ಹಿಂದಿನ‌ ವಾರ್ಡ್ ಸಂಖ್ಯೆಗೇ ಚುನಾವಣೆ ನಡೆಯಲಿ ಎಂದು ಆದೇಶಿಸಿದ ಸುಪ್ರೀಂ ಕೋರ್ಟ್​: ಬಿಬಿಎಂಪಿಗೆ ಯಾವುದೇ ಕ್ಷಣ ಚುನಾವಣೆ ಘೊಷಣೆ!

ಹಿಂದಿನ‌ ವಾರ್ಡ್ ಸಂಖ್ಯೆಗೇ ಚುನಾವಣೆ ನಡೆಯಲಿ ಎಂದು ಆದೇಶಿಸಿದ ಸುಪ್ರೀಂ ಕೋರ್ಟ್​: ಬಿಬಿಎಂಪಿಗೆ ಯಾವುದೇ ಕ್ಷಣ ಚುನಾವಣೆ ಘೊಷಣೆ!
ಬಿಬಿಎಂಪಿ ಕಛೇರಿ

BBMP Elections: ಸರ್ವೋಚ್ಛ ಕೋರ್ಟ್​ ಇಂದು ನೀಡಿರುವ ತೀರ್ಪು ಬಿಬಿಎಂಪಿಗೂ ಅನ್ವಯವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡ್ತೀವಿ. ನಾವಂತೂ ಕರ್ನಾಟಕ‌ದಲ್ಲಿ ಸ್ಥಗಿತಗೊಂಡಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡುವುದಕ್ಕೆ ತಯಾರಿದ್ದೀವಿ ಎಂದು ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

TV9kannada Web Team

| Edited By: sadhu srinath

May 10, 2022 | 6:11 PM

ಬೆಂಗಳೂರು: ಎಲ್ಲ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಯಾವೆಲ್ಲ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ (Local Bodies) ನಿಂತು ಹೋಗಿದೆಯೋ ಅಲ್ಲೆಲ್ಲ ಶೀಘ್ರವೇ ಚುನಾವಣೆ ಮಾಡಬೇಕು. ಹಿಂದಿನ‌ ಚುನಾವಣೆಯಲ್ಲಿ ಎಷ್ಟು ವಾರ್ಡ್ ಗಳು ಇದ್ದವೋ ಅದನ್ನೇ ಮುಂದುವರಿಸಬೇಕು ಅಂತಾನೂ ಸುಪ್ರೀಂ ಕೋರ್ಟ್​ ಹೇಳಿದೆ. ಮಧ್ಯಪ್ರದೇಶ ವರ್ಸಸ್ ಸುರೇಶ್ ಮಹಾಜನ್ ನಡುವೆ ಸುಪ್ರಿಂ ಕೋರ್ಟ್ ನಲ್ಲಿ (Supreme Court) ಕೇಸ್ ನಡೆದಿದ್ದು, ಆ ಸಂಬಂಧ ಸರ್ವೋಚ್ಛ ಕೋರ್ಟ್​ ಇಂದು ನೀಡಿರುವ ತೀರ್ಪು ಬಿಬಿಎಂಪಿಗೂ ಅನ್ವಯವಾಗಲಿದೆ. ಆದರೆ ಬಿಬಿಎಂಪಿ ಚುನಾವಣೆಗೆ (BBMP Elections) ಸಂಬಂಧಿಸಿದಂತೆಯೂ ಸುಪ್ರಿಂ ಕೋರ್ಟ್ ನಲ್ಲಿ ಪ್ರತ್ಯೇಕ ಕೇಸ್ ನಡೆದಿದೆ. ಇವತ್ತಿನ ಸುಪ್ರೀಂ ಆದೇಶದಲ್ಲಿ ಸ್ಪಷ್ಟವಾಗಿ ಮಧ್ಯ ಪ್ರದೇಶಕ್ಕೆ ಆದೇಶ ಮಾಡಿದ್ದರೂ ಕೂಡ ಅದು ಇಡೀ ದೇಶಕ್ಕೇ ಅನ್ವಯ ಆಗುತ್ತೆ ಎಂದೂ ಸುಪ್ರಿಂ ಕೋರ್ಟ್​ ಹೇಳಿದೆ. ಕರ್ನಾಟಕದ ಮಟ್ಟಿಗೆ ಅದರಲ್ಲೂ ಬಿಬಿಎಂಪಿಗೆ ಅನ್ವಯವಾಗುವಂತೆ ಇದು ಮಹತ್ವವಾದ ಬೆಳವಣಿಗೆಯಾಗಿದೆ. ಜನರಲ್ ಆಗಿ ವಾರ್ಡ್ ತೀರ್ಮಾನ ಮಾಡಬೇಕು ಅಂತಾ ಹೇಳಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡ್ತೀವಿ. ನಾವಂತೂ ಕರ್ನಾಟಕ‌ದಲ್ಲಿ ಸ್ಥಗಿತಗೊಂಡಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡುವುದಕ್ಕೆ ತಯಾರಿದ್ದೀವಿ. ಇಲೆಕ್ಷನ್ ಗೆ ಹಿಂಜರಿಯೋ ಪ್ರಶ್ನೆಯೇ ಇಲ್ಲ. ಬಿಜೆಪಿ ಚುನಾವಣೆಗೆ ತಯಾರಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

ಇದರೊಂದಿಗೆ ಕೊರೊನಾ ಕಾಟ, ವಾರ್ಡ್​​ ವಿಂಗಡಣೆ ಮತ್ತಿತರ ಆಡಳಿತಾತ್ಮಕ ನೆಪಗಳಿಂದಾಗಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ -ಬಿಬಿಎಂಪಿಗೆ ರಾಜ್ಯ ಸರ್ಕಾರ ಅನಿವಾರ್ಯವಾಗಿ ಸಿದ್ಧತೆ ನಡೆಸಬೇಕಿದೆ. ಈ ಹಿಂದಿನ 198 ವಾರ್ಡ್​​ಗಳಿಗೇ ಚುನಾವಣೆ ನಡೆಯಲಿದೆ. ಆದರೆ ರಾಜ್ಯ ಸರ್ಕಾರ 243 ವಾರ್ಡುಗಳಿಗೆ ಚುನಾವಣೆ ನಡೆಸಲು ಆಲೋಚಿಸುತ್ತಿತ್ತು. ಬಿಬಿಎಂಪಿಯ  ಈ ಹಿಂದಿನ ಚುನಾಯಿತ ಪ್ರತಿನಿಧಿಗಳ ಆಡಳಿತವು ಸೆಪ್ಟೆಂಬರ್ 2020 (September 2020) ಕ್ಕೆ ಮುಗಿದಿತ್ತು.

ಸಂವಿಧಾನದ 243 U ವಿಧಿ ಪ್ರಕಾರ ಎಲೆಕ್ಷನ್‌ ಮುಂದೂಡುವಂತಿಲ್ಲ… ಇಂದಿನ ಕೋರ್ಟ್ ತೀರ್ಪು ಆದೇಶವೇನು? ಮಧ್ಯಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಹಿನ್ನೆಲೆ ತಕ್ಷಣ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಇಂದು ಆದೇಶ ಹೊರಡಿಸಿದೆ. ಎರಡು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬಗೊಂಡಿದೆ. ಸಂವಿಧಾನದ 243 U ವಿಧಿ ಪ್ರಕಾರ ಎಲೆಕ್ಷನ್‌ ಮುಂದೂಡುವಂತಿಲ್ಲ. ಹಾಲಿ ಮೀಸಲಾತಿಯಂತೆ ತಕ್ಷಣ ಚುನಾವಣೆ ನಡೆಸಿ ಎಂದು ಮಧ್ಯಪ್ರದೇಶ ಚುನಾವಣಾ ಆಯೋಗಕ್ಕೆ ‘ಸುಪ್ರೀಂ’ ನಿರ್ದೇಶನ ನೀಡಿದೆ.

ಹಿಂದುಳಿದ ವರ್ಗಗಳ ಆಯೋಗವೇ ಮೀಸಲಾತಿ ನಿಗದಿಪಡಿಸಬೇಕು. ವಾರ್ಡ್ ವಾರು ಮೀಸಲಾತಿ ಹೊರಡಿಸಬೇಕೆಂದು ‘ಸುಪ್ರೀಂ’ ಸೂಚನೆ ನೀಡಿದೆ. ಎಲ್ಲಾ ರಾಜ್ಯ ಸರ್ಕಾರಗಳಿಗೂ ಸುಪ್ರೀಂಕೋರ್ಟ್ ಈ ನಿರ್ದೇಶನ ಅನ್ವಯವಾಗಲಿದೆ. ಈ ಸುಪ್ರೀಂ ನಿರ್ದೇಶನವು ಈಗಾಗಲೇ ವಿಳಂಬವಾಗಿರುವ ಚುನಾವಣೆಗೆ ಅನ್ವಯವಿಲ್ಲ. ಆಯೋಗ ನಿಗದಿಪಡಿಸುವ ಮೀಸಲಾತಿಯೇ ಅಂತಿಮವಾಗಿ ಚುನಾವಣೆಗೆ ಅನ್ವಯಿಸಬೇಕು. ನಿಗದಿಪಡಿಸಿರುವ ಮೀಸಲಾತಿ ಮುಂದಿನ ಚುನಾವಣೆಗೆ ಅನ್ವಯಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಗಮನಾರ್ಹವೆಂದರೆ ಬಿಬಿಎಂಪಿ ಚುನಾವಣೆ ಕುರಿತಾದ ಅರ್ಜಿ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬಾಕಿಯಿದೆ. ವಿಚಾರಣೆಗೆ ಸುಪ್ರೀಂಕೋರ್ಟ್ ದಿನಾಂಕ ನಿಗದಿಪಡಿಸಬೇಕಿದೆ. ಈ ಹಿಂದೆ, 198 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಹೈಕೋರ್ಟ್ ಸೂಚಿಸಿತ್ತು. ಆದರೆ ಈ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಶೀಘ್ರ ವಿಚಾರಣೆಗೆ ರಾಜ್ಯ ಚುನಾವಣಾ ಆಯೋಗ ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್ ಮುಂದೆ ನೀಡುವ ಆದೇಶದ ಮೇರೆಗೆ BBMP ಚುನಾವಣೆ ನಡೆಯಲಿದೆ.

ಸುಪ್ರೀಂ ಕೋರ್ಟ್​ ಆದೇಶವನ್ನು ಸ್ಟಡಿ ಮಾಡಬೇಕು: ದೆಹಲಿಯಲ್ಲಿ ಬೊಮ್ಮಾಯಿ ಕರ್ನಾಟಕದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಸಿದ್ಧವಿದೆ. ಬಿಬಿಎಂಪಿ ಚುನಾವಣೆಗೂ ನಾವು ಸನ್ನದ್ಧರಾಗಿದ್ದೇವೆ. ಸುಪ್ರೀಂ ಕೋರ್ಟ್​ ಆದೇಶವನ್ನು ಸ್ಟಡಿ ಮಾಡಬೇಕು. ಕಾನೂನು ತಂಡಕ್ಕೂ ಸ್ಟಡಿ ಮಾಡಲು ಹೇಳಿದ್ದೇನೆ. ಈ ಮಧ್ಯೆ ರಾಜ್ಯ ಚುನಾವಣಾ ಆಯೋಗ ಏನು ತೀರ್ಮಾನ ಮಾಡುತ್ತೆ ನೋಡಬೇಕು ಎಂದು ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಗೂ ಮೊದಲು ಎಲೆಕ್ಷನ್ ಮಾಡುತ್ತೊ ಆಮೇಲೆ ಮಾಡುತ್ತೊ ನೋಡೋಣ- ಮಾಜಿ ಸಿಎಂ ಕುಮಾರಸ್ವಾಮಿ ಇನ್ನು ಕೋಲಾರದ ಮುಳಬಾಗಿಲು ಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಪಕ್ಷ ಸಿದ್ಧವಾಗಿದೆ. ಸರ್ಕಾರ ವಿಧಾನಸಭೆ ಚುನಾವಣೆಗೂ ಮೊದಲು ಎಲೆಕ್ಷನ್ ಮಾಡುತ್ತೊ ಆಮೇಲೆ ಮಾಡುತ್ತೊ ನೋಡೋಣ. ಹಲವು ಸಬೂಬು ಹೇಳಿ ಚುನಾವಣೆ ಮುಂದೂಡಿಕೆ ಮಾಡಿದ್ದಾರೆ. ಸರ್ಕಾರ ಈಗಲೇ ಚುನಾವಣೆ ನಡೆಸಿದರೂ ಜೆಡಿಎಸ್ ಪಕ್ಷ ಸಿದ್ದವಾಗಿದೆ. ಬಿಬಿಎಂಪಿ ಚುನಾವಣೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಹೇಳಿದ್ದಾರೆ. ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada