿ ರಾಜ್ಯ ಲೋಕೋಪಯೋಗಿ (PWD) ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ಸಂಬಂಧಿ ಹಾಗೂ ಅಬಕಾರಿ ಇಲಾಖೆ ಅಧಿಕಾರಿಯಾಗಿದ್ದ ವೈ. ಮಂಜುನಾಥ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ಬೃಹತ್ ದಾಳಿ ನಡೆಸಿ ಶಾಕ್ ನೀಡಿದ್ದರು. ಆ ಘಟನೆಯ ಬಿಸಿ ಆರುವ ಮುನ್ನವೇ, ಇದೀಗ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ನೇರವಾಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದ ಮೇಲೆಯೇ ಬೆಳ್ಳಂಬೆಳಗ್ಗೆ ದಿಢೀರ್ ದಾಳಿ ನಡೆಸಿ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ.
ಪ್ರಮುಖ ದಾಖಲೆಗಳ ತನಿಖೆ
ಇಂದು ಬೆಳಿಗ್ಗೆ ಎರಡು ಪ್ರತ್ಯೇಕ ಕಾರುಗಳಲ್ಲಿ ಆಗಮಿಸಿದ ಇಡಿ ಅಧಿಕಾರಿಗಳ ತಂಡವು ಸಚಿವರ ಮನೆಯೊಳಗೆ ಪ್ರವೇಶಿಸಿ ಪರಿಶೀಲನೆ ಆರಂಭಿಸಿದೆ. ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಬಾರ್ ಲೈಸೆನ್ಸ್ ಅಕ್ರಮ ಹಾಗೂ ಹವಾಲಾ ಹಣಕಾಸು ವ್ಯವಹಾರದ ಲಿಂಕ್ ಆಧಾರದ ಮೇಲೆ ಈ ಶೋಧ ನಡೆಸಲಾಗುತ್ತಿದೆ. ಮನೆಯಲ್ಲಿರುವ ಪ್ರಮುಖ ದಾಖಲೆಗಳು, ಆಸ್ತಿ ಪತ್ರಗಳು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ತೀವ್ರ ತನಿಖೆಗೆ ಒಳಪಡಿಸಲಾಗುತ್ತಿದ್ದು, ಪ್ರಮುಖ ಸಾಕ್ಷ್ಯಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಸಚಿವರ ನಿವಾಸದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಬಾಮೈದನ ಬೆನ್ನಲ್ಲೇ ಸಚಿವರ ಮನೆ ಮೇಲೂ ದಾಳಿ!
ಕಳೆದ ಜೂನ್ ತಿಂಗಳಿನಲ್ಲಿ ಬೆಳಗಾವಿ ವಿಭಾಗದ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿದಂತೆ ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಅಥಣಿ ಪ್ರದೇಶಗಳಲ್ಲಿ ಇಡಿ ಸುದೀರ್ಘ ದಾಳಿ ನಡೆಸಿತ್ತು. ಬಾರ್ ಲೈಸೆನ್ಸ್ ನೀಡುವಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ನಡೆದಿದ್ದ ಆ ಕಾರ್ಯಾಚರಣೆಯ ವೇಳೆ ಮಂಜುನಾಥ್ ಮನೆಯಲ್ಲಿ ನೂರಾರು ಬೇನಾಮಿ ಬಾರ್ ಲೈಸೆನ್ಸ್, 5.5 ಲಕ್ಷ ರೂ. ನಗದು ಹಾಗೂ ಬರೋಬ್ಬರಿ 13.3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು. ವಿದೇಶಿ ಅಕ್ರಮ ಹಣ ಹಾಗೂ ಹವಾಲಾ ಜಾಲದ ಕೊಂಡಿ ಸಚಿವರಿಗೂ ತಲುಪಿದೆ ಎಂಬ ಶಂಕೆಯ ಮೇಲೆ ಇದೀಗ ಸಚಿವರ ಮನೆ ಮೇಲೆಯೂ ದಾಳಿ ಮುಂದುವರಿದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




