Belagavi Session: ಬೆಳಗಾವಿ ಅಧಿವೇಶನಕ್ಕೆ ಇಂದು ತೆರೆ: ಚರ್ಚೆ ಆಗಿದ್ದೇನು, ಬಾಕಿ ಉಳಿದಿದ್ದೇನು?
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ 2 ದಿನವಷ್ಟೇ ಈ ಬಾರಿ ಚರ್ಚೆ ಸೀಮಿತವಾಗಿದೆ. ಸಚಿವ ಜಮೀರ್ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಿದ್ದು, ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ನೀಡುವ ಸಿಎಂ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದ್ದು, ಕಬ್ಬು ಬೆಳಗಾರರಿಗೆ ಬೆಂಬಲ ಬೆಲೆ ಘೋಷಣೆ ಕುರಿತು ಚರ್ಚೆ ಜೋರಾಗಿತ್ತು.
ಬೆಳಗಾವಿ, ಡಿಸೆಂಬರ್ 15: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲದ (Belagavi Session) ಚಳಿಗಾಲದ ಅಧಿವೇಶನ (Winter Session) ಇಂದು ಕೊನೆಗೊಳ್ಳಲಿದೆ. ಅಧಿವೇಶನದಲ್ಲಿ ಅನೇಕ ವಿಚಾರಗಳು ಪ್ರಸ್ತಾಪವಾದರೆ, ಮತ್ತೆ ಕೆಲವು ವಿಷಯಗಳು ಕುರಿತ ಚರ್ಚೆಯೇ ಆಗಿಲ್ಲ. ಅಧಿವೇಶನ ಡಿಸೆಂಬರ್ 4 ರಿಂದ ಆರಂಭವಾಗಿದ್ದು ಈವರೆಗೆ ಉಪಯುಕ್ತ ಚರ್ಚೆಗಿಂತ ಗದ್ದಲ ಕೋಲಾಹಲದಲ್ಲೇ ಸದನ ಮುಳುಗಿಹೋಗಿದೆ. ಚರ್ಚೆಯಾಗಬೇಕಾದ ಸಾಕಷ್ಟು ವಿಚಾರಗಳು ಹಾಗೇ ಉಳಿದುಕೊಂಡಿವೆ.
ಏನೆಲ್ಲ ಚರ್ಚೆಯಾಗಿಲ್ಲ?
ಡಿಸಿಎಂ ಡಿ.ಕೆ.ಶಿವಕುಮಾರ್ ಮೇಲಿನ ಸಿಬಿಐ ಕೇಸ್ ವಾಪಸ್ ವಿಚಾರದಲ್ಲಿ ಪ್ರತಿಪಕ್ಷಗಳು ಅಷ್ಟೇನು ಗಂಭೀರ ಚರ್ಚೆ ನಡೆಸಲಿಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ವೈಫಲ್ಯದ ಬಗ್ಗೆಯೂ ಧ್ವನಿ ಎತ್ತಲಿಲ್ಲ. ಬರ ಪರಿಸ್ಥಿತಿ ಕುರಿತು ರೈತರ ವಿಚಾರವಾಗಿ ನಿರೀಕ್ಷೆಯಷ್ಟು ಚರ್ಚೆ ಆಗಿಲ್ಲ. ರೈತರಿಗೆ ಹೆಚ್ಚು ವಿದ್ಯುತ್ ನೀಡುವ ವಿಚಾರ ಚರ್ಚೆ ಆಗಿಲ್ಲ. ನೀರಾವರಿ ಸಮಸ್ಯೆ ಬಗ್ಗೆ ಹೆಚ್ಚು ಚರ್ಚೆ ಆಗಿಲ್ಲ. ಉತ್ತರ ಕನ್ನಡ ಭಾಗದ ರಸ್ತೆ ಸಮಸ್ಯೆ, ಶಾಲೆ ಅಭಿವೃದ್ಧಿ, ಮೂಲ ಸೌಕರ್ಯಗಳು. ಅದೇ ರೀತಿ ಕಿತ್ತೂರು ಕರ್ನಾಟಕ ಭಾಗಕ್ಕೆ 371(j) ವಿಶೇಷ ಸ್ಥಾನಮಾನ ಕಲ್ಪಿಸುವ ವಿಚಾರವೂ ಹೆಚ್ಚು ಚರ್ಚೆಗೆ ಬರಲಿಲ್ಲ.
ಸಾವರ್ಕರ್ ಫೋಟೋ ವಿಚಾರ ಸದನದಲ್ಲಿ ಅಷ್ಟೇನು ಸದ್ದು ಮಾಡಲಿಲ್ಲ. ಉತ್ತರ ಕರ್ನಾಟಕದ ಎಲ್ಲ ಭಾಗದ ಚರ್ಚೆ ಸಂಪೂರ್ಣವಾಗಿ ಆಗಿಲ್ಲ. ನೀರಾವರಿ, ಕೈಗಾರಿಗೆ ಬಗ್ಗೆ ಹೆಚ್ಚು ಚರ್ಚೆ ಆಗಿಲ್ಲ. ಸಭಾತ್ಯಾಗದ ವಿಚಾರವಾಗಿಯೇ ಹೆಚ್ಚು ಸಮಯ ವ್ಯರ್ಥವಾಗಿದ್ದು, ಕಬ್ಬು ಬೆಳಗಾರರಿಗೆ ಶಾಶ್ವತ ಪರಿಹಾರ ಚರ್ಚೆ ಆಗಿಲ್ಲ.
ಏನೆಲ್ಲ ಚರ್ಚೆಯಾಯ್ತು?
ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ 2 ದಿನವಷ್ಟೇ ಈ ಬಾರಿ ಚರ್ಚೆ ಸೀಮಿತವಾಗಿದೆ. ಸಚಿವ ಜಮೀರ್ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಿದ್ದು, ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಕೋಟಿ ನೀಡುವ ಸಿಎಂ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದ್ದು, ಕಬ್ಬು ಬೆಳಗಾರರಿಗೆ ಬೆಂಬಲ ಬೆಲೆ ಘೋಷಣೆ ಕುರಿತು ಚರ್ಚೆ ಜೋರಾಗಿತ್ತು.
ಬಿಜೆಪಿ ಮುಖಂಡ ಮಣಿಕಂಠ ರಾಥೋಡ್, ಪೃಥ್ವಿ ಸಿಂಗ್ ಮೇಲಿನ ಹಲ್ಲೆ ಪ್ರಕರಣವೂ ಪ್ರತಿಧ್ವನಿಸಿತು. ಬ್ರ್ಯಾಂಡ್ ಬೆಂಗಳೂರು ವಿಚಾರ, ಭ್ರೂಣ ಹತ್ಯೆ ಪ್ರಕರಣ, ಸಂಸತ್‌ನಲ್ಲಿನ ಭದ್ರತಾ ವೈಫಲ್ಯಗಳು ಕುರಿತು ಚರ್ಚೆ ನಡೆದಿವೆ. ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಬಿಡುಗಡೆ ವಿಳಂಬ ಹಾಗೂ ಕಾರ್ಖಾನೆಗಳು ರೈತರಿಗೆ ಕಬ್ಬಿನ ತೂಕದಲ್ಲಿ ಮೋಸ ಮಾಡ್ತಿರುವುದರ ಬಗ್ಗೆ ಚರ್ಚೆಯಾಗಿದೆ. ಬೆಳೆ ಪರಿಹಾರ ಸಂಬಂಧ ಚರ್ಚೆ ನಡೆದಿದೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದಿದ್ದರೆ ಸುವರ್ಣಸೌಧ ಏಕೆ? ಹೆಚ್ ವಿಶ್ವನಾಥ್ ಕಿಡಿ
202ರ 10 ದಿನಗಳ ಕಾಲ ನಡೆದ ಚಳಿಗಾಲದ ಅಧಿವೇಶನ ಇಂದಿಗೆ ಮುಕ್ತಾಯವಾಗಲಿದೆ. ಆದರೆ, ಚರ್ಚೆಯಾದ ವಿಷಯಗಳ ಬಗ್ಗೆ ಸರ್ಕಾರ ಏನಾದರೂ ತೀರ್ಮಾನ ಕೈಗೊಳ್ಳುತ್ತದೆಯೇ? ಎಂಬುದರ ಮೇಲೆ ಅಧಿವೇಶನದ ಸಾರ್ಥಕತೆ ನಿಂತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ