ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಸಮಸ್ಯೆ ಎದುರಾಗಿದ್ದರೂ ಮಳೆ ಎದುರಿಸಲು ಬಿಬಿಎಂಪಿ ಸಮರ್ಪಕ ಸಿದ್ಧತೆ ಮಾಡಿಕೊಳ್ಳಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಜನರು ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆಗಳಿಂದ ಮಳೆ ನೀರನ್ನು ಚರಂಡಿಗೆ ಎಳೆದುಕೊಳ್ಳಬೇಕಿದ್ದ ರಂಧ್ರಗಳ ಮೂಲಕವೇ ಮಳೆ ನೀರು ರಸ್ತೆಗಳ ಮೇಲೆ ಹರಿಯುತ್ತಿದ್ದು, ಜನಪ್ರತಿನಿಧಿಗಳೇ ಇಲ್ಲದ ಬಿಬಿಎಂಪಿಗೆ ಜನರು ಹಿಡಿಶಾಪ ಹಾಕುವುದು ಮುಂದುವರಿದಿದೆ. ಹಲವೆಡೆ ಮರಗಳು ಧರೆಗೆ ಉರುಳಿದ್ದು, ವಿದ್ಯುತ್ ತಂತಿಗಳು ತುಂಡಾಗಿವೆ. ಮಳೆಯ ಜೊತೆಗೆ ವಿದ್ಯುತ್ ಸಂಪರ್ಕವೂ ಕಡಿತಗೊಂಡ ಕಾರಣ ಜನರ ಸಂಕಷ್ಟ ಹೆಚ್ಚಾಗಿದೆ.
ನಗರದ ಸಾಯಿ ಲೇಔಟ್ಗೆ ಭೇಟಿ ನೀಡಿದ ಬೈರತಿ ಬಸವರಾಜ್, ನಿನ್ನೆ ರಾತ್ರಿಯಿಂದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ಸಾಯಿ ಲೇಔಟ್ನಲ್ಲಿ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇವೆ. ರೈಲ್ವೆ ವೆಂಟ್ ಹೆಚ್ಚಿಸುತ್ತೇವೆ. ಈ ಕಾಮಗಾರಿಗೆ ಮುಖ್ಯಮಂತ್ರಿ ₹ 17.5 ಕೋಟಿ ಅನುದಾನ ನೀಡಿದ್ದಾರೆ. ವರ್ಕ್ ಆರ್ಡರ್ ಪಡೆದುಕೊಂಡು ಸ್ಥಳಕ್ಕೆ ಬಂದಿದ್ದೇನೆ. ಸೆಪ್ಟೆಂಬರ್ನಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗುವುದು. ಮುಂದಿನ ಮಳೆಗಾಲದ ಒಳಗೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
ಸಾಯಿ ಲೇಔಟ್ನಲ್ಲಿ ಸಂಕಷ್ಟ ಅನುಭವಿಸುತ್ತಿರುವ ಸ್ಥಳೀಯರಿಗೆ ತಿಂಡಿ, ನೀರು, ಹಾಲು ವಿತರಿಸುತ್ತಿದ್ದೇವೆ. ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಜನರಿಗೆ ಸಮಾಧಾನ ಮಾಡಿದರು. ಈಗಲೂ ಸಾಯಿ ಲೇಔಟ್ನಲ್ಲಿ 4 ಅಡಿಗಳಷ್ಟು ನೀರು ನಿಂತಿದೆ. ನಿವಾಸಿಗಳಿಗೆ ಇಡ್ಲಿ, ಪೊಂಗಲ್, ಚಿತ್ರಾನ್ನ, ಹಾಲು, ನೀರಿನ ವ್ಯವಸ್ಥೆ ಮಾಡಲಾಗಿದೆ. ಟ್ರ್ಯಾಕ್ಟರ್ ಮೂಲಕ ಮನೆಗೆ ಬಾಗಿಲಿಗೆ ತಿಂಡಿ, ಹಾಲು ಸರಬರಾಜು ಮಾಡಲಾಗುತ್ತಿದೆ.
ಪ್ರತಿಬಾರಿ ಮಳೆಯಾದಾಗಲೂ ಸಾಯಿಲೇಔಟ್ಗೆ ನೀರು ನುಗ್ಗುತ್ತದೆ. ರಿಂಗ್ ರೋಡ್, ಈಸ್ಟ್ ಜೋನ್ನಿಂದ ರಾಜಕಾಲುವೆ ನೀರು ಸಾಯಿ ಲೇಔಟ್ಗೆ ನುಗ್ಗುತ್ತದೆ. ಸಾಯಿ ಲೇಔಟ್ ಬಳಿ ರಾಜಕಾಲುವೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಇದೀಗ ಸ್ಥಳಕ್ಕೆ ಬಂದಿರುವ ಒಂದು ಜೆಸಿಬಿ ವಾಹನ ಲೇಔಟ್ ಒಳಗೆ ತುಂಬಿದ್ದ ನೀರು ಹೊರ ಹಾಕಲು ವ್ಯವಸ್ಥೆ ಮಾಡಿದೆ. ಭಾರಿ ಮಳೆಯಿಂದಾಗಿ ಹೆಬ್ಬಾಳದಲ್ಲಿರುವ ಸಿಎಲ್ಎ ಲೇಔಟ್ ಜಲಾವೃತಗೊಂಡಿತ್ತು. ಸದ್ಯ ನೀರಿನ ಪ್ರಮಾಣ ಕೊಂಚ ಇಳಿಮುಖವಾಗಿದೆ.
ಬೆಂಗಳೂರಿನಲ್ಲಿ ಬುಧವಾರ ಮುಂಜಾನೆ 5 ಗಂಟೆಯಲ್ಲಿ ಮಳೆಯಿಂದಾಗಿ ಚಾಮರಾಜಪೇಟೆಯಲ್ಲಿ ಆಟೊ ಒಂದರ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಮರ ಬಿದ್ದ ಕಾರಣ ವಿದ್ಯುತ್ ಪೂರೈಕೆಯು ವ್ಯತ್ಯಯವಾಗಿದೆ. ಕೇವಲ 100 ಮೀಟರ್ ದೂರದಲ್ಲಿ ಕೆಇಬಿ ಕಚೇರಿಯಿದ್ದರೂ ಕಂಬ ಮೇಲೆತ್ತಿ, ದುರಸ್ತಿ ಕಾಮಗಾರಿ ಆರಂಭಿಸಲು ಸಿಬ್ಬಂದಿ ಮುಂದೆ ಬರುತ್ತಿಲ್ಲ ಎಂದು ಜನರು ದೂರಿದ್ದಾರೆ.
Published On - 11:10 am, Wed, 3 August 22