ಕರ್ನಾಟಕ 75 ಲಕ್ಷ ಮನೆಗಳ ಮೇಲೆ ರಾಷ್ಟ್ರಧ್ವಜ, ಎಲ್ಲೆಡೆ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ: ಬಿಜೆಪಿ ಸಂಕಲ್ಪ
ಸ್ವಾತಂತ್ರ್ಯ ದಿನಾಚರಣೆಯಂದು ಶಾಲಾ-ಕಾಲೇಜು, ಕಂಪೆನಿಗಳ ಮೇಲೆ ಧ್ವಜ ಹಾರಿಸಬೇಕು. ಆ ಮೂಲಕ ಗಿನ್ನಿಸ್ ದಾಖಲೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಬೆಂಗಳೂರು: ಭಾರತವು ಸ್ವಾತಂತ್ರ್ಯ ಪಡೆದು 75 ವರ್ಷಗಳಾದ ಹಿನ್ನೆಲೆಯಲ್ಲಿ ನಡೆಯುತ್ತಿರುವ ‘ಆಜಾದಿ ಕಾ ಅಮೃತ್ ಮಹೋತ್ಸವ್’ (ಸ್ವಾತಂತ್ರ್ಯದ ಅಮೃತ ಮಹೋತ್ಸವ) ಕಾರ್ಯಕ್ರಮಗಳ ಭಾಗವಾಗಿ ದೇಶದ ಎಲ್ಲ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಭಾರತದ 20 ಕೋಟಿ ಮನೆಗಳಲ್ಲಿ ರಾಷ್ಟ್ರಧ್ವಜ ಪಟಪಟಿಸುವ ನಿರೀಕ್ಷೆಯಿದ್ದು, ಕರ್ನಾಟಕದ 75 ಲಕ್ಷ ಮನೆಗಳ ಮೇಲೆ ಆಗಸ್ಟ್ 15ರಂದು ರಾಷ್ಟ್ರಧ್ವಜ ಹಾರಿಸಲಾಗುವುದು ಎಂದು ಬಿಜೆಪಿ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ನಾಡಹಬ್ಬಗಳಿಂದ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ ಮಾಡಲು ತೀರ್ಮಾನಿಸಲಾಗಿದೆ. 312 ಮಂಡಲಗಳಲ್ಲಿ, 2500 ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರಗಳಲ್ಲಿ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಧ್ವಜ ಹಾರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಪೂರ್ವ ಯೋಜನೆ, ಪೂರ್ಣ ಯೋಜನೆ, ಯಶಸ್ವಿ ಕಾರ್ಯ ಎಂಬ ಮಾರ್ಗಸೂಚಿಯಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿ ಮಾಡುತ್ತೇವೆ. 75 ತಾಲೂಕು ಕೇಂದ್ರದಲ್ಲಿ ತ್ರಿವರ್ಣ ಧ್ವಜ ಯಾತ್ರೆ, 175 ಕಡೆ ಸೈಕಲ್ ಜಾಥಾ, 75 ಕಡೆಗಳಲ್ಲಿ ಎತ್ತಿನಗಾಡಿಗಳಲ್ಲಿ ಧ್ವಜಯಾತ್ರೆ, 175 ಕಡೆಗಳಲ್ಲಿ ಮಹಿಳಾ ಜಾಥಾ ನಡೆಯಲಿದೆ ಎಂದು ವಿವರಿಸಿದರು.
ಕರ್ನಾಟಕದ ವಿವಿಧೆಡೆ ಸ್ವಾತಂತ್ರ್ಯ ಹೋರಾಟಗಾರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗುವುದು. ಮಂಗಳೂರು, ಸುರಪುರ, ಹಲಗಲಿಯಲ್ಲಿ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಧ್ವಜಯಾತ್ರೆ ಸಮಯದಲ್ಲಿ ಖಾದಿ ಬಟ್ಟೆ ಮತ್ತು ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡಲಾಗುವುದು. ಮೈಸೂರು ಕಲಬುರಗಿ, ಚಿತ್ರದುರ್ಗ, ಕಿತ್ತೂರಿನಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ ಎಲ್ಲಾ ಕಡೆಗಳಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿದವರ ಸಂಬಂಧಿಕರ ಮನೆಗೆ ತೆರಳಿ ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಸ್ವಾತಂತ್ರ್ಯ ದಿನಾಚರಣೆಯಂದು ಶಾಲಾ-ಕಾಲೇಜು, ಕಂಪೆನಿಗಳ ಮೇಲೆ ಧ್ವಜ ಹಾರಿಸಬೇಕು. ಆ ಮೂಲಕ ಗಿನ್ನಿಸ್ ದಾಖಲೆ ಮಾಡಬೇಕು ಎಂದು ಅವರು ಕರೆ ನೀಡಿದರು.
Published On - 12:23 pm, Wed, 3 August 22