ರಾಜಕಾಲುವೆ ಒತ್ತುವರಿ: ಇಕೋಸ್ಪೇಸ್​ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳದಂತೆ ಪ್ರಭಾವಿ ಸಚಿವರಿಂದ ತಾಕೀತು

| Updated By: ಸಾಧು ಶ್ರೀನಾಥ್​

Updated on: Oct 24, 2022 | 11:55 AM

80 ಅಡಿ ಅಗಲದ ರಾಜಕಾಲುವೆ ಒತ್ತುವರಿ ಮಾಡಿ, ಒತ್ತುವರಿ ಜಾಗದಲ್ಲಿ 12 ಅಂತಸ್ತಿನ ಮೂರು ಕಟ್ಟಡ ನಿರ್ಮಾಣ ಮಾಡಿರುವ ಆರೋಪದ ಮೇಲೆ ಕೆ ಆರ್​ ಪುರಂ ತಹಶೀಲ್ದಾರ್​ ಅವರು ಇಕೋಸ್ಪೇಸ್​ಗೆ ನೋಟಿಸ್ ನೀಡಿದ್ದರು.

ರಾಜಕಾಲುವೆ ಒತ್ತುವರಿ: ಇಕೋಸ್ಪೇಸ್​ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳದಂತೆ  ಪ್ರಭಾವಿ ಸಚಿವರಿಂದ ತಾಕೀತು
ರಾಜಕಾಲುವೆ ಒತ್ತುವರಿ: ಇಕೋಸ್ಪೇಸ್​ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳದಂತೆ ಪ್ರಭಾವಿ ಸಚಿವರಿಂದ ತಾಕೀತು
Follow us on

ಬೆಂಗಳೂರು: ರಾಜಧಾನಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಕಂಪನಿಯೊಂದರ ವಿರುದ್ಧ ಕ್ರಮ ಜರುಗಿಸದಂತೆ ಪ್ರಭಾವಿ ಸಚಿವರೊಬ್ಬರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇಕೋಸ್ಪೇಸ್​ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳದಂತೆ ಕಂದಾಯ ಮತ್ತು BBMP ಅಧಿಕಾರಿಗಳಿಗೆ ಪ್ರಭಾವಿ ಸಚಿವರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

80 ಅಡಿ ಅಗಲದ ರಾಜಕಾಲುವೆ ಒತ್ತುವರಿ ಮಾಡಿ, ಒತ್ತುವರಿ ಜಾಗದಲ್ಲಿ 12 ಅಂತಸ್ತಿನ ಮೂರು ಕಟ್ಟಡ ನಿರ್ಮಾಣ ಮಾಡಿರುವ ಆರೋಪದ ಮೇಲೆ ಕೆ ಆರ್​ ಪುರಂ ತಹಶೀಲ್ದಾರ್​ ಅವರು ಇಕೋಸ್ಪೇಸ್​ಗೆ ನೋಟಿಸ್ ನೀಡಿದ್ದರು. ಸಾವಳಕೆರೆ-ಬೆಳ್ಳಂದೂರು ಕೆರೆ ಸಂಪರ್ಕಿಸುವ ರಾಜಕಾಲುವೆ ಇದಾಗಿದೆ. ತಹಶೀಲ್ದಾರ್ ನೋಟಿಸ್​ಗೆ ಇಕೋಸ್ಪೇಸ್ ಉತ್ತರ ನೀಡಬೇಕಿತ್ತು. ಇದೀಗ ಇಕೋಸ್ಪೇಸ್ ವಿರುದ್ಧ ಕ್ರಮ ಕೈಗೊಳ್ಳದಂತೆ ತಾಕೀತು ಬಂದಿದೆ ಎಂದು ತಿಳಿದುಬಂದಿದೆ.

ತಹಶೀಲ್ದಾರ್ ಒಂದು ತಿಂಗಳ ಹಿಂದೆಯೇ ಸರ್ವೆ ಮಾಡಿ, ವಿಲೇಜ್ ಮ್ಯಾಪ್ ಆಧಾರದ ಮೇಲೆ ನೋಟಿಸ್ ಜಾರಿ ಮಾಡಿದ್ದರು. ಇಕೋಸ್ಪೇಸ್ ಮುಂಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಸೃಷ್ಟಿಯಾಗಲು ಇಕೋಸ್ಪೇಸ್ ಒತ್ತುವರಿಯೇ ಕಾರಣ ಎಂದು ಹೇಳಲಾಗಿದೆ.

ಇಕೋಸ್ಪೇಸ್‌ ಒತ್ತುವರಿಯನ್ನು ಬಿಬಿಎಂಪಿ ನಿರ್ಲಕ್ಷಿಸುತ್ತಿದೆ: ಎಎಪಿ

ರಾಜಕಾಲುವೆಗಳ ಒತ್ತುವರಿ ತೆರವು ಕೇವಲ ಕಣ್ಣಾಮುಚ್ಚಾಲೆಯಂತಿದೆ. ರಾಜಕಾಲುವೆ ಮೇಲೆ ಎಬ್ಬಿಸಿರುವ ಹಲವು ಕಟ್ಟಡಗಳು ನೆಲಸಮವಾಗುತ್ತಿಲ್ಲ. ಇಕೋಸ್ಪೇಸ್‌ ಕಂಪನಿಯಿಂದ ಆಗಿರುವ ಒತ್ತುವರಿಯನ್ನು ಬಿಬಿಎಂಪಿ ನಿರ್ಲಕ್ಷಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಸದಸ್ಯರು ಆರೋಪಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಸದಸ್ಯರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಇಕೋಸ್ಪೇಸ್‌ನಲ್ಲಿನ ಡೆಮಾಲಿಶನ್ ಡ್ರೈವ್ ಅನ್ನು ಕೇವಲ ‘ನಾಟಕ’ ಎಂದು ಬಣ್ಣಿಸಿದ್ದಾರೆ. ಕಣ್ಣೆದುರಿಗಿರುವ ದಾಖಲೆಗಳು ಮತ್ತು ಇಕೋಸ್ಪೇಸ್ ಹಿಂದೆ ಹಾದುಹೋಗುವ ರಾಜಕಾಲುವೆಯನ್ನು ಮೊಬೈಲ್ ಅಪ್ಲಿಕೇಶನ್ ತೋರಿಸುತ್ತಿದೆ ಎಂದು ಮಹದೇವಪುರ ವಲಯದ ಆಮ್ ಆದ್ಮಿ ಪಕ್ಷದ ಘಟಕದ ಮುಖ್ಯಸ್ಥೆ ಹೇಳಿದ್ದಾರೆ. ಈ ವೇಳೆ ಅಶೋಕ್ ಮೃತ್ಯುಂಜಯ ಅವರು ಬೆಳ್ಳಂದೂರಿನ ಸರ್ವೆ ಸಂಖ್ಯೆ 50, 64 ಮತ್ತು 66ರಲ್ಲಿ ಇಕೋಸ್ಪೇಸ್‌ನ ಅತಿಕ್ರಮಣವನ್ನು ತೆರವುಗೊಳಿಸಿಲ್ಲ. ಅದೇ ರೀತಿ ಸೈಟ್ ನಂಬರ್ 70ರಲ್ಲಿರುವ ನಲಪಾಡ್ ಅಕಾಡೆಮಿಯಲ್ಲಿ ಪಾಲಿಕೆಯು ಕೇವಲ ಸಣ್ಣಪುಟ್ಟ ಒತ್ತುವರಿ ಧ್ವಂಸ ಕಾರ್ಯವನ್ನು ಕೈಗೆತ್ತಿಕೊಂಡಿದೆ, ಆದರೆ ಚಲ್ಲಘಟ್ಟದ ​​ಸರ್ವೆ ಸಂಖ್ಯೆ 66, 67, 68 ಮತ್ತು 69 ರ ಆಸ್ತಿಗಳ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಸಹ ನಡೆಸಲಿಲ್ಲ ಎಂದು ಹೇಳಿದರು.

ಅಶೋಕ್ ಅವರು ಮತ್ತು ಅವರ ಸ್ನೇಹಿತರು ದಿಶಾಂಕ್ ಮೊಬೈಲ್ ಅಪ್ಲಿಕೇಶನ್ ಬಳಸಿ ಮಳೆನೀರು ಚರಂಡಿಯ ಹಾದಿಯನ್ನು ಹುಡುಕಿದ್ದಾರೆ. ಚರಂಡಿಗೆ ಅಡ್ಡಿಯಾಗಿರುವ ಅನೇಕ ಕಟ್ಟಡಗಳು ಇದರ ಮ ಊಲಕ ಅವರ ಕಣ್ಣಿಗೆ ಬಿದ್ದಿದೆ. ಇಕೋಸ್ಪೇಸ್ ಸಂಸ್ಥೆಯು ಸರ್ವೆ ನಂಬರ್ 50, 64 ಮತ್ತು 66ರಲ್ಲಿ ಚರಂಡಿಗಳನ್ನು ಒತ್ತುವರಿ ಮಾಡಿಕೊಂಡಿದೆ. ಆದರೆ ಅತಿಕ್ರಮಣ ವಿರೋಧಿ ಕೆಲಸ ಬೇರೆ ಕಡೆಯೇ ನಡೆಯುತ್ತಿದೆ. ಇದು ಕೇವಲ ಕಣ್ಣಾಮುಚ್ಚಾಲೆಯಾಗಿದೆ. ಬಿಜೆಪಿ ಸರ್ಕಾರವು ದೊಡ್ಡ ಬಿಲ್ಡರ್‌ಗಳ ಒತ್ತುವರಿಯನ್ನು ತೆರವುಗೊಳಿಸಲು ಹೆದರುತ್ತಿದೆ ಎಂದು ಅಶೋಕ್ ಮೃತ್ಯುಂಜಯ ಹೇಳಿದ್ದಾರೆ.

ಚಲ್ಲಘಟ್ಟದಲ್ಲಿ ಸರ್ವೆ ನಂಬರ್ 66, 67, 68, 69 ಮತ್ತು 70ರಲ್ಲಿ ಅತಿಕ್ರಮಣವಾಗಿದೆ. ಆದರೆ ಬಿಬಿಎಂಪಿ ಸೈಟ್ ನಂಬರ್​ 70ರ ಒಂದು ಗೋಡೆಯನ್ನು ಮಾತ್ರ ಒಡೆದು ಹಾಕಿದೆ. ಇತರೆ ಸರ್ವೆ ನಂಬರ್‌ಗಳನ್ನು ಒತ್ತುವರಿ ಮಾಡಿಕೊಂಡರೂ ಏನೂ ಮಾಡುತ್ತಿಲ್ಲ. ಒಂದೇ ಗೋಡೆಯನ್ನು ಕೆಡವಿದರೆ ನೀರು ಹೇಗೆ ಹಾದುಹೋಗುತ್ತದೆ? ಮಹದೇವಪುರದ ಜನರಿಗೆ ಒತ್ತುವರಿ ಈ ನಾಟಕ ಅರ್ಥವಾಗುತ್ತದೆ ಎಂದು ಅವರು ಹೇಳಿದರು.

ಅಧಿಕಾರಿಗಳು ಬಡ ಮತ್ತು ಮಧ್ಯಮ ಆದಾಯದ ಗುಂಪುಗಳ ಮನೆಗಳನ್ನು ಮಾತ್ರ ನೆಲಸಮ ಮಾಡಿರುವುದನ್ನು ಆಪ್ ಪತ್ತೆ ಹಚ್ಚಿದೆ. ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಅನುಕೂಲವಾಗುವಂತೆ ಎಇಸಿಎಸ್ ಲೇಔಟ್‌ಗೆ ಹೊಂದಿಕೊಂಡಿರುವ ಮಾರುತಿ ಲೇಔಟ್‌ನಲ್ಲಿ ಚರಂಡಿ ಮೇಲೆ ನಿರ್ಮಿಸಿರುವ ರಸ್ತೆಯನ್ನು ಬಿಬಿಎಂಪಿ ತೆರವುಗೊಳಿಸಿಲ್ಲ.

Published On - 11:40 am, Mon, 24 October 22