ಬೆಂಗಳೂರು: ಜ್ವರದಿಂದ ಬಳಲುತ್ತಿರುವ ಮಾಜಿ ಸಿಎಂ ಎಸ್.ಎಂ.ಕೃಷ್ಣ(SM Krishna) ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ(Manipal Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜ್ವರ ಹೆಚ್ಚಾಗಿದ್ದ ಹಿನ್ನೆಲೆ ನಿನ್ನೆ(ಸೆಂ.24) ರಾತ್ರಿ ಹಳೇ ಮದ್ರಾಸ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರನ್ನು ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ತೀವ್ರವಾದ ಉಸಿರಾಟದ ಸೋಂಕು ಇದೆ ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ. ಇನ್ನು ಎಸ್.ಎಂ.ಕೃಷ್ಣ ಅವರು ಮೈಸೂರು HOD ಶ್ವಾಸಕೋಶಶಾಸ್ತ್ರ, ಡಾ ಸತ್ಯನಾರಾಯಣ ಮತ್ತು ಡಾ ಸುನೀಲ್ ಕಾರಂತ್ ಅವರ ನೇತೃತ್ವದ ತಂಡದಿಂದ ಚಿಕಿತ್ಸೆ ಪಡೆಯುತ್ತಿದ್ದು ತೀವ್ರ ನಿಗಾ ಮತ್ತು ವಿಶಾಲವಾದ ವಿಶೇಷ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ. ಅವರ ಆರೋಗ್ಯ ಸ್ಥಿತಿಯನ್ನು ಆರೋಗ್ಯ ಸಚಿವ ಡಾ ಸುಧಾಕರ್ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಎಸ್.ಎಂ. ಕೃಷ್ಣ ರವರಿಗೆ ನಿನ್ನೆ ರಾತ್ರಿ ಜ್ವರ ಕಾಣಿಸಿಕೊಂಡ ಕಾರಣ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋವಿಡ್ ಹಾಗೂ ಜ್ವರಕ್ಕೆ ಸಂಬಂಧಿಸಿದ ಕೆಲವು ಪರೀಕ್ಷೆಗಳನ್ನು ಮಾಡಿ ಯಾವುದೇ ತೊಂದರೆ ಇಲ್ಲವೆಂಬ ಮಾಹಿತಿಯನ್ನು ವೈದ್ಯರು ತಿಳಿಸಿದ್ದಾರೆ. ಯಾವುದೇ ಊಹಾಪೊಹದ ಮಾಹಿತಿಗಳನ್ನು ಪ್ರಸಾರ ಮಾಡಬಾರದೆಂದು ಎಸ್ ಎಂ ಕೃಷ್ಣ ರವರ ಪರವಾಗಿ ಕೊರುತ್ತೇನೆ ಹಾಗೂ ಮಾಧ್ಯಮ ಮಿತ್ರರು ಆಸ್ಪತ್ರೆಯ ಬಳಿ ಮಾಹಿತಿಗಾಗಿ ಬರಬಾರದೆಂದು ಕೋರುತ್ತೇನೆ ಎಂದು ಎಸ್ ಎಂ ಕೃಷ್ಣ ಅವರ ಕಚೇರಿ ಪ್ರಕಟಣೆ ಹೊರಡಿಸಿದೆ.
ಎಸ್.ಎಂ.ಕೃಷ್ಣ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಮಾಜಿ ಸಿಎಂ S.M.ಕೃಷ್ಣ ಆರೋಗ್ಯ ವಿಚಾರಿಸಿದ್ದಾರೆ. ಸಿಎಂ ಜೊತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂಡ ಆಗಮಿಸಿದ್ರು. ಭೇಟಿ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಆರೋಗ್ಯದ ಬಗ್ಗೆ ಆತಂಕಬೇಡ. ಅವರು ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ವೈದೇಹಿ ಆಸ್ಪತ್ರೆಗೆ ಎಸ್.ಎಂ.ಕೃಷ್ಣರನ್ನ ದಾಖಲಿಸಲಾಗಿತ್ತು. ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮಣಿಪಾಲ್ಗೆ ದಾಖಲಿಸಲಾಗಿದೆ. ನಿರಂತರ ಚಿಕಿತ್ಸೆಯಿಂದ ಎಸ್.ಎಂ.ಕೃಷ್ಣ ಚೇತರಿಸಿಕೊಳ್ಳುತ್ತಿದ್ದಾರೆ. 2-3 ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:41 am, Sun, 25 September 22