ಬೆಂಗಳೂರು: ಪೊಲೀಸರ ವಿರುದ್ಧ ರಮೇಶ್ ಕುಮಾರ್ ಆಕ್ರೋಶ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಆ ಘಟನೆಯ ಬಗ್ಗೆ ಮಾಜಿ ಸ್ಪೀಕರ್ ಹಾಗೂ ಶಾಸಕ ಕೆ.ಆರ್. ರಮೇಶ್ ಕುಮಾರ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಊರಿನಿಂದ ಬರುತ್ತಿದ್ದೆ. ಪೊಲೀಸರು ವಾಹನಗಳನ್ನು ಸಾಲಿನಲ್ಲಿ ನಿಲ್ಲಿಸುತ್ತಿದ್ರು. ನನ್ನ ವಾಹನ ನೋಡಿ ಹೋಗಲು ಹೇಳಿದ್ರು. ಅದಕ್ಕೆ ಯಾಕೆ ಹೀಗೆ ಮಾಡ್ತೀರಪ್ಪ ಎಂದು ಪ್ರಶ್ನಿಸಿದ್ದೆ. ನಿಮ್ಮ ಮಕ್ಕಳಿಗೆ ಒಳ್ಳೆಯದಾಗ ಬೇಡ್ವಾ ಎಂದು ಕೇಳಿದ್ದೆ. ಪೊಲೀಸ್ ಸಿಬ್ಬಂದಿಯನ್ನು ಬೈಯ್ಯಲು ನಾನು ಶತ್ರುವಾ? ನನಗೆ ಬೇರೆ ಸಾಮಾನ್ಯರಿಗೆ ಬೇರೆ ನಿಯಮ ಏಕೆಂದು ಕೇಳಿದ್ದೆ. 24 ಕಡೆ ವಾಹನ ನಿಲ್ಲಿಸಿ, ಟೋಲ್ ರೀತಿ ಮಾಡಿದ್ರೆ ಹೇಗೆ. ಅದಕ್ಕೂ ಒಂದು ನಿಯಮ ಇಲ್ವಾ? ಪೊಲೀಸರ ಮಕ್ಕಳ ಬಗ್ಗೆ ನಾನೇ ಅಸೆಂಬ್ಲಿಯಲ್ಲಿ ಮಾತಾಡಿದ್ದೇನೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.
ನನಗೊಂದು ನ್ಯಾಯ ಅವರಿಗೊಂದು ನ್ಯಾಯವೇಕೆ? ಒಂದು ವೇಳೆ ಕಾನೂನು ಇದ್ರೆ ನನಗೂ ದಂಡ ಹಾಕಲಿ. ನನ್ನ ಮಾತ್ರ ಬಿಟ್ರು ಎಂದು ಬಂದು ಬಿಟ್ರೆ ನಾನೊಬ್ಬ ಜನಪ್ರತನಿಧಿಯಾಗಿ ತಪ್ಪಾಗುತ್ತೆ. ನನ್ನ ಮತದಾರ ಅಲ್ಲಿ ಇದ್ರೆ ಅವನು ನನ್ನ ಬಗ್ಗೆ ಏನು ತಿಳಿದುಕೊಳ್ಳಬೇಕು. ಹೀಗಾಗಿ ಅವರಿಗೆ ಅರ್ಥ ಮಾಡಿಸಿದೆ ಅಷ್ಟೇ. ಇದನ್ನು ಹೆಚ್ಚು ಬೆಳೆಸುವುದು ಬೇಡ. ಗೃಹ ಸಚಿವರಿಗೆ ಎಲ್ಲವೂ ಗೊತ್ತಾಗಿರುತ್ತೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.
ಮಾಜಿ ಸ್ಪೀಕರ್ ಹಾಗೂ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಅವರು ಪೊಲೀಸರೊಂದಿಗೆ ನಡೆದುಕೊಂಡದ್ದನ್ನು ಗಮನಿಸಿ ಪೊಲೀಸ್ ಸಿಬ್ಬಂದಿ ಪತ್ರದ ಮೂಲಕ ಅಸಮಾಧಾನ ಹೊರಹಾಕಿದ್ದರು. ಇದೀಗ ಆ ಬಗ್ಗೆ ರಮೇಶ್ ಕುಮಾರ್ ಸ್ಪಷ್ಟೀಕರಣ ನೀಡಿದ್ದಾರೆ.
ಚಾಮರಾಜನಗರದ ದುರಂತ ನಡೆದ ದಿನ ನಾನು ಹುಚ್ಚನ ತರಹ ಅಳ್ತಾ ಇದ್ದೆ. ಎಷ್ಟು ಸಮಾಧಾನ ಮಾಡ್ಕೊಂಡ್ರೂ ನೋವು ಕಡಿಮೆ ಆಗಲಿಲ್ಲ. 34 ಜನರ ಸಾವು ಅನ್ಯಾಯ ಅಲ್ವಾ. ಯಾರು ಅದಕ್ಕೆ ಹೊಣೆ? ತನಿಖೆಗೆ ಆಗ್ರಹ ಆದ ನಂತರ ಪರಿಹಾರ ಕೊಟ್ಟಿದ್ದಾರೆ. ಆದ್ರೆ ಏನ್ ಪ್ರಯೋಜನ ಸಾವು ನೋವಿಗೆ ಯಾರು ಜವಾಬ್ದಾರಿ. ನಾನು ಏನ್ ಮಾಡೋದು ಅಂತ ಕೊನೆಗೆ, ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರದು, ಈ ವಯಸ್ಸಿನಲ್ಲಿ ನಾನು, ನೀವು ಬದುಕಬೇಕು ಅಂತ ಆಸೆ ಇಟ್ಟುಕೊಂಡಿದ್ದೇವೆ. ಆದರೆ, ಆ ಜನರಿಗೆ ಬದುಕುವ ಆಸೆ ಇರಲಿಲ್ವಾ ಎಂದು ಕೇಳಿದ್ದೆ ಎಂದು ಹೇಳಿದ್ದಾರೆ. ರಾಮಕೃಷ್ಣ ಹೆಗಡೆ 95 ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಈ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪತ್ರದ ಮೂಲಕ ಅಸಮಾಧಾನ ಹೊರ ಹಾಕಿದ ಪೊಲೀಸ್ ಸಿಬ್ಬಂದಿ
ಊರಿಗೆ ಬರಬೇಡಿ ಅಂತಾರೆ ಅದಕ್ಕೆ ಇಲ್ಲೇ ಇದ್ದೀವಿ ಮಾಜಿ ಸ್ಪೀಕರ್ ರಮೇಶ್ ಕುಮಾರ್!
Published On - 2:41 pm, Sun, 29 August 21