ಬೆಂಗಳೂರು ನ.20: ಅನ್‌ಬಾಕ್ಸಿಂಗ್ ಬೆಂಗಳೂರು ಫೌಂಡೇಶನ್ ವತಿಯಿಂದ ಮುಂದಿನ ತಿಂಗಳು ನಗರದಾದ್ಯಂತ ನಡೆಯಲಿರುವ ‘ಬೆಂಗಳೂರು ಹಬ್ಬ’ಕ್ಕೆ (Bengaluru Habba) ಪಾಲಿಕೆಯ ಎಲ್ಲ ವಲಯಗಳು ಎಲ್ಲ ರೀತಿಯ ಸಹಕಾರ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಅಧಿಕಾರಿಗಳಿಗೆ ಸೂಚಿಸಿದರು.
ಈ ಕುರಿತು ಶನಿವಾರ ನಡೆದ ವರ್ಚುವಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಹಬ್ಬವನ್ನು ಡಿಸೆಂಬರ್‌ನಲ್ಲಿ ಆಚರಿಸಲಾಗುತ್ತಿದ್ದು, ಇದಕ್ಕೆ ಬೇಕಾದ ಸಹಕಾರವನ್ನು ಎಲ್ಲ ವಲಯ ಪಾಲಿಕೆಗಳು ನೀಡಬೇಕು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯಾ ವಲಯ ಆಯುಕ್ತರು ಹಾಗೂ ವಲಯ ಜಂಟಿ ಆಯುಕ್ತರಿಗೆ ಸೂಚಿಸಿದರು.
ಜಂಕ್ಷನ್‌ಗಳು, ಫ್ಲೈಓವರ್‌ಗಳು, ಉದ್ಯಾನವನಗಳು ಮತ್ತು ಮಾರುಕಟ್ಟೆಗಳಂತಹ ಪ್ರಮುಖ ಸ್ಥಳಗಳನ್ನು ಗುರುತಿಸಲಾಗುತ್ತದೆ. ಪಾರಂಪರಿಕ ಕಟ್ಟಡಗಳು ಮತ್ತು ಪ್ರಮುಖ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಗಳಿಂದ ಶೃಂಗರಿಸಬೇಕು. ಮತ್ತು ಈ ಎಲ್ಲಾ ಸ್ಥಳಗಳಲ್ಲಿ ಹೆಚ್ಚಿನ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು.
ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕೆ ಸಮಿತಿ ರಚನೆ : ಡಿಎಸಿಂ ಡಿಕೆ ಶಿವಕುಮಾರ್
ಬೆಂಗಳೂರು ಹಬ್ಬ ನಿರ್ದೇಶಕ ವಿ ರವಿಚಂದರ್ ಮಾತನಾಡಿ, ಅನ್‌ಬಾಕ್ಸಿಂಗ್ ಬೆಂಗಳೂರು ಫೌಂಡೇಶನ್ ವತಿಯಿಂದ ಡಿಸೆಂಬರ್ 1 ರಿಂದ 11 ರವರೆಗೆ ‘ಅನ್‌ಬಾಕ್ಸಿಂಗ್ ಬಿಎಲ್‌ಆರ್ ಹಬ್ಬ’ವನ್ನು ಆಚರಿಸಲಾಗುತ್ತಿದ್ದು, ಇದನ್ನು 12 ವಿಭಾಗಗಳಾಗಿ ವಿಂಗಡಿಸಲಾಗಿದೆ. ಉತ್ಸವಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು ಮತ್ತು ನಾಗರಿಕರು ಉತ್ಸವದ ಬಗ್ಗೆ ವಿವರಗಳನ್ನು https://habba.unboxingblr.com ನಲ್ಲಿ ಪಡೆಯಬಹುದು ಮತ್ತು ನೋಂದಾಯಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಡಿಸೆಂಬರ್ 1 ರಿಂದ 11ರ ವರೆಗೆ ಬೆಂಗಳೂರು ಅನ್‌ಬಾಕ್ಸಿಂಗ್ ಬಿಎಲ್‌ಆರ್ ಹಬ್ಬ 2023 ನಡೆಯಲಿದೆ ಇದು ಕಲೆ, ಸಂಸ್ಕೃತಿ, ಸಾಹಿತ್ಯ, ಪರಂಪರೆ, ತಂತ್ರಜ್ಞಾನ, ಪರಿಸರ, ವಿನ್ಯಾಸ, ನೃತ್ಯ, ಸಂಗೀತ ಮತ್ತು ರಂಗಭೂಮಿಗೆ ಸಂಬಂಧಿಸಿದ 300 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹೊಂದಿರುತ್ತದೆ.
Published On - 8:02 am, Mon, 20 November 23