ಬೆಂಗಳೂರು: ಇಲ್ಲಿನ ದಕ್ಷಿಣ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಕೊವಿಡ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಣೆ ಹಿನ್ನೆಲೆ ಬೆಂಗಳೂರಿನ ಬನಶಂಕರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಮಾಜಿ ಕಾರ್ಪೋರೇಟರ್ ಕೂಡ ಆಗಿದ್ದ ಎನ್.ಆರ್ ರಮೇಶ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದರು. ಅವರ ವಿರುದ್ದ ಇದೀಗ ಎಫ್.ಐ.ಆರ್ ದಾಖಲು ಮಾಡಲಾಗಿದೆ.
ಬನಶಂಕರಿಯ ಮನೆ ಬಳಿ ರಮೇಶ್ ಸ್ಟೇಜ್ ಪ್ರೋಗ್ರಾಮ್ ಮಾಡಿದ್ದರು. ಮನೆ ಬಳಿ ಪೆಂಡಾಲ್ ಹಾಕಿ, ಜನ ಸೇರಿಸಿ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದರು. ಬರ್ತ್ ಡೇ ಆಚರಣೆ ವೇಳೆ ಸಾಕಷ್ಟು ಜನ ಸೇರಿದ್ದರು. ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಕೊವಿಡ್ ನಿಯಮ ಉಲ್ಲಂಘಿಸಿ ಬರ್ತ್ ಡೇ ಆಚರಣೆ ಮಾಡಿದ್ದರು. ಈ ಹಿನ್ನೆಲೆ ಎನ್.ಆರ್ ರಮೇಶ್ ಮತ್ತು ಇತರರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ.
ರಾಜಕೀಯ ನಾಯಕರಿಂದಲೇ ಕೊವಿಡ್ ನಿಯಮಾವಳಿ ಉಲ್ಲಂಘನೆ
ವೀಕೆಂಡ್ ಕರ್ಫ್ಯೂನಲ್ಲೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೊವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದ ಘಟನೆಗಳು ರಾಜಕೀಯ ನಾಯಕರಿಂದ ಈ ಮೊದಲು ಕೂಡ ನಡೆದಿತ್ತು. ಅಂಗನವಾಡಿ ಕೇಂದ್ರ ಉದ್ಘಾಟನೆ ಮಾಡಿ ಬಿಜೆಪಿ ಶಾಸಕ ರೇಣುಕಾಚಾರ್ಯ ಕೊರೊನಾ ನಿಯಮಾವಳಿ ಉಲ್ಲಂಘಿಸಿದ್ದರು. ಕಳೆದ ಬಾರಿ ವೀಕೆಂಡ್ ಕರ್ಫ್ಯೂ ವೇಳೆ ಅವರು ಕೊರೊನಾ ನಿಯಮ ಉಲ್ಲಂಘಿಸಿದ್ದು ಜನರ ಹಾಗೂ ಮೇಕೆದಾಟು ಪಾದಯಾತ್ರೆಯಲ್ಲಿ ತೊಡಗಿದ್ದ ಕಾಂಗ್ರೆಸ್ ಪಕ್ಷದ ಆಕ್ರೋಶಕ್ಕೆ ಕಾರಣವಾಗಿತ್ತು.
ರೇಣುಕಾಚಾರ್ಯ ಕೊವಿಡ್ ನಿಯಮ ಉಲ್ಲಂಘಿಸಿ ಅಂಗನವಾಡಿ ಉದ್ಘಾಟನೆ ಮಾಡಿದ್ದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಳೇಶ್ವರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಭಾಗವಹಿಸಿದ್ದರು.
ವೀಕೆಂಡ್ ಕರ್ಫ್ಯೂ ನಡುವೆ ಬಿಜೆಪಿ ಶಾಸಕ ಭರ್ಜರಿ ಬರ್ತ್ಡೇ ಆಚರಣೆ ನಡೆಸಿದ್ದರು. ದಾವಣಗೆರೆ ಜಿಲ್ಲೆ ಜಗಳೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರ ಹುಟ್ಟುಹಬ್ಬ ಆಚರಣೆ ಮಾಡಲಾಗಿತ್ತು. ದಾವಣಗೆರೆಯ ಕೆ.ಬಿ.ಬಡಾವಣೆಯ ನಿವಾಸದ ಬಳಿ ಆಚರಣೆ ಮಾಡಲಾಗಿದ್ದು ಕೊವಿಡ್ ರೂಲ್ಸ್ ಉಲ್ಲಂಘಿಸಿ ಶಾಸಕರ ಮನೆ ಬಳಿ ಜನ ಜಮಾವಣೆ ಆಗಿತ್ತು. ಕರ್ತವ್ಯ ಮರೆತು ಪೊಲೀಸರು ಶಾಸಕರಿಗೆ ಅಭಿನಂದಿಸಲು ಬಂದಿದ್ದರು.
ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿ ಚಿಕ್ಕಮಗಳೂರು, ರಾಯಚೂರು, ಬಾದಾಮಿಯಲ್ಲಿ ಜಾತ್ರೆ: ದೇಗುಲ ಟ್ರಸ್ಟಿಗಳ ವಿರುದ್ಧ ಮೊಕದ್ದಮೆ ದಾಖಲು