ಕಬ್ಬಿನ ಗದ್ದೆಯಲ್ಲಿ ಹೊತ್ತಿ ಉರಿಯಿತು ಲಾರಿ, ಸ್ಟಾರ್ಟ್ ಮಾಡುವಾಗ ಸಿಡಿದ ಕಿಡಿ ವಾಹನವನ್ನು ಸುಟ್ಟುಬಿಟ್ಟಿತು!

ಕಬ್ಬಿನ ಗದ್ದೆಯಲ್ಲಿ ಹೊತ್ತಿ ಉರಿಯಿತು ಲಾರಿ, ಸ್ಟಾರ್ಟ್ ಮಾಡುವಾಗ ಸಿಡಿದ ಕಿಡಿ ವಾಹನವನ್ನು ಸುಟ್ಟುಬಿಟ್ಟಿತು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 31, 2022 | 9:44 PM

ಲಾರಿಯನ್ನು ಸ್ಟಾರ್ಟ್ ಮಾಡುವ ಸಂದರ್ಭದಲ್ಲಿ ಸ್ಪಾರ್ಕ್ ಅಗಿ ಬೆಂಕಿ ಹೊತ್ತಿಕೊಂಡಿರುವ ಉದಾಹರಣೆಗಳು ಬಹಳ ಕಡಿಮೆ. ಸೋಮನಕುಪ್ಪೆಯಲ್ಲಿ ನಡೆದ ಘಟನೆಯ ಒಂದು ಸಮಾಧಾನಕರ ಸಂಗತಿಯೆಂದರೆ, ಯಾರೊಬ್ಬರಿಗೂ ಪ್ರಾಣಾಪಾಯವಾಗಿಲ್ಲ.

ಬೆಂಕಿ ಅವಘಡ (Fire Mishap) ಸುದ್ದಿಗಳು ಹೆಚ್ಚುತ್ತಿವೆ ಮಾರಾಯ್ರೇ. ಕಳೆದ ವಾರವಷ್ಟೇ ನಾವು ಬಾಗಲಕೋಟೆ (Bagalkote) ಜಿಲ್ಲೆ ಮುಧೋಳ ತಾಲ್ಲೂಕಿನಲ್ಲಿರುವ ಮಿರ್ಜಿ ಗ್ರಾಮದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದ ವಿಡಿಯೋವನ್ನು ನಿಮಗೆ ತೋರಿಸಿದ್ದೆವು. ಬಾಗಲಕೋಟೆಗೆ ಹತ್ತಿರದ ಜಿಲ್ಲೆ ಧಾರವಾಡದಿಂದ (Dharwad) ಬೆಂಕಿ ಆಕಸ್ಮಿಕದ ವಿಡಿಯೋವೊಂದು ನಮಗೆ ಲಭ್ಯವಾಗಿದೆ. ಇದು ಸಹ ಕಬ್ಬಿನ ಗದ್ದೆಯಲ್ಲಿ ನಡೆದಿರುವುದು ವಿಶೇಷ. ಆದರೆ ಬೆಂಕೊ ಹೊತ್ತಿಕೊಂಡಿದ್ದು ಕಬ್ಬಿಗಲ್ಲ ಆದರೆ, ಕಟಾವು ಮಾಡಿದ ಕಬ್ಬನ್ನು (sugarcane) ಲೋಡ್ ಮಾಡಿಕೊಂಡು ಹೋಗಲು ಬಂದಿದ್ದ ಒಂದು ನತದೃಷ್ಟ ಲಾರಿ. ಲಾರಿಯನ್ನು ಸ್ಟಾರ್ಟ್ ಮಾಡುವ ಸಂದರ್ಭದಲ್ಲಿ ಸ್ಪಾರ್ಕ್ ಆಗಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಘಟನೆ ನಡೆದಿರುವುದು ಕಘಟಗಿ ತಾಲ್ಲೂಕಿನ ಸೋಮನಕುಪ್ಪೆ ಹೆಸರಿನ ಊರಿನಲ್ಲಿರುವ ಕಬ್ಬಿನ ಗದ್ದೆಯೊಂದರಲ್ಲಿ. ಬೆಂಕಿ ಹೊತ್ತಿಕೊಂಡ ಕೂಡಲೇ ಲಾರಿ ಧಗಧಗ ಉರಿಯಲಾರಂಭಿಸಿ ನೋಡುನೋಡುತ್ತಿದ್ದಂತೆ ವಾಹನದ ಮುಕ್ಕಾಲು ಭಾಗ ಅಗ್ನಿಗೆ ಆಹುತಿಯಾಗಿದೆ.

ಕಬ್ಬಿನ ಗದ್ದೆಯ ಮಾಲೀಕ ಕಲಘಟಗಿಯಲ್ಲಿರುವ ಅಗ್ನಿಶಾಮಕ ದಳದ ಕಚೇರಿಗೆ ಫೋನ್ ಮಾಡಿದ್ದಾರೆ. ಫೈರ್ ಎಂಜಿನ್ ಅಲ್ಲಿಗೆ ಧಾವಿಸಿ ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿದೆಯಾದರೂ ಲಾರಿಯ ಬಹುಪಾಲು ಸುಟ್ಟುಹೋಗಿದೆ.

ಲಾರಿಯನ್ನು ಸ್ಟಾರ್ಟ್ ಮಾಡುವ ಸಂದರ್ಭದಲ್ಲಿ ಸ್ಪಾರ್ಕ್ ಅಗಿ ಬೆಂಕಿ ಹೊತ್ತಿಕೊಂಡಿರುವ ಉದಾಹರಣೆಗಳು ಬಹಳ ಕಡಿಮೆ. ಸೋಮನಕುಪ್ಪೆಯಲ್ಲಿ ನಡೆದ ಘಟನೆಯ ಒಂದು ಸಮಾಧಾನಕರ ಸಂಗತಿಯೆಂದರೆ, ಯಾರೊಬ್ಬರಿಗೂ ಪ್ರಾಣಾಪಾಯವಾಗಿಲ್ಲ.

ಹಾಗೆಯೇ, ಪಕ್ಕದಲ್ಲೇ ಇರುವ ಕಬ್ಬಿನ ಗದ್ದೆಗೂ ಯಾವುದೇ ಹಾನಿಯಾಗಿಲ್ಲ. ಕಬ್ಬು ಲಾರಿಯಲ್ಲಿ ಲೋಡ್ ಅಗಿತ್ತೋ ಇಲ್ಲವೋ ಅನ್ನೋದು ಖಚಿತಪಟ್ಟಿಲ್ಲ.

ಇದನ್ನೂ ಓದಿ: ಮುಧೋಳ ಸಮೀಪ ಕಬ್ಬಿನಗದ್ದೆಗೆ ಬಿದ್ದ ಬೆಂಕಿ ಆರಿಸಲು ಅಗ್ನಿ ಶಾಮಕದಳ ಹರಸಾಹಸ ಪಡಬೇಕಾಯಿತು!