ಅನ್ಯ ಭಾಷೆ ಕಾರ್ಯಕ್ರಮ ಬಿತ್ತರಿಸುವ ನಿರ್ಧಾರ ಬದಲಿಸದಿದ್ದರೆ ರಮಾಕಾಂತ್ ಗೋಬ್ಯಾಕ್‌ ಚಳವಳಿ ತಾರಕಕ್ಕೆ: ಸುರೇಶ್ ಕುಮಾರ್ ಎಚ್ಚರಿಕೆ

| Updated By: ಸಾಧು ಶ್ರೀನಾಥ್​

Updated on: Jan 31, 2022 | 1:04 PM

ರೇನ್ ಬೋ 101.3 ಎಫ್ ಎಂ ವಿರೂಪಗೊಳಿಸದಂತೆ ಆಕಾಶವಾಣಿ ಅಪರ ಮಹಾ ನಿರ್ದೇಶಕರಿಗೆ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದು ಅನ್ಯ ಭಾಷೆಗಳ ಸುದ್ದಿ ಕಾರ್ಯಕ್ರಮ ಬಿತ್ತರ ಮಾಡಲು ನಡೆಸುತ್ತಿರುವ ಹುನ್ನಾರ ಸರಿಯಲ್ಲ.

ಅನ್ಯ ಭಾಷೆ ಕಾರ್ಯಕ್ರಮ ಬಿತ್ತರಿಸುವ ನಿರ್ಧಾರ ಬದಲಿಸದಿದ್ದರೆ ರಮಾಕಾಂತ್ ಗೋಬ್ಯಾಕ್‌ ಚಳವಳಿ ತಾರಕಕ್ಕೆ: ಸುರೇಶ್ ಕುಮಾರ್ ಎಚ್ಚರಿಕೆ
ಎಸ್. ಸುರೇಶ್ ಕುಮಾರ್
Follow us on

ಬೆಂಗಳೂರು: ಬೆಂಗಳೂರು ನಗರದ ಸಂಸ್ಕೃತಿಯ ಪ್ರತೀಕವಾಗಿರುವ, ವ್ಯಾಪಾರಿ ಮನೋಧರ್ಮವನ್ನು ಮೀರಿ ಅಪ್ಪಟ ಮನೋರಂಜನೆಗೆ ಹೆಸರಾದ ರೇನ್ ಬೋ 101.3 ಎಫ್ ಎಂ(Rainbow 103.1 FM) ಚಾನೆಲ್ ಅನ್ನು ಹಂತಹಂತವಾಗಿ ಮುಚ್ಚುವ ಹುನ್ನಾರ ದಕ್ಷಿಣ ವಲಯದ ಆಕಾಶವಾಣಿ(Akashvani) ಮುಖ್ಯಸ್ಥರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವ ರಮಾಕಾಂತ್ ಅವರದ್ದಾಗಿದೆ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್(S Suresh Kumar) ಆರೋಪಿಸಿದ್ದಾರೆ. ಈ ಅಧಿಕಾರಿಯ ಭಾಷಾಂಧತೆ ಹಾಗೂ ಸುದ್ದಿಮೂಲದ ಜವಾಬ್ದಾರಿಗಳನ್ನಷ್ಟೇ ಸೇವೆಯುದ್ದಕ್ಕೂ ನಿರ್ವಹಿಸಿ, ಮನೋರಂಜನೆಯ ಕುರಿತಂತೆ ಅವರು ಹೊಂದಿರುವ ಉಪೇಕ್ಷೆ ಅವರ ಇಂತಹ ದುಷ್ಟ ಆಲೋಚನೆಗೆ ಮೂಲವಾಗಿದೆ ಎಂದು ಅವರು ಕಿಡಿ ಕಾರಿದ್ದಾರೆ. ರೇನ್ ಬೋ 101.3 ಎಫ್ ಎಂ ವಿರೂಪಗೊಳಿಸದಂತೆ ಆಕಾಶವಾಣಿ ಅಪರ ಮಹಾ ನಿರ್ದೇಶಕರಿಗೆ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದು ಅನ್ಯ ಭಾಷೆಗಳ ಸುದ್ದಿ ಕಾರ್ಯಕ್ರಮ ಬಿತ್ತರ ಮಾಡಲು ನಡೆಸುತ್ತಿರುವ ಹುನ್ನಾರ ಸರಿಯಲ್ಲ. ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಗೋ ಬ್ಯಾಕ್ ರಮಾಕಾಂತ್ ಚಳುವಳಿ ಮತ್ತಷ್ಟು ಪ್ರಬಲಗೊಳಿಸಲಾಗುತ್ತೆ ಎಂದು ಆಕಾಶವಾಣಿ ಅಪರ ಮಹಾ ನಿರ್ದೇಶಕ ರಮಾಕಾಂತ್‌ಗೆ ಎಚ್ಚರಿಕೆ ನೀಡಿದ್ದಾರೆ.

ಆಕಾಶವಾಣಿ ದಕ್ಷಿಣ ವಲಯದ ಮುಖ್ಯಸ್ಥರಾದ ರಮಾಕಾಂತ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿರುವ ಸುರೇಶ್ ಕುಮಾರ್ ಅವರು ಅವುಗಳಿಗೆ ಕೂಡಲೇ ಉತ್ತರವನ್ನು ನಿರೀಕ್ಷಿಸುತ್ತೇನೆಂದಿದ್ದಾರೆ.
1. ನಿಮ್ಮ ಸೇವೆಯುದ್ದಕ್ಕೂ ವಾರ್ತಾ ವಿಭಾಗಗಳಲ್ಲಿ ಕೆಲಸ‌ವಷ್ಟೇ ಮಾಡಿ ಅನುಭವ ಇರುವ ತಮಗೆ ಮನೋರಂಜನೆಯ, ಸಂಸ್ಕೃತಿ-ಸೊಗಡಿನ ಮೌಲ್ಯ ತಿಳಿದಿದೆಯೇ?
2. ಬೆಂಗಳೂರು ರೇನ್ ಬೋ ವಾಹಿನಿ, ಸ್ಥಳೀಯ ಪ್ರತಿಭೆಗಳಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ನಿಮ್ಮ ಪರ್ಯಾಯ ಆಲೋಚನೆ ಮಾರಕವಾಗಿದೆ‌ ಎಂದು ನಿಮಗೆ ಗೊತ್ತಿದೆಯೇ?
3. ಬೇರೆ ಬೇರೆ ಸ್ಥಳೀಯ ವಾಹಿನಿಗಳ, ಸ್ಥಳೀಯ ಆಲೋಚನೆಗಳುಳ್ಳ ಕಾರ್ಯಕ್ರಮ ರೇನ್ ಬೋ ಚಾನೆಲ್ ಮೂಲಕವೂ ಮರುಪ್ರಸಾರ ಮಾಡುವ ಆಲೋಚನೆಯಲ್ಲಿರುವ ತರ್ಕವಾದರೂ ಏನು? ಉದಾಹರಣೆಗೆ ಇನ್ನಾವುದೋ ತರಂಗಾಂತರದ ವನಿತಾ ವಿಹಾರ ಇಲ್ಲಿ ಮಧ್ಯಾಹ್ನ 12-1ಕ್ಕೆ ಏಕೆ ಪ್ರಸಾರ ಬೇಕು? ಅದರ ಅರ್ಥ ಬೆಂಗಳೂರಿನಲ್ಲಿ ಸಾಧಕ, ಮಹಿಳೆಯರ ಕೊರತೆಯೆಂದೇ?
4. ರಾತ್ರಿ 9-11ರವರೆಗೆ ರೇನ್ ಬೋ ವಾಹಿನಿಯಲ್ಲಿ ಬಿತ್ತರಗೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದ ಕನ್ನಡ ಹಳೆಯ ಚಿತ್ರಗೀತೆಗಳನ್ನು‌ ತೆಗೆದು ಪ್ರೈಮರಿ ಚಾನೆಲ್ ನ ರಸಹೀನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಉದ್ದೇಶವಾದರೂ ಏನು? ಹೇಗಾದರೂ ಜನ ಈ ವಾಹಿನಿಯಿಂದ ವಿಮುಖರಾಗಲಿ ಎಂಬ ದುರುದ್ದೇಶವೇ?
5. ಪ್ರೈಮರಿ ಚಾನೆಲ್ ನಲ್ಲಿನ ಹಿಂದಿ -ಅನ್ಯಭಾಷಾ ಸುದ್ದಿ ಕಾರ್ಯಕ್ರಮಗಳನ್ನು ಸಹ ರೇನ್ ಬೋ ಮೂಲಕ ಪ್ರಸಾರ ಮಾಡುವ ಹುನ್ನಾರ ನೀವು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವ ರೀತಿಯೇ?
6. ಕನ್ನಡ ಸುದ್ದಿಗಳನ್ನು ಹೊರತುಪಡಿಸಿ, ಹಿಂದಿ ಮತ್ತಿತರೆ ಭಾಷೆಗಳ ಸುದ್ದಿಗಳ ಬಿತ್ತರದ ಅವಶ್ಯಕತೆ ಏನಿದೆ?
7. ಹಿಂದಿ, ತಮಿಳು, ತೆಲುಗು ಭಾಷೆಗಳ ಸುದ್ದಿಗಳನ್ನು‌ ಕೂಡಾ‌ ಪ್ರಸಾರ‌ ಮಾಡಿ ಬಹುತ್ವವನ್ನು ಮೆರೆಯಲು ಉದ್ದೇಶಿಸಿರುವ ತಮ್ಮ ದುರಾಲೋಚನೆಯನ್ನು ನಾವೆಲ್ಲರೂ ಗೌರವಿಸಬೇಕೇ?
8. ಮೀಡಿಯಂ ವೇವ್ ತರಂಗಾಂತರದ ಕಾರ್ಯಕ್ರಮಗಳನ್ನು ರೇನ್ ಬೋ ಮೂಲಕವೂ ಏಕಕಾಲಕ್ಕೆ ಪ್ರಸಾರ ಮಾಡುವುದರ ಹಿಂದೆ ಯಾವ ಘನ ಉದ್ದೇಶವಿದೆ?
9. ರೇನ್ ಬೋ ಮನೋರಂಜನಾ ಕಾರ್ಯಕ್ರಮಗಳ ಬಹುಮುಖ್ಯ ಗುಣವಾಗಿದ್ದ ಕೇಳುಗರ ಪ್ರತಿಕ್ರಿಯಾತ್ಮಕ ನಿರೂಪಣೆಗಳನ್ನು ಸ್ಥಗಿತಗೊಳಿಸಿ ಮುದ್ರಿತ ಕಾರ್ಯಕ್ರಮಗಳ ಪ್ರಸಾರಕ್ಕೆ ಒತ್ತುಕೊಡುವುದು ಯಾವ ಪುರುಷಾರ್ಥಕ್ಕೆ?

ವಾಹಿನಿಯ ಹೆಚ್ಚುವರಿ ಅಪರ ಮಹಾ ನಿರ್ದೇಶಕರಾಗಿ ತಮಗೆ ಲಭ್ಯವಿರುವ ವಿವೇಚನಾಧಿಕಾರವನ್ನು ಬಳಸಿಕೊಂಡು ವ್ಯಾಪಾರಿ ಮನೋಧರ್ಮದ ವಾಹಿನಿಗಳ‌ ನಡುವೆ ಉತ್ತಮ ಮನೋರಂಜನೆಯ ಧ್ಯೇಯದೊಂದಿಗೆ ಅತ್ಯುತ್ತಮ‌ ಕಾರ್ಯಕ್ರಮಗಳನ್ನು ನೀಡುತ್ತಿರುವ ಹಾಗೂ ಬೆಂಗಳೂರು ನಗರ ಸಂಸ್ಕೃತಿಯ ಪ್ರತೀಕವಾಗಿ ರೂಪುಗೊಳ್ಳುತ್ತಿರುವ ಎಫ್.ಎಂ.ರೇನ್ ಬೋ 101.3 ಚಾನೆಲ್ ಅನ್ನು ವಿರೂಪಗೊಳಿಸುವ ದುಷ್ಕೃತ್ಯಕ್ಕೆ ಮುಂದಾಗಬಾರದು. ಇದರಲ್ಲಿ ಯಾವುದೆ ಪಾತ್ರವಿರದ ಕೇಂದ್ರ ಸರ್ಕಾರದ ಹೆಸರಿಗೆ ಅನವಶ್ಯಕವಾಗಿ ಮಸಿ ಬಳಿಯುವ ಪ್ರಯತ್ನ ಮಾಡಬಾರದೆಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ. ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ, ರಮಾಕಾಂತ್ ಗೋ ಬ್ಯಾಕ್ ಚಳವಳಿ ಪ್ರಬಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಬಟ್ಟೆ ಕೊಡಿಸುವ ನೆಪದಲ್ಲಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ಅರೆಸ್ಟ್

Published On - 1:02 pm, Mon, 31 January 22