ಬಾಡಿಗೆ ಬಾಕಿ ಉಳಿಸಿಕೊಂಡ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಲು ಕೋಲಾರ ನಗರ ಸಭೆ ಅಧಿಕಾರಿಗಳು ಅಂಗಡಿಗಳ ಬೀಗ ಒಡೆದರು!!

ಇನ್ನು ಉಳಿಗಾಲವಿಲ್ಲ ಎನ್ನುವದನ್ನು ಮನಗಂಡ ವ್ಯಾಪಾರಿಗಳು, ಕೊಂಚ ಕಾಲಾವಕಾಶ ಕೊಡಿ ಅಂತ ಅಧಿಕಾರಿಗಳನ್ನು ಅಂಗಲಾಚುತ್ತಿದ್ದಾರೆ. ಅದರೆ ಅವರ ಮಾತು ಕೇಳಲು ನಗರ ಸಭೆ ಸಿಬ್ಬಂದಿ ಸುತಾರಾಂ ತಯಾರಿಲ್ಲ. ಏತನ್ಮಧ್ಯೆ, ವ್ಯಾಪಾರಿ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆದಿದೆ.

ಬಾಡಿಗೆ ಬಾಕಿ ಉಳಿಸಿಕೊಂಡ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಲು ಕೋಲಾರ ನಗರ ಸಭೆ ಅಧಿಕಾರಿಗಳು ಅಂಗಡಿಗಳ ಬೀಗ ಒಡೆದರು!!
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 01, 2022 | 12:27 AM

ಪುರಸಭೆ, (Town Municipal Council) ನಗರ ಸಭೆ (City Corporation), ಮಹಾನಗರ ಪಾಲಿಕೆಗಳು (Palike) ಆದಾಯದ ಹಿನ್ನೆಲೆಯಿಂದ ತಮ್ಮ ಒಡೆತನದ ಸ್ಥಳಗಳಲ್ಲಿ ಅಂಗಡಿ ಮುಂಗಟ್ಟು, ಶಾಪಿಂಗ್ ಕಾಂಪ್ಲೆಕ್ಸ್ಗಳನ್ನು ನಿರ್ಮಿಸಿ ಬಾಡಿಗೆಗೆ ನೀಡುವುದು ಎಲ್ಲ ಕಡೆಗಳಲ್ಲಿ ಕಂಡುಬರುವ ಸಂಗತಿ. ಅಂಗಡಿಗಳನ್ನು ಬಾಡಿಗೆಗೆ ತೆಗೆದುಕೊಂಡವರು ಪ್ರತಿ ತಿಂಗಳು ನಿಯಮಿತವಾಗಿ, ಸರಿಯಾದ ಸಮಯಕ್ಕೆ ಬಾಡಿಗೆ ಪೌರಾಡಳಿತ ಸಂಸ್ಥೆಗಳಿಗೆ ಸಂದಾಯ ಮಾಡುವುದಿಲ್ಲ ಅನ್ನೋದು ಬೇರೆ ವಿಷಯ. ಅದೇ ಖಾಸಗಿಯವರಿಂದ ಬಾಡಿಗೆ ಪಡೆದಿದ್ದರೆ, ತೆಪ್ಪಗೆ ಕೊಡಬೇಕಿರುವ ಮೊತ್ತವನ್ನು ಸಂದಾಯ ಮಾಡುತ್ತಾರೆ. ಇಲ್ಲಿದಿದ್ದರೆ, ಮಾಲೀಕ ಅಂಗಡಿ ಮುಂದೆ ಬಂದು ರಂಪಾಟ ಮಾಡುತ್ತಾನೆ. ನಿಮಗೆ ಇಲ್ಲಿ ಕೋಲಾರ ನಗರದ ದೃಶ್ಯವನ್ನು ತೋರಿಸುತ್ತಿದ್ದೇವೆ. ಗಲಾಟೆಯಂಥ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಜಗಳ ನಡೆಯುತ್ತಿರುವುದು ಕೋಲಾರ ನಗರಸಭೆ ಸಿಬ್ಬಂದಿ ಮತ್ತು ಅದರ ಅಂಗಡಿಗಳನ್ನು ಬಾಡಿಗೆ ಪಡೆದ ವ್ಯಾಪಾರಸ್ಥರ ನಡುವೆ. ಈ ವ್ಯಾಪಾರಿಗಳು ಕೆಲ ತಿಂಗಳುಗಳಿಂದ ಬಾಡಿಗೆ ನೀಡಿಲ್ಲ. ಹಣ ಸಂದಾಯ ಮಾಡುವಂತೆ ಅಧಿಕಾರಿಗಳು ವ್ಯಾಪಾರಸ್ಥರಿಗೆ ಹಲವಾರು ಬಾರಿ ನೋಟಿಸ್ ನೀಡಿದ್ದಾರೆ. ಅದರೆ, ವ್ಯಾಪಾರಿಗಳು ಅವುಗಳನ್ನು ಕಡೆಗಣಿಸುತ್ತಾ ಬಂದಿದ್ದಾರೆ.ಬೇಸತ್ತ ನಗರಸಭೆ ಅಧಿಕಾರಿಗಳು ಸೋಮವಾರದಂದು ಅಂಗಡಿಗಳನ್ನು ಖಾಲಿ ಮಾಡಿಸುವ ಉದ್ದೇಶದಿಂದ ಪೊಲೀಸರೊಂದಿಗೆ ಇಲ್ಲಿಗೆ ಬಂದಿದ್ದಾರೆ.

ಅಧಿಕಾರಿಗಳು ಬರುತ್ತಿರುವ ಸುಳಿವು ಸಿಕ್ಕ ಕೂಡಲೇ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಬೀಗ ಹಾಕಿದ್ದಾರೆ. ಆದರೆ, ಅಧಿಕಾರಿಗಳು ಬೀಗಗಳನ್ನು ಮುರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕೆಲವು ಅಂಗಡಿಗಳ ಬೀಗ ಒಡೆಯುತ್ತಿರುವುದು ನಿಮಗೆ ವಿಡಿಯೋ ನಲ್ಲಿ ಕಾಣಿಸುತ್ತದೆ.

ಇನ್ನು ಉಳಿಗಾಲವಿಲ್ಲ ಎನ್ನುವದನ್ನು ಮನಗಂಡ ವ್ಯಾಪಾರಿಗಳು, ಕೊಂಚ ಕಾಲಾವಕಾಶ ಕೊಡಿ ಅಂತ ಅಧಿಕಾರಿಗಳನ್ನು ಅಂಗಲಾಚುತ್ತಿದ್ದಾರೆ. ಅದರೆ ಅವರ ಮಾತು ಕೇಳಲು ನಗರ ಸಭೆ ಸಿಬ್ಬಂದಿ ಸುತಾರಾಂ ತಯಾರಿಲ್ಲ. ಏತನ್ಮಧ್ಯೆ, ವ್ಯಾಪಾರಿ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆದಿದೆ.

ಅಂತಿಮವಾಗಿ ವ್ಯಾಪಾರಸ್ಥರು ಹಾಕಿದ ಬೀಗಗಳನ್ನು ಮುರಿದು ನಗರ ಸಭೆ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:  ಕೋಲಾರ: ಜೀವಂತ ರೈತನಿಗೆ ಮರಣ ಪ್ರಮಾಣಪತ್ರ! ಇದು ಅಧಿಕಾರಿಗಳ ಎಡವಟ್ಟೋ ದುರುದ್ದೇಶದ ಕೃತ್ಯವೋ?

Follow us