ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪತ್ರದ ಮೂಲಕ ಅಸಮಾಧಾನ ಹೊರ ಹಾಕಿದ ಪೊಲೀಸ್ ಸಿಬ್ಬಂದಿ
ಈ ವಿಡಿಯೋ ನೋಡಿ ಒಬ್ಬ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಾದ ನಮಗೆ ಮನಸ್ಸಿಗೆ ತುಂಬ ಘಾಸಿ ಉಂಟುಮಾಡಿದೆ. ಪೋಲಿಸರಾದ ನಮಗೂ ಸ್ವಾಭಿಮಾನವಿದೆ ಒಂದು ಗೌರವಯುತವಾದ ಜೀವನವಿದೆ. ನಮಗೂ ನಮ್ಮ ಕುಟುಂಬದ ಒಳ್ಳೆಯ ಹಿನ್ನೆಲೆ ಇದೆ. ನಾವೂ ಕೂಡ ಅತ್ಯಂತ ಸಂಸ್ಕಾರಯುತ ಕುಟುಂಬಗಳಿಂದಲೇ ಬಂದಿದ್ದೇವೆ.
ಬೆಂಗಳೂರು: ರಸ್ತೆಯಲ್ಲಿ ನಿಂತು ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದ ಚಿಂತಾಮಣಿ ನಗರ ಠಾಣಾ ಪೊಲೀಸರಿಗೆ ಮಾಜಿ ಸ್ಪೀಕರ್ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಚಳಿ ಬಿಡಿಸಿದ್ದರು. ಈ ಘಟನೆ ಸಂಬಂಧ ರಮೇಶ್ ಕುಮಾರ್ರ ಹೇಳಿಕೆಗೆ ಪೊಲೀಸ್ ಸಿಬ್ಬಂದಿ ಪತ್ರದ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಪತ್ರದಲ್ಲೇನಿದೆ? ಶ್ರೀ ಮಾನ್ಯ ರಮೇಶ್ ಕುಮಾರ್ ಮಾಜಿ ಸ್ಪೀಕರ್ ಹಾಗೂ ಹಾಲಿ ಶಾಸಕರಿಗೊಂದು ನೊಂದ ಪೊಲೀಸ್ ಇಲಾಖೆಯಿಂದ ಪತ್ರ. ನಮಸ್ಕಾರ ಸರ್ ತಾವು ರಾಜಕಾರಣದಲ್ಲಿ ಅತ್ಯಂತ ಹಿರಿಯರು, ಮುತ್ಸದ್ದಿಗಳು, ಬಹಳ ಚಿಂತನಾಶೀಲರು, ಅತ್ಯಂತ ವಾಗ್ಮಿಗಳು ಹಾಗೂ ತಾವು ರಾಜಕೀಯ ಜೀವನದಲ್ಲಿ ಹಲವು ಉನ್ನತ ಸ್ಥಾನವನ್ನು ಅಲಂಕರಿಸಿ ಅದರ ಅನುಭವನ್ನು ಪಡೆದುಕೊಂಡಿದ್ದೀರಿ ಅದರಲ್ಲಿ ಸಭಾಪತಿ ಸ್ಥಾನವು ಒಂದು. ತಾವು ಸಭಾಪತಿ ಸ್ಥಾನದಿಂದ ಕೆಳಗಿಯುವಾಗ ಮಾಡಿದ ಅತ್ಯಂತ ಭಾವನಾತ್ಮಕ ಮತ್ತು ಪ್ರಬುದ್ಧ ಭಾಷಣವನ್ನು ನಾವೆಲ್ಲರೂ ನೋಡಿ ನಿಮ್ಮ ಬಗ್ಗೆ ಹೆಮ್ಮೆ ಪಟ್ಟಿದ್ದೇವೆಯೂ ಕೂಡ ಆದರೆ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲೂ ಒಂದು ವಿಡಿಯೋ ಹರಿದಾಡುತ್ತಿದೆ.
ಈ ವಿಡಿಯೋ ನೋಡಿ ಒಬ್ಬ ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಾದ ನಮಗೆ ಮನಸ್ಸಿಗೆ ತುಂಬ ಘಾಸಿ ಉಂಟುಮಾಡಿದೆ. ಪೋಲಿಸರಾದ ನಮಗೂ ಸ್ವಾಭಿಮಾನವಿದೆ ಒಂದು ಗೌರವಯುತವಾದ ಜೀವನವಿದೆ. ನಮಗೂ ನಮ್ಮ ಕುಟುಂಬದ ಒಳ್ಳೆಯ ಹಿನ್ನೆಲೆ ಇದೆ. ನಾವೂ ಕೂಡ ಅತ್ಯಂತ ಸಂಸ್ಕಾರಯುತ ಕುಟುಂಬಗಳಿಂದಲೇ ಬಂದಿದ್ದೇವೆ. ವಿಡಿಯೋದಲ್ಲಿ ನೀವು ರಸ್ತೆಯಲ್ಲಿ ರಸ್ತೆ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರಿಗೆ ದಂಡ ಹಾಕುತ್ತಿರುವ ಪೋಲಿಸರನ್ನು ಕುರಿತು ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿ ಅವರ ವಯಕ್ತಿಕ ಜೀವನದ ಬಗ್ಗೆ ಅಂದರೆ ನಿಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತ ಎಂದು ಪ್ರಶ್ನಿಸಿದ್ದೀರ. ನಿಮ್ಮ ಕಾಳಜಿ ನಮಗೆ ಅರ್ಥವಾಗುತ್ತದೆ. ಆದರೆ ಆ ಸಂದರ್ಭದಲ್ಲಿ ತಾವು ಹೇಳಿದ ರೀತಿ ನಮಗೆ ಸರಿ ಕಾಣಲಿಲ್ಲ ಸರ್.
ತಾವು ಕೂಡಲೆ ಸ್ಥಳದಲ್ಲಿ ಕೆಳಹಂತದ ಸಿಬ್ಬಂದಿಯ ಮೇಲೆ ಕೂಗಾಡುವ ಬದಲು ಅಲ್ಲಿಂದಲೇ ಸಂಬಂಧಪಟ್ಟ ಗೃಹ ಮಂತ್ರಿಗಳಿಗೆ ಕರೆ ಮಾಡಿ ವಾಹನ ತಪಾಸಣೆ ಮಾಡದಂತೆ ತಮ್ಮ ಇಲಾಖೆಯ ಸಿಬ್ಬಂದಿಯವರಿಗೆ ತಿಳಿಸಿ ಎಂದು ಸೂಚಿಸಬಹುದಿತ್ತು. ಇದಕ್ಕೂ ಮಿಗಿಲಾಗಿ ತಮಗೆ ಇನ್ನೂ ಒಂದು ಅವಕಾಶ ಇದೆ ಸರ್. ತಾವು ರಾಜಕೀಯ ಧುರೀಣರು. ಈ ಸಂಬಂಧ ಈ ಕೂಡಲೇ ವಿಧಾನಸಭೆಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಒಂದು ದೃಡ ನಿರ್ಣಯ ಮಾಡಿ ಇನ್ನೂ ಮುಂದೆ ಪೋಲಿಸರು ಯಾರು ರಸ್ತೆಗಳಲ್ಲಿ ಯಾವುದೇ ವಾಹನಗಳನ್ನು ತಪಾಸಣೆ ಮಾಡಬಾರದು ಎನ್ನುವ ಕಾನೂನು ಜಾರಿಗೆ ತಗೆದುಕೊಂಡು ಬನ್ನಿ ಸರ್. ಇದರಿಂದ ಪೋಲಿಸರ ಮೇಲೆ ಆಗುವ ಕೇಲವು ಒತ್ತಡ ಕಡಿಮೆಯಾಗುತ್ತದೆ ಅದರ ಜೊತೆಗೆ ಬಿಸಿಲು, ಮಳೆ ಧೂಳಿನಲ್ಲಿ ನಿಂತು ಜನರ ಕೈಲಿ ಬೈಸಿಕೊಂಡು ಜನಸಾಮಾನ್ಯರ ದೃಷ್ಟಿಯಲ್ಲಿ ಪೋಲಿಸ್ ರು ಎಲ್ಲರೂ ಯಾರಿಗೋ ಹುಟ್ಟಿದ ಮಕ್ಕಳು ಅನ್ನುವ ಶಬ್ದ ಕಡಿಮೆಯಾಗುತ್ತದೆ ಅದರ ಜೊತೆಗೆ ಸಾರ್ವಜನಿಕರ ದೃಷ್ಟಿಯಲ್ಲಿ ಖಳನಾಯಕರಾಗುವುದು ತಪ್ಪುತ್ತದೆ. ಪೋಲಿಸರ ಆರೋಗ್ಯದ ಮೇಲಾಗುವ ತೊಂದರೆ ಕೂಡ ತಪ್ಪುತ್ತದೆ.
ನಿನ್ನೆ ವಿಡಿಯೋ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದನ್ನು ನೋಡಿ ಅದರ ಬಗ್ಗೆ ಸಾರ್ವಜನಿಕರು ಮಾಡಿರುವ ಅಸಭ್ಯವಾದ, ಕೆಟ್ಟದಾದ ಹಾಗೂ ಋಣಾತ್ಮಕ ಕಮೆಂಟ್ಗಳು ಪೋಲಿಸರ ಮನೋಸ್ಥೈರ್ಯವನ್ನು, ಆತ್ಮವಿಶ್ವಾಸವನ್ನು ಕುಗ್ಗಿಸಿ ಭ್ರಮನಿರಸನ ಮಾಡುತ್ತಿದೆ. ಹಾಗೂ ತಾವು ಮಾಡುವ ಕೆಲಸದ ಮೇಲೆ ಆಸಕ್ತಿ ಕಡಿಮೆಯಾಗುತ್ತಿದೆ. ಈ ವಿಡಿಯೋದಿಂದ ಸಮಾಜದ ಮೇಲೆ ಪರಿಣಾಮ ಬೀರಿ ಪೋಲಿಸರ ಮೇಲೆ ಕೆಟ್ಟ ಅಭಿಪ್ರಾಯ ಮೂಡಲು ಪ್ರೇರಣೆಯಾಗುತ್ತದೆ. ಸರ್ ಮತ್ತೊಂದು ವಿಚಾರ. ನಮ್ಮ ಮಕ್ಕಳನ್ನು ಕೆಟ್ಟ ಹಣದಿಂದ ಸಾಕುವ ಅನಿವಾರ್ಯ ಮತ್ತು ಆಸೆ ಎರಡೂ ಇಲ್ಲ ನಮಗೆ ಅದೆಷ್ಟೋ ಪೋಲಿಸರ ಮಕ್ಕಳು ಕಷ್ಟಪಟ್ಟು ಓದಿ ಇಂದು ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಸರ್ ನಮಗೆ ರಾಜಕಾರಣಿಗಳಂತೆ ಯಾವುದೂ ವಂಶಪಾರಂಪರ್ಯವಾಗಿ ಬರುವುದಿಲ್ಲ. ಅತ್ಯಂತ ಪರಿಶ್ರಮ ಮತ್ತು ಬಹಳ ಕಷ್ಟದಿಂದ ಬರುತ್ತದೆ ಸರ್. ಬಹುಶಃ ಸಮಾದ ಬಗ್ಗೆ ಪೋಲಿಸರಿಗೆ ಇರುವ ಕಾಳಜಿ ಸರ್ಕಾರದ ಬೇರೆ ಯಾವ ಇಲಾಖೆಗೂ ಇಲ್ಲ ಎನ್ನುವುದನ್ನು ನಾವು ಎದೆ ತಟ್ಟಿ ಹೇಳುತ್ತೇವೆ.
ನಿನ್ನೆ ಹರಿದಾಡಿದ ವಿಡಿಯೋ ಸಾವಿರಾರು ಪೋಲಿಸರ ಗೌರವಕ್ಕೆ, ಸ್ವಾಭಿಮಾನದ ಬದುಕಿಗೆ ಧಕ್ಕೆ ಉಂಟುಮಾಡುತ್ತಿದೆ. ಪ್ರತಿ ಪೋಲಿಸರಿಗೆ ಸಾರ್ವಜನಿಕರಿಗೆ ದಂಡ ಹಾಕಿ ತೊಂದರೆ ಕೊಡುವ ಉದ್ದೇಶ ಇರುವುದಿಲ್ಲ ಕೆಲವೊಮ್ಮೆ ಅದು ಕರ್ತವ್ಯದ ಮುಖ್ಯ ಭಾಗವಾಗಿರುತ್ತದೆ ಈಗಲೂ ಕಾಲ ಮಿಂಚಿಲ್ಲ ಸರ್, ದಯವಿಟ್ಟು ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಈ ಸಂಭಂದ ತಾವು ಚರ್ಚೆ ಮಾಡಿ ಪೋಲಿಸರಿಗಿರುವ ದಂಡ ಹಾಕುವ ಅಧಿಕಾರವನ್ನು ಹಿಂತೆಗೆದುಕೊಳ್ಳುವ ನಿರ್ಣಯ ಮಾಡಿಸಿ ಸರ್. ಆಗ ನೀವು ಸಾರ್ವಜನಿಕರ ಬಗ್ಗೆ ಇರುವ ಕಾಳಜಿ ಸಾರ್ವಜನಿಕರಿಗೆ ಗೊತ್ತಾಗುತ್ತೆ.
ಇದನ್ನೂ ಓದಿ: Viral Video: ಹಸುವನ್ನು ಕಾರಿನಲ್ಲಿ ಕುಳಿಸಿಕೊಂಡು ರೈಡ್ ಹೊರಟ ವ್ಯಕ್ತಿ; ವಿಡಿಯೋ ವೈರಲ್