ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ: ತಿಂಗಳಲ್ಲಿ ಎರಡನೇ ಪ್ರಕರಣ

ಒಂದು ತಿಂಗಳ ಅವಧಿಯಲ್ಲಿ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಎರಡನೇ ಪ್ರಕರಣ ಇದಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ನಾಪತ್ತೆ ಎಫ್‌ಐಆರ್ ದಾಖಲಾಗಿವೆ. ಇಂಡಿಗೋದ ಕಾರ್ಗೋ ವಿಭಾಗದಲ್ಲಿ ಉದ್ಯೋಗಿಯಾಗಿದ್ದ 22 ವರ್ಷದ ಮಹಿಳೆ ನಾಪತ್ತೆಯಾಗಿರುವುದಾಗಿ ಅವರ ತಾಯಿ ನೀಡಿದ ದೂರಿನ ಆಧಾರದಲ್ಲಿ 2023 ರ ಡಿಸೆಂಬರ್ 3ರಂದು ಎಫ್​ಐಆರ್ ದಾಖಲಾಗಿತ್ತು.

ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಬ್ ಸಂಸ್ಥೆಯ ಮಹಿಳಾ ಉದ್ಯೋಗಿ ನಾಪತ್ತೆ: ತಿಂಗಳಲ್ಲಿ ಎರಡನೇ ಪ್ರಕರಣ
ಸಾಂದರ್ಭಿಕ ಚಿತ್ರ
Edited By:

Updated on: Jan 04, 2024 | 6:59 AM

ಬೆಂಗಳೂರು, ಜನವರಿ 4: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಟರ್ಮಿನಲ್ 1 ರಲ್ಲಿ ಕ್ಯಾಬ್ ಕಂಪನಿಯೊಂದರಲ್ಲಿ ಬುಕಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ 27 ವರ್ಷದ ಮಹಿಳೆ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಆಕೆಯ ಸಹೋದರ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.

ಪೊಲೀಸರ ಪ್ರಕಾರ, ತುಮಕೂರು ಮೂಲದ ನೇತ್ರಾ ಅವರು WIT ಕ್ಯಾಬ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ವಿಮಾನ ನಿಲ್ದಾಣದ ಸಮೀಪದ ಹುಣಸಮಾರನಹಳ್ಳಿಯ ‘ಯಮುನಾ’ ಪಿಜಿಯಲ್ಲಿ ವಾಸಿಸುತ್ತಿದ್ದರು. ಆಕೆ ಪ್ರತಿದಿನ ತನ್ನ ಕುಟುಂಬದವರಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದರು. ಡಿಸೆಂಬರ್ 29 ರಂದು ಮಧ್ಯಾಹ್ನ ಕರೆ ಮಾಡಿ, ಆ ದಿನ ರಾತ್ರಿ ಡ್ಯೂಟಿಯಲ್ಲಿರುವುದಾಗಿ ತಿಳಿಸಿದ್ದರು. ಡಿಸೆಂಬರ್ 30 ರಿಂದ, ಕುಟುಂಬದವರು ಆಕೆಯಿಂದ ಯಾವುದೇ ಕರೆಗಳನ್ನು ಸ್ವೀಕರಿಸಲಿಲ್ಲ. ಮನೆಯವರು ಕರೆ ಮಾಡಿದಾಗ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಚಾರ್ಜ್ ಮುಗಿದಿರಬಹುದು ಎಂದು ಅವರು ಭಾವಿಸಿದ್ದರು. ಅವರು ಡಿಸೆಂಬರ್ 31 ರಂದು ಕರೆ ಮಾಡಿದಾಗಲೂ ಸ್ವಿಚ್ ಆಫ್ ಆಗಿತ್ತು. ಇದು ಅವರನ್ನು ಚಿಂತೆಗೀಡು ಮಾಡಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೋನ್ ಕರೆಗೆ ಸಿಗದ ಕಾರಣ ಏನಾಯಿತು ಎಂದು ಪರಿಶೀಲಿಸಲು ನೇತ್ರಾ ಸಹೋದರ ಮಹೇಶ್ ಕುಮಾರ್ ಜನವರಿ 2 ರಂದು ಕ್ಯಾಬ್ ಸಂಸ್ಥೆಯ ಕಚೇರಿಗೆ ಭೇಟಿ ನೀಡಿ ವಿಚಾರಿಸಿದ್ದರು. ಈ ವೇಳೆ, ನೇತ್ರಾ ರಾತ್ರಿ ಪಾಳಿ ಮುಗಿಸಿ ಡಿಸೆಂಬರ್ 29 ರಂದು ಬೆಳಿಗ್ಗೆ 6 ಗಂಟೆಗೆ ಹೊರಟಿದ್ದರು ಎಂಬುದು ಅವರಿಗೆ ತಿಳಿಯಿತು. ಅವನು ನೇತ್ರಾ ಅವರ ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ವಿಚಾರಿಸಿದಾಗ ಯಾರಿಗೂ ಆಕೆ ಎಲ್ಲಿದ್ದಾರೆ ಎಂಬ ಮಾಹಿತಿ ಇರಲಿಲ್ಲ.

ಪೊಲೀಸರು ಇದೀಗ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಮಹಿಳೆ ನಾಪತ್ತೆಯ ಎರಡನೇ ಪ್ರಕರಣ

ಒಂದು ತಿಂಗಳ ಅವಧಿಯಲ್ಲಿ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಎರಡನೇ ಪ್ರಕರಣ ಇದಾಗಿದ್ದು, ಕಳೆದ ನಾಲ್ಕು ತಿಂಗಳಲ್ಲಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ನಾಪತ್ತೆ ಎಫ್‌ಐಆರ್ ದಾಖಲಾಗಿವೆ. ಇಂಡಿಗೋದ ಕಾರ್ಗೋ ವಿಭಾಗದಲ್ಲಿ ಉದ್ಯೋಗಿಯಾಗಿದ್ದ 22 ವರ್ಷದ ಮಹಿಳೆ ನಾಪತ್ತೆಯಾಗಿರುವುದಾಗಿ ಅವರ ತಾಯಿ ನೀಡಿದ ದೂರಿನ ಆಧಾರದಲ್ಲಿ 2023 ರ ಡಿಸೆಂಬರ್ 3ರಂದು ಎಫ್​ಐಆರ್ ದಾಖಲಾಗಿತ್ತು.

ಇದನ್ನೂ ಓದಿ: ಕಾರ್ಯಕ್ಷಮತೆ, ಸಮಯೋಚಿತ ಸೇವೆ: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಜಾಗತಿಕವಾಗಿ 3ನೇ ರ‍್ಯಾಂಕ್

ಡಿಸೆಂಬರ್ 4 ರಂದು, ಕೆಐಎಯಿಂದ ಬಿಹಾರಕ್ಕೆ ತೆರಳಿದ ವ್ಯಕ್ತಿ ಗಮ್ಯಸ್ಥಾನವನ್ನು ತಲುಪಲಿಲ್ಲ ಮತ್ತು ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ