ಬೆಂಗಳೂರು, ಡಿಸೆಂಬರ್ 18: ಹೊಸ ಸರ್ಕಾರ ಬಂದು ಬೆಳಗಾವಿಯಲ್ಲಿ ಪ್ರಥಮ ಅಧಿವೇಶನ ನಡೆಸುವ ಸಂದರ್ಭದಲ್ಲಿ ಉತ್ತರ ಕರ್ನಾಟಕ (uttar karnataka) ದ ಬಗ್ಗೆ ವಿಶೇಷ ಚರ್ಚೆ ಮತ್ತು ಸಮರ್ಪಕವಾಗಿ ಉತ್ತರವನ್ನು ಉತ್ತರ ಕರ್ನಾಟಕದ ಜನರು ನಿರೀಕ್ಷೆ ಮಾಡಿದ್ದರು. ಆದರೆ, ಯಾವುದೆ ಅಭಿವೃದ್ಧಿ ಪರ ನಿರ್ಣಯಗಳನ್ನು ಸರ್ಕಾರ ಘೋಷಿಸದೇ ಈಗಾಗಲೇ ಇರುವಂತಹ ಕಾರ್ಯಕ್ರಮಗಳನ್ನು ಪುನಃ ಘೋಷಿಸಿ ಜನರ ನೀರಿಕ್ಷೆಯನ್ನು ಹುಸಿಗೊಳಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಯೋಜನೆಗಳ ಜಾರಿ ಕೋರಿ ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ತುಂಗಭದ್ರ ಸಮತೋಲನ ಜಲಾಶಯಕ್ಕೆ ಕೂಡಲೇ ನೆರೆ ರಾಜ್ಯಗಳೊಂದಿಗೆ ಮಾತನಾಡಿ ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳಬೇಕು. ಕೊಪ್ಪಳ ಮತ್ತು ರಾಯಚೂರು ವಿಮಾನ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಇಟ್ಟ ಹಣ ಪ್ರಯೋಜನ ಪಡೆಯಲು ಕೂಡಲೇ ಗಮನ ಹರಿಸಬೇಕು.
ಹಾವೇರಿಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸಿದ್ದು, ಅಗತ್ಯ ಹಣ ಬಿಡುಗಡೆ ಮಾಡಬೇಕು. ಹಾವೇರಿ ಮೆಗಾ ಡೈರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ರಾಣೆ ಬೆನ್ನೂರು ಮಿನಿ ಟೆಕ್ಸ್ ಟೈಲ್ ಪಾರ್ಕ್ನ್ನು ಶೀಘ್ರವೇ ಆರಂಭಿಸಬೇಕು.
ಇದನ್ನೂ ಓದಿ: ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದಿದ್ದರೆ ಸುವರ್ಣಸೌಧ ಏಕೆ? ಹೆಚ್ ವಿಶ್ವನಾಥ್ ಕಿಡಿ
ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ಹಣ ಬಿಡುಗಡೆ ಮಾಡಬೇಕು. ಹಾನಗಲ್ ಬ್ಯಾಡಗಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ಬರುವ ಮುಂಗಾರಿನಲ್ಲಿ ಚಾಲನೆ ನೀಡಬೇಕು. ನೂತನ ಏಳು ವಿಶ್ವ ವಿದ್ಯಾಲಯಗಳನ್ನು ಅನುದಾನದ ಕೊರತೆ ನೆಪದಲ್ಲಿ ಮುಚ್ಚುವ ಪ್ರಸ್ತಾಪವನ್ನು ಕೈ ಬಿಡಬೇಕು ಎಂದಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಯ ಸಂಸ್ಕರಣ ಮತ್ತು ಶೀತಲ ಘಟಕ ಸ್ಥಾಪನೆಗೆ ನಮ್ಮ ಸರ್ಕಾರ ಇದ್ದಾಗ 100 ಕೋಟಿ ರೂ. ಮಂಜೂರು ಮಾಡಿದ್ದು, ಈ ಬಗ್ಗೆ ಯಾವುದೇ ಭರವಸೆ ನೀಡದಿರುವುದು ನಿರಾಸೆಯಾಗಿದೆ. ವಿಜಯಪುರ ವಿಮಾನ ನಿಲ್ದಾಣ ಪೂರ್ಣಗೊಳ್ಳುವ ಹಂತದಲ್ಲಿದ್ದರೂ ಕೂಡ ಈ ವರ್ಷದ ಬಜೆಟ್ನಲ್ಲಿ ಹಣ ಮೀಸಲಿಡದಿರುವುದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Belagavi Session: ಬೆಳಗಾವಿ ಅಧಿವೇಶನಕ್ಕೆ ಇಂದು ತೆರೆ: ಚರ್ಚೆ ಆಗಿದ್ದೇನು, ಬಾಕಿ ಉಳಿದಿದ್ದೇನು?
ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಈ ಬಗ್ಗೆ ನಿಮ್ಮ ಸರ್ಕಾರ ಆಲೋಚನೆ ಮಾಡದಿರುವುದು ಈ ಭಾಗದ ಪ್ರವಾಸೋದ್ಯಮದ ಅಭಿವೃದ್ಧಿಗೆ ತೋರಿಸುತ್ತಿರುವ ದಿವ್ಯ ನಿರ್ಲಕ್ಷ್ಯವಾಗಿದೆ. ಈಗಾಗಲೇ ನಮ್ಮ ಸರ್ಕಾರದ ಅವಧಿಯಲ್ಲಿ ಹುಬ್ಬಳ್ಳಿ ಪ್ರಾರಂಭವಾಗಿರುವ ಜಯದೇವ ಹೃದ್ರೋಗ ಸಂಸ್ಥೆ ಹಾಗೂ ಬೆಳಗಾವಿಯಲ್ಲಿ ಕಿದ್ವಾಯಿ ಸಂಸ್ಥೆಗಳಿಗೆ ಅನುದಾನ ಘೋಷಣೆ ಮಾಡುತ್ತಾರೆನ್ನುವ ನಿರೀಕ್ಷೆ ಹುಸಿಯಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 5000 ಕೋಟಿ ರೂ. ನೀಡುವುದಾಗಿ ಬಜೆಟ್ನಲ್ಲಿ ಘೋಷಣೆ ಮಾಡಿದ್ದೀರಿ, ಆದರೆ ಇದುವರೆಗೂ ಆ ಭಾಗದ ಯಾವುದೇ ಯೋಜನೆಗಳಿಗೆ ಅನುಮೋದನೆ ನೀಡದಿರುವುದು ಹಿಂದುಳಿದ ಭಾಗದ ಬಗ್ಗೆ ನಿಮಗಿರುವ ನಿರ್ಲಕ್ಷ್ಯದ ಧೋರಣೆ ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.