ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆಯುವ ಕರಗದಲ್ಲಿ (Karaga) ಮುಸ್ಲಿಮರಿಗೆ ಮಳಿಗೆ ಹಾಕಲು ಬಿಡಲ್ಲ ಅಂತ ಕರಗ ಉತ್ಸವದ ಮಾಜಿ ಅಧ್ಯಕ್ಷ ಗೋಪಿ ಹೇಳಿಕೆ ನೀಡಿದ್ದಾರೆ. ಧರ್ಮರಾಯಸ್ವಾಮಿ ದೇಗುಲದ ಕರಗ ಉತ್ಸವದ ಮಾಜಿ ಅಧ್ಯಕ್ಷ ಗೋಪಿ ಮಾತನಾಡಿ, ಮೈಸೂರು ಮಹಾರಾಜರ ಕಾಲದಿಂದಲೂ ಕರಗ ಉತ್ಸವದಲ್ಲಿ ದೇಗುಲದ ಸುತ್ತ ಮುಸ್ಲಿಮರು ವ್ಯಾಪಾರ ಮಾಡುವ ಹಾಗಿಲ್ಲ. ಅಂದಿನಿಂದಲೂ ಇದು ನಡೆದುಕೊಂಡು ಬರುತ್ತಿದೆ. ಈಗ ಅವರಿಗೆ ಅಂಗಡಿ ಹಾಕಲು ನಾವು ಬಿಡೋದಿಲ್ಲ ಎಂದಿದ್ದಾರೆ.
ಮಾರಿಕಾಂಬ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬ್ಯಾನ್:
ಶಿವಮೊಗ್ಗದ ಪ್ರಸಿದ್ಧ ಮಾರಿಕಾಂಬ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಿದ್ದಾರೆ. ಇಂದು ಜಾತ್ರೆಯ ಕೊನೆಯ ದಿನ. ಆದರೆ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡದಂತೆ ಬ್ಯಾನ್ ಮಾಡಿದ್ದಾರೆ.
ಮೈಸೂರಿಗೂ ಕಾಲಿಟ್ಟ ವ್ಯಾಪಾರ ನಿರ್ಬಂಧ:
ಮುಸ್ಲಿಮರ ವ್ಯಾಪಾರ ನಿರ್ಬಂಧ ಮೈಸೂರಿಗೂ ಕಾಲಿಟ್ಟಿದೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮುಸ್ಲಿಮರಿಂದ ವ್ಯಾಪಾರ ಆಗುತ್ತಿತ್ತು. ಮುಸ್ಲಿಮರ ವ್ಯಾಪಾರದ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಿ ಅಂತ ಧಾರ್ಮಿಕ ದತ್ತಿ ಇಲಾಖೆಗೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.
ರೋಹಿಣಿ ಸಿಂಧೂರಿಗೆ ಮನವಿ:
ಹಿಜಾಬ್ ತೀರ್ಪು ಹೊರ ಬೀಳುತ್ತಿದ್ದಂತೆ ಕೆಲ ಮುಸ್ಲಿಂ ವರ್ತಕರು ತೀರ್ಪನ್ನು ವಿರೋಧಿಸಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ್ದರು. ಕರ್ನಾಟಕ ಬಂದ್ಗೆ ಕರೆ ನೀಡಿದ್ದರು. ಹೀಗಾಗಿ ಹಿಂದೂ ಸಂಘಟನೆಗಳು ಮುಸ್ಲಿಮರಿಗೆ ಹಿಂದೂ ಧಾರ್ಮಿಕ ಹಬ್ಬ, ಜಾತ್ರೆಗಳಲ್ಲಿ ಅಂಗಡಿಗಳನ್ನು ಇಡಲು ಅವಕಾಶ ನೀಡದಿರಲು ಮುಂದಾಗಿದ್ದಾರೆ. ಈಗಾಗಲೇ ಶಿವಮೊಗ್ಗ, ಮಂಗಳೂರು ಸೇರಿದಂತೆ ಅನೇಕ ಕಡೆ ಜಾತ್ರೆಗಳಲ್ಲಿ ಮುಸ್ಲಿಮರಿಗೆ ಅಂಗಡಿಗಳನ್ನು ಇಡಲು ಅವಕಾಶ ನಿರಾಕರಿಸಲಾಗಿದೆ. ಸದ್ಯ ಈಗ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಹಿಂದೂ ದೇವಸ್ಥಾನಗಳ ಜಾಗದಲ್ಲಿ ಹಿಂದೂಯೇತರರಿಗೆ ಅಂಗಡಿ- ಮುಗ್ಗಟ್ಟುಗಳನ್ನು ಹಾಕಲು ಅವಕಾಶ ನೀಡದಂತೆ ಕ್ರಮ ಜರುಗಿಸುವಂತೆ ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ, ರೋಹಿಣಿ ಸಿಂಧೂರಿ ಅವರಿಗೆ ಮನವಿ ಮಾಡಿದ್ದಾರೆ.
ಇನ್ನು ನಿನ್ನೆ ಮುಸ್ಲಿಮರಿಗೆ ಯಾವುದೇ ವಸ್ತು ಮಾರಾಟ ಮಾಡುವುದಿಲ್ಲ. ಹಿಂದೂಗಳಿಗೆ ಮಾತ್ರ ಮಾರಾಟ ಮಾಡೋದಾಗಿ ತಪ್ಪು ಸಂದೇಶ ಹಂಚಿರುವ ಘಟನೆ ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ನಡೆದಿದೆ. ಹಿಂದೂ ವ್ಯಾಪಾರಿಗಳ 32 ಅಂಗಡಿಗಳ ವಿರುದ್ಧ ತಪ್ಪು ಸಂದೇಶ ರವಾನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿರುವ ಅಂಗಡಿ ವಿರುದ್ಧ ತಪ್ಪು ಸಂದೇಶವನ್ನು ಸಾರುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಉಪ್ಪಿನಂಗಡಿ ಠಾಣೆಗೆ ದೂರು ನೀಡಲಾಗಿದೆ.
ಇದನ್ನೂ ಓದಿ
ಉತ್ತರ ಕನ್ನಡ: ಕಾಡಾನೆ ಹಿಂಡು ಪ್ರತ್ಯಕ್ಷ; ತೋಟಕ್ಕೆ ನುಗ್ಗಿ ಅಡಿಕೆ ಗಿಡಗಳಿಗೆ ಹಾನಿ ಮಾಡಿರುವ ಗಜ ಪಡೆ
ಶಾಲೆಯ ಪರೀಕ್ಷೆಯಲ್ಲಿ ಪುನೀತ್ ಬಗ್ಗೆ ಪ್ರಶ್ನೆ; ಸಖತ್ ವೈರಲ್ ಆಗಿದೆ ಪ್ರಶ್ನೆಪತ್ರಿಕೆಯ ಫೋಟೋ
Published On - 10:36 am, Sat, 26 March 22